Advertisement
ಶಾರದಾ ಕಲ್ಯಾಣ ಮಂಟಪದ ಸಮೀಪದ ನಿವಾಸಿ ಆಗಿರುವ ತುಳಸಿ ಅವರು ಉಡುಪಿ ಭಾಗದ ವಿವಿಧ ದೇವಸ್ಥಾನಗಳಿಗೆ ಲಕ್ಷ ಬತ್ತಿ ಸೇವೆ ಮಾಡಿದ ಹಿರಿಮೆ ಇವರದು. ಆದಿ ಉಡುಪಿಯ ಕಂಗೂರು ಮಠಕ್ಕೆ ಇದೇ ಫೆ. 17ರಂದು ಲಕ್ಷ ಬತ್ತಿ ಸೇವೆ ನೀಡಲಿದ್ದಾರೆ. ಪ್ರತಿ ಬಾರಿ ದೇವಸ್ಥಾನಕ್ಕೆ ತೆರಳುವಾಗಲು ಹಣ್ಣು ಕಾಯಿ ಬದಲು ಬತ್ತಿ, ದೀಪದ ಎಣ್ಣೆ ತೆಗೆದುಕೊಂಡು ದೇವರಿಗೆ ಸಲ್ಲಿಸುವ ರೂಢಿ ಇವರದ್ದು.
74 ವರ್ಷದ ತುಳಸಿ ತಂತ್ರಿ ಅವರು ನೂರು ದಿನದಲ್ಲಿ ಲಕ್ಷ ಬತ್ತಿ ತಯಾರಿಸಿದ ಹಿರಿಮೆ ಹೊಂದಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ 3 ಲಕ್ಷ ಬತ್ತಿ, ಪಣಿಯಾಡಿ ಅನಂತ ಪದ್ಮನಾಭ ದೇವಸ್ಥಾನಕ್ಕೆ 3 ಲಕ್ಷ ಬತ್ತಿ ಸೇವೆ ಸಲ್ಲಿಸಿದ್ದಾರೆ. ಪ್ರತಿ ತಿಂಗಳು ಪಣಿಯಾಡಿ ದೇವಸ್ಥಾನ, ಕಡಿಯಾಳಿ ದೇವಸ್ಥಾನ, ಶಾರದಾ ಕಲ್ಯಾಣ ಮಂಟಪದ ಶಾರದಾಂಬ ದೇವಸ್ಥಾನ, ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನ, ರಾಘವೇಂದ್ರ ಮಠಗಳಿಗೆ ಒಂದೊಂದು ಸಾವಿರ ಬತ್ತಿ ನೀಡುತ್ತಾರೆ. ಬತ್ತಿಯನ್ನು ದೇವರ ಪೂಜಾ ಕಾರ್ಯಕ್ಕೆ ಮಾತ್ರ ಬಳಸಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮ ಸಣ್ಣ ಅಳಿಲು ಸೇವೆ ಎಂದು ತುಳಸಿ ಅವರು ಸಾರ್ಥಕ ಭಾವ ತೊರುತ್ತಾರೆ.
Related Articles
ದಿನಕ್ಕೆ ಸಾವಿರಕ್ಕೂ ಅಧಿಕ ಬತ್ತಿ ಮಾಡುವ ಇವರು ಬತ್ತಿ ಜೋಡಿಸಿ ಆಲಂಕರಿಸುವಲ್ಲಿಯೂ ಸೈ ಎನಿಸಿದ್ದಾರೆ. ದೊಡ್ಡ ಬುಟ್ಟಿಯಲ್ಲಿ ರಥದ ಆಕಾರದಲ್ಲಿ ಬತ್ತಿ ಜೋಡಿಸಿಡುತ್ತಾರೆ ಇದನ್ನು ನೋಡಲೆಂದೇ ಸ್ಥಳೀಯರು ಬರುತ್ತಾರೆ.
Advertisement
ವಿದೇಶದಲ್ಲೂ ಪ್ರಸಿದ್ಧಿಇವರ ಸೇವೆ ಕೇವಲ ದೇಶದೊಳಗೆ ಮಾತ್ರ ಸೀಮಿತವಾಗಿರದೆ ವಿದೇಶಕ್ಕೂ ಹಬ್ಬಿದೆ. ತುಳಸಿ ಅವರ ಮಗ ಅಬುಧಾಬಿಯಲ್ಲಿದ್ದು, ಮಗನ ಮನೆಗೆ ತೆರಳುವಾಗ ಹತ್ತಿ ತೆಗೆದುಕೊಂಡು ಹೋಗಿ, ಬಳಿಕ ಅಲ್ಲಿ ಬತ್ತಿ ಮಾಡಿ ಅಲ್ಲಿರುವ ಬ್ರಾಹ್ಮಣ ಸಂಘಕ್ಕೆ ನೀಡುತ್ತಾರೆ. ಮಕ್ಕಳ ಸ್ನೇಹಿತರು ಕೂಡ ಅವರಲ್ಲಿಗೆ ಬಂದು ಬತ್ತಿಯನ್ನು ಪಡೆದುಕೊಂಡು ಹೋಗುತ್ತಾರೆ. ಮಗ ಊರಿಗೆ ಬಂದಾಗಲು 20, 30 ಸಾವಿರ ಬತ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ನೆರೆಯ ಮನೆಯವರೂ ಅಮೆರಿಕಕ್ಕೆ ತೆರಳುವಾಗ ಇವರಿಂದ ಬತ್ತಿಯನ್ನು ತೆಗೆದುಕೊಂಡು ಹೋಗುತ್ತಾರಂತೆ. ಧನ್ಯತಾ ಭಾವ
ಒಂದು ಲಕ್ಷ ಬತ್ತಿ ತಯಾರಿಸಲು ಮೂರು ತಿಂಗಳು ಬೇಕು. ಇತ್ತೀಚೆಗೆ ಮನೆಕೆಲಸ, ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಹೆಚ್ಚು ಸಮಯ ಬತ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಪ್ರಯತ್ನ ನಿರಂತರವಾಗಿದೆ. ದೇವರ ಸ್ಮರಣೆ, ಶ್ಲೋಕಗಳ ಜತೆ ಬತ್ತಿ ಕೆಲಸ ಮಾಡಿ ಇವುಗಳನ್ನು ದೇವರಿಗೆ ಸಮರ್ಪಣೆ ಮಾಡುವುದರಿಂದ ಮನಸ್ಸು ನೆಮ್ಮದಿ ಹೊಂದಿ ಧನ್ಯತಾಭಾವ ಮೂಡುತ್ತದೆ. ಸ್ಥಳೀಯರು ಕೂಡ ಮನೆಗೆ ಬಂದು ಬತ್ತಿ ಪಡೆಯುತ್ತಾರೆ.
-ತುಳಸಿ ತಂತ್ರಿ