Advertisement

ದೀಕ್ಷಭೂಮಿ ಪ್ರಯಾಣಕ್ಕೆ ಚಾಲನೆ

01:13 PM Oct 19, 2018 | |

ಬೆಂಗಳೂರು: ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ಮಹಾರಾಷ್ಟ್ರದ ನಾಗಪುರ ಬಳಿಯ ದೀಕ್ಷಭೂಮಿಯಲ್ಲಿ ನಡೆಯುವ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿರುವ ಸೌಲಭ್ಯದಡಿ 800 ಮಂದಿ 23 ಐರಾವತ ಬಸ್‌ಗಳಲ್ಲಿ ಬುಧವಾರ ನಗರದಿಂದ ಪ್ರಯಾಣ ಆರಂಭಿಸಿದರು.

Advertisement

ಪುಣ್ಯಭೂಮಿಯತ್ತ ಹೊರಟ ಬಸ್‌ಗಳಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ವಿಧಾನಸೌಧದ ಮುಂಭಾಗ ಬುಧವಾರ ಬೆಳಗ್ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದ ದಿನವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಲಕ್ಷಾಂತರ ಮಂದಿ ಪುಣ್ಯಭೂಮಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ನಾಗಪುರಕ್ಕೆ ಹೋಗುತ್ತಾರೆ. ಅದರಂತೆ ಬೆಂಗಳೂರು ಹಾಗೂ ಕಲಬುರಗಿಯಿಂದಲೂ ಸಾವಿರಾರು ಮಂದಿ ಪುಣ್ಯಭೂಮಿಗೆ ಹೋಗುತ್ತಾರೆ. ಆ ಹಿನ್ನೆಲೆಯಲ್ಲಿ 23 ಐರಾವತ ಬಸ್‌ಗಳಲ್ಲಿ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಲ್ಲಿ ಮೂರು ಬಸ್‌ಗಳು ಕಲಬುರಗಿಯಿಂದ ಹೊರಡಲಿವೆ ಎಂದು ಹೇಳಿದರು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಿದ್ಧಾಂತಗಳನ್ನು ಇಡೀ ವಿಶ್ವವೇ ಅನುಸರಿಸುತ್ತಿದೆ. ಈ ದಿನದ ಆಚರಣೆಗೆಂದು ಒಂದು ವಾರದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಹಜ್‌ ಮಾದರಿಯಲ್ಲಿ ಈ ಪುಣ್ಯಸ್ಥಳವೂ ಪ್ರಸಿದ್ಧಿ ಪಡೆಯಲಿದೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಶಾಸಕರನ್ನು ಕಡೆಗಣಿಸಿಲ್ಲ: ನಾಡಹಬ್ಬ ದಸರಾ ಉತ್ಸವ ಪಕ್ಷ ಮೀರಿದ ಆಚರಣೆಯಾಗಿದ್ದು, ಉತ್ಸವಕ್ಕೆ ಕಾಂಗ್ರೆಸ್‌ ಸಚಿವರು ಹಾಗೂ ಶಾಸಕರನ್ನು ಕಡೆಗಣಿಸಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾ ಉತ್ಸವಕ್ಕೆ ಗಣ್ಯರನ್ನು ಆಹ್ವಾನಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಮಿತಿ ರಚಿಸಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆದರೆ ಎಲ್ಲ ಗಣ್ಯರಿಗೆ ಕರೆ ಮಾಡಿ, ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಸಮಿತಿ ರಚಿಸದ ಕಾರಣ ಕಾಂಗ್ರೆಸ್‌ನ ಕೆಲ ಮುಖಂಡರಲ್ಲಿ ಬೇಸರವಿರಬಹುದು. ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಬಿಎಸ್‌ವೈ, ಶೋಭಾ ವಿಶ್ಲೇಷಣೆ ಬೇಕಿಲ್ಲ: ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಒಮ್ಮತದಿಂದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಐದೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಉಭಯ ಪಕ್ಷದ ಬೆಂಬಲ ಇರಲಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಬೆಂಬಲ ಉತ್ತಮವಾಗಿಯೇ ಇದೆ.

ನಮ್ಮ ಒಮ್ಮತದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ವಿಶ್ಲೇಷಣೆ ಬೇಕಾಗಿಲ್ಲ ಎಂದು ಕಿಡಿ ಕಾರಿದರು. ಬಳ್ಳಾರಿ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿರುವುದರಿಂದ ವಿ.ಎಸ್‌. ಉಗ್ರಪ್ಪ ಅವರನ್ನು ಕಣಕ್ಕಿಳಿಸಿದ್ದೇವೆ. ಉಗ್ರಪ್ಪ ಅವರು ಪಕ್ಷದ ಹಿರಿಯ ಮುಖಂಡರಾಗಿದ್ದು, ಈ ವಿಚಾರದಲ್ಲಿ ಜಾತಿವಾದ ಯಾವುದೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next