ಬೆಂಗಳೂರು: “ಡೀಮ್ಡ್ ಫಾರೆಸ್ಟ್’ ಎಂಬ ಉಲ್ಲೇಖ ಅಥವಾ ವ್ಯಾಖ್ಯಾನವೇ ಅರಣ್ಯ ಸಂರಕ್ಷಣಾ ಕಾಯ್ದೆ-1980ರಲ್ಲಿ ಇಲ್ಲದಿರುವಾಗ ಸರ್ಕಾರದ ಡೀಮ್ಡ್ ಫಾರೆಸ್ಟ್’ ಪರಿಕಲ್ಪನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕಲ್ಲುಗಣಿಗಾರಿಕೆ ಪರವಾನಿಗೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಅರೆನೂರು ಗ್ರಾಮದ ಡಿ.ಎಂ. ದೇವೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ರೀತಿ ಹೇಳಿದೆ.
ಡೀಮ್ಡ್ ಫಾರೆಸ್ಟ್ಗೆ ಸಂಬಂಧಿಸಿದಂತೆ ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ 2019ರ ಜೂ.12ರಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸ್ಪಷ್ಟ ತೀರ್ಪು ನೀಡಿದೆ. ಅದನ್ನೇ ಈಗಲೂ ಪುರುತ್ಛರಿಸಸಲಾಗಗುತ್ತಿದೆ. ಅಲ್ಲದೇ ಈ ಪ್ರಕರಣ ಹೈಕೋರ್ಟ್ ಈಗಾಗಲೇ ನೀಡಿರುವ ತೀರ್ಪಿಗೆ ಒಳಪಡುತ್ತದೆ ಎಂದು ಈ ಪ್ರಕರಣದಲ್ಲಿ ಅರ್ಜಿದಾರರ ಪರ ಮತ್ತು ಸರ್ಕಾರದ ಪರ ಇಬ್ಬರೂ ವಕೀಲರು ಒಪ್ಪಿಕೊಂಡಿದ್ದಾರೆ.
ಆದ್ದರಿಂದ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಾಗುತ್ತಿದೆ. ಹಾಗಾಗಿ, ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಹಿಂದೆ ನೀಡಿರುವ ತೀರ್ಪಿನ ಪಾಲನೆ ಆಗಬೇಕು ಎಂದು ಆದೇಶಿಸಿದೆ.
Related Articles
ಈ ಹಿಂದೆ 2019ರ ಜೂ. 12ರಂದು ಧನಂಜಯ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಡೀಮ್ಡ್ ಫಾರೆಸ್ಟ್ ಕುರಿತಂತೆ ಹೈಕೋರ್ಟ್ ವಿಭಾಗೀಯಪೀಠ ಸ್ಪಷ್ಟ ತೀರ್ಪು ನೀಡಿದೆ. ಹಾಗಾಗಿ ಮತ್ತೆ ಆ ವಿಚಾರದಲ್ಲಿ ನ್ಯಾಯಾಲಯ ವ್ಯಾಖ್ಯಾನ ನೀಡುವುದಿಲ್ಲ. ಹಿಂದಿನ ಆದೇಶದಂತೆ ‘ಅರಣ್ಯ’ ಮತ್ತು ‘ಅರಣ್ಯ ಭೂಮಿ’ ಎಂಬುದುದಷ್ಟೇ ಕಾಯ್ದೆಯಲ್ಲಿ ಉಲ್ಲೇಖವಿದೆ, ಆದರೆ ಡೀಮ್ಡ್ ಫಾರೆಸ್ಟ್ ಎಂಬ ಉಲ್ಲೇಖ ಕಾಯ್ದೆಯಲ್ಲಿ ಎಲ್ಲೂ ಇಲ್ಲ ಹಾಗಾಗಿ ಡೀಮ್ಡ್ ಫಾರೆಸ್ಟ್ ಎಂಬ ಪರಿಕಲ್ಪನೆಯನ್ನು ಮಾನ್ಯ ಮಾಡಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ.
ಎರಡು ತಿಂಗಳಲ್ಲಿ ಪರಿಗಣಿಸಿ:
ಅರ್ಜಿದಾರರು ಕಲ್ಲು ಕ್ವಾರಿ ನಡೆಸಲು ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಎರಡು ತಿಂಗಳಲ್ಲಿ ಹೊಸದಾಗಿ ಪರಿಶೀಲಿಸುವಂತೆ ಆದೇಶಿಸಿರುವ ಹೈಕೋರ್ಟ್, ಅರ್ಜಿ ಪರಿಗಣಿಸುವಾಗ ಸುಪ್ರೀಂಕೋರ್ಟ್ 1997ರಲ್ಲಿ ಟಿ.ಎನ್.ಗೋದಾವರ್ಮನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ಅರ್ಜಿದಾರರು ಕಲ್ಲುಗಣಿಗಾರಿಕೆಗೆ ಪರವಾನಿಗೆ ಕೋರಿರುವ ಭೂಮಿ ಅರಣ್ಯವೇ ಅಥವಾ ಅರಣ್ಯ ಪ್ರದೇಶವೇ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಸ್ಪಷ್ಟಪಡಿಸಿದೆ.
ಒಂದು ವೇಳೆ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿದಾರರು ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿರುವ ಪ್ರದೇಶ ಅರಣ್ಯ ಅಥವಾ ಅರಣ್ಯ ಪ್ರದೇಶ ಎಂದು ಕಂಡು ಬಂದರೆ, ಆಗ ಅರಣ್ಯ ಸಂರಕ್ಷಣಾ ಕಾಯ್ದೆ-1980 ಸೆಕ್ಷನ್ 2ರ ಪ್ರಕಾರ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಪಡೆಯುವವರೆಗೆ ಪರವಾನಗಿ ಅಥವಾ ಗುತ್ತಿಗೆ ನೀಡುವಂತಿಲ್ಲ ಎಂದೂ ಸಹ ನ್ಯಾಯಾಲಯ ಹೇಳಿದೆ.
ಅಲ್ಲದೆ, ಅರ್ಜಿದಾರರ ಅರ್ಜಿಯನ್ನು ಮರುಪರಿಶೀಲಿಸಿ ಯಾವುದೇ ನಿರ್ಧಾರ ಕೈಗೊಂಡರೂ ಸಹ ಅದನ್ನು ಅರ್ಜಿದಾರರ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.
ಅರ್ಜಿದಾರರು ತಮ್ಮ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಪರವಾನಗಿ ಕೋರಿದ್ದರು. ಆದರೆ ಚಿಕ್ಕಮಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಪರವಾನಗಿ ನೀಡಲಾಗದು ಎಂದು ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ಗೆ ಮೊರೆ ಹೋಗಿದ್ದರು.