Advertisement

ವೈದ್ಯಕೀಯ ಕಾಲೇಜಿಗಾಗಿ ದೀಡ್‌ ನಮಸ್ಕಾರ!

12:24 PM May 03, 2022 | Team Udayavani |

ಬಾಗಲಕೋಟೆ: 2014-15ರಲ್ಲಿ ಬಾಗಲಕೋಟೆಗೆ ಘೋಷಣೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಕಳೆದ ಒಂದು ವರ್ಷದಿಂದ ವಿವಿಧ ರೀತಿಯ ಹೋರಾಟ ನಡೆಸುತ್ತಿರುವ ಕರವೇ ಕಾರ್ಯಕರ್ತರು ಸೋಮವಾರ ದೀಡ್‌ ನಮಸ್ಕಾರ ಹಾಕುವ ವಿನೂತನ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ|ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಶಾಸಕರ ನಿವಾಸದವರೆಗೆ ದೀಡ ನಮಸ್ಕಾರ ಹಾಕಿ ಪ್ರತಿಭಟಿಸಲು ಮುಂದಾದರು. ಈ ಹೋರಾಟ ಜಿಲ್ಲಾಡಳಿತ ಭವನದಿಂದ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ವೃತ್ತದವರೆಗೆ ಬರುವಷ್ಟರಲ್ಲಿ ಪೊಲೀಸರು ಎಲ್ಲ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಅಲ್ಲಿಂದ ಕಲಾದಗಿ ಪೊಲೀಸ್‌ ಠಾಣೆಗೆ ಕರೆದುಕೊಂಡು ಪ್ರತಿಯೊಬ್ಬರ ವಿವರ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಬೆಳಗ್ಗೆಯಿಂದ ಊಟ ಮಾಡದೇ ದೀಡ ನಮಸ್ಕಾರ ಹಾಕುವ ಹೋರಾಟದಲ್ಲಿ ಪಾಲ್ಗೊಂಡಿದ್ದ ಕರವೇ ಮುಖಂಡ ಆತ್ಮಾರಾಮ ನೀಲನಾಯಕ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು 108 ತುರ್ತು ವಾಹನದ ಮೂಲಕ ಬಾಗಲಕೋಟೆಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಈ ವೇಳೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ ಮಾತನಾಡಿ, ನಗರಕ್ಕೆ ಕಳೆದ ಏಳು ವರ್ಷಗಳ ಹಿಂದೆಯೇ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ನಗರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಎಲ್ಲ ರೀತಿಯ ಅನುಕೂಲವಿದೆ. ಆದರೆ, ಖಾಸಗಿ ಲಾಭಿ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುತ್ತಿಲ್ಲ. ಈ ವಿಷಯದಲ್ಲಿ ಬಾಗಲಕೋಟೆ ಶಾಸಕರಿಗೆ, ಸಚಿವರು, ಮುಖ್ಯಮಂತ್ರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದರಿಂದ ಈ ಭಾಗದ ಬಡ ಮಕ್ಕಳೂ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ಆದರೂ, ಬಡ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರ ವೈದ್ಯಕೀಯ ಕಾಲೇಜು ಆರಂಭಿಸುತ್ತಿಲ್ಲ. ಬಾಗಲಕೋಟೆಗೆ ಜಿಲ್ಲೆಗೆ ಘೋಷಣೆಯಾದ ಬಳಿಕ ಬೇರೆ ಬೇರೆ ಜಿಲ್ಲೆಗೆ ಘೋಷಣೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲಾಗಿದೆ. ನಮ್ಮ ಜಿಲ್ಲೆಗೆ ಮಾತ್ರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯ ಶಾಸಕರ ನಿರ್ಲಕ್ಷ್ಯವೂ ಕಾರಣ ಎಂದು ಆರೋಪಿಸಿದರು.

Advertisement

ಪಿಎಸ್‌ಅಮಾನತುಗೊಳಿಸಿ: ದೀಡ ನಮಸ್ಕಾರ ಹೋರಾಟದ ವೇಳೆ ನಮ್ಮನ್ನು ಬಂಧಿಸಿರುವ ನವನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ, ನಮ್ಮನ್ನು ದರೋಡೆಕೋರರಂತೆ ನಡೆಸಿಕೊಂಡಿದ್ದಾರೆ. ಕಲಾದಗಿ ಠಾಣೆವರೆಗೆ ಕರೆದೊಯ್ದು ಕೊಲೆ ಆರೋಪಿಗಳು, ದುಷ್ಕರ್ಮಿಗಳಿಂದ ಪಡೆಯುವಂತೆ ಹಲವು ರೀತಿಯ ಮಾಹಿತಿ ಪಡೆದಿದ್ದಾರೆ. ನಾವೆಲ್ಲ ಊಟ-ನೀರು ಕುಡಿದಿದ್ದೇವೋ ಇಲ್ಲವೋ ಎಂಬುದನ್ನೂ ವಿಚಾರಿಸಲಿಲ್ಲ. ಇದರಿಂದ ತೀವ್ರ ಅಸ್ವಸ್ಥಗೊಂಡ ಆತ್ಮಾರಾಮ ನೀಲನಾಯಕ ಅವರು, ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದಾರೆ. ಇದಕ್ಕೆ ನವನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಯೇ ನೇರ ಹೊಣೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.

ಕರವೇ ನಿಕಟಪೂರ್ವ ಅಧ್ಯಕ್ಷ, ಆಮ್‌ ಆದ್ಮಿ ಪಕ್ಷದ ಮುಖಂಡ ರಮೇಶ ಬದ್ನೂರ, ಭಾಗ್ಯಾ ಬೆಟಗೇರಿ, ಬಸವರಾಜ ಅಂಬಿಗೇರ, ಶಿಲ್ಪಾ ಕಾಳೆ, ರೋಹಿತ ಬಾರಕೇರ, ಡಿ.ಡಿ. ನದಾಫ, ದಾದಾಪೀರ ಶಿವಳ್ಳಿ, ಮೊಹ್ಮದಹುಸೇನ, ಪ್ರಶಾಂತ ನಾಯಕ, ರಮೇಶ ಗೌಡರ, ಆಕಾಶ ಆಸಂಗಿ, ದೇವೇಂದ್ರ ಅಸ್ಕಿ ಪಾಲ್ಗೊಂಡಿದ್ದರು.

ಬಾಗಲಕೋಟೆಗೆ ಕಳೆದ 2014-15ರಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗಿದೆ. ಅನುದಾನ ನೀಡದೇ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನಮ್ಮ ಜಿಲ್ಲೆಗೆ ಘೋಷಣೆಯಾದ ಬಳಿಕ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾಲೇಜು ಆರಂಭಿಸಲಾಗಿದೆ. ಖಾಸಗಿ ಲಾಬಿ ಕಾರಣದಿಂದಲೇ ನಮ್ಮ ನಗರದಲ್ಲಿ ಘೋಷಣೆಯಾದ ಕಾಲೇಜು ಆರಂಭಕ್ಕೆ ಅನುದಾನ ಕೊಡುತ್ತಿಲ್ಲ. ಇದಕ್ಕಾಗಿ ನಾವು ಹಲವು ರೀತಿ ಹೋರಾಟ ಮಾಡಿದ್ದೇವೆ. ಜಿಲ್ಲೆಯಾದ್ಯಂತ ಬೂಟ್‌ ಪಾಲಿಶ್‌ ಮಾಡಿ, ಅದರಿಂದ ಬಂದ ಹಣ ಸರ್ಕಾರಕ್ಕೆ ಕೊಟ್ಟಿದ್ದೇವೆ. ಈಗ ಶಾಸಕರ ನಿವಾಸದವರೆಗೆ ದೀಡ ನಮಸ್ಕಾರ ಹಾಕಿ, ಮನವಿ ಸಲ್ಲಿಸಲು ಮುಂದಾದರೆ, ಪೊಲೀಸರು ಬಂಧಿಸಿ, ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ. ಇನ್ನೂ ಉಗ್ರ ಹೋರಾಟ ನಡೆಸುತ್ತೇವೆ. ಬಸವರಾಜ ಧರ್ಮಂತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕರವೇ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next