Advertisement

“ಸಮರ್ಪಣ ಮನೋಭಾವ ಎಲ್ಲರಿಗೂ ಮಾದರಿ’

10:01 PM Jul 23, 2019 | mahesh |

ನರಿಮೊಗರು: ಮುಂದಿನ ವರ್ಷ ಸೇವಾ ನಿವೃತ್ತಿ ಹೊಂದಲಿರುವ ಸರ್ವೆ ಎಸ್‌.ಜಿ.ಎಂ. ಪ್ರೌಢಶಾಲಾ ಪ್ರಭಾರ ಮುಖ್ಯಗುರು ಶ್ರೀನಿವಾಸ್‌ ಎಚ್‌.ಬಿ. ಕೊಡುಗೆಯಾಗಿ ನೀಡಿರುವ 60 ಸಾವಿರ ರೂ. ವೆಚ್ಚದ ಶಾಶ್ವತ ನೀರಿನ ಟ್ಯಾಂಕ್‌ ಉದ್ಘಾಟನೆ ಹಾಗೂ ವಿವಿಧ ಯೋಜನೆಗಳ ಶಾಲಾರ್ಪಣೆ ಕಾರ್ಯಕ್ರಮ ನಡೆಯಿತು.

Advertisement

ನೀರಿನ ಟ್ಯಾಂಕ್‌ ಉದ್ಘಾಟಿಸಿ ಮಾತನಾಡಿದ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಇಲ್ಲಿನ ಮುಖ್ಯಗುರು ಶ್ರೀನಿವಾಸ್‌ ಎಚ್‌.ಬಿ. ಅವರು ತಾವು ಸೇವೆ ಸಲ್ಲಿಸಿರುವ ಶಾಲೆಗೆ ಕೊಡುಗೆಯಾಗಿ ಶಾಶ್ವತ ನೀರಿನ ಟ್ಯಾಂಕ್‌ ನೀಡಿರುವುದು ಮಾದರಿಯಾಗಿದೆ. ಅವರ ಸಮರ್ಪಣಾ ಮನೋಭಾವ ಎಲ್ಲರಿಗೆ ಪ್ರೇರಣೆಯಾಗಲಿದೆ ಎಂದರು. ಮಳೆ ಕೊಯ್ಲು, ಪ್ಲಾಸ್ಟಿಕ್‌ ಬಳಕೆ ಪರಿಣಾಮಗಳ ಬಗ್ಗೆ ವಿವರಿಸಿದರು. ಶಾಲೆಯಲ್ಲಿ ಮಳೆ ನೀರು ಕೊಯ್ಲು ಘಟಕ ಸ್ಥಾಪಿಸಿರುವ ಸರ್ವೆ ಷಣ್ಮುಖ ಯುವಕ ಮಂಡಲದ ಕಾರ್ಯವನ್ನು ಶ್ಲಾಘಿಸಿದರು.

ಸರ್ವೆ ಷಣ್ಮುಖ ಯುವಕ ಮಂಡಲದಿಂದ ಶಾಲೆಯಲ್ಲಿ ಮಾಡಲಾದ ಮಳೆಕೊಯ್ಲು ಘಟಕವನ್ನು ಅಕ್ಷರ ದಾಸೋಹ ಕೇಂದ್ರದ ನಿರ್ದೇಶಕ ಸುರೇಶ್‌ ಕುಮಾರ್‌ ಉದ್ಘಾಟಿಸಿದರು. ಶಾಲಾ ಗೋಡೆಯಲ್ಲಿ ಅವಳಡಿಸಲಾಗಿರುವ ಸ್ವತ್ಛತಾ ಜಾಗೃತಿ ಫಲಕವನ್ನು ಕ್ಷೇತ್ರ ಶಿಕ್ಷಣ ಇಲಾಖೆಯ ಸುಂದರ ಗೌಡ ಅನಾವರಣಗೊಳಿಸಿದರು. ಶಾಲೆ ಮುಂಭಾಗದ ಪಿಟಿಎ ಗಾರ್ಡನ್‌ ಅನ್ನು ಶಾಲಾ ಆಡಳಿತ ಮಂಡಳಿ ಉಪಸಂಚಾಲಕಿ ಡಾ| ಯಾದವಿ ಜಯಕುಮಾರ್‌ ಉದ್ಘಾಟಿಸಿದರು.

ಸರ್ವೆ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಮಾತನಾಡಿದರು. ಮುಖ್ಯ ಶಿಕ್ಷಕ ಶ್ರೀನಿವಾಸ್‌ ಎಚ್‌.ಬಿ. ಮಾತನಾಡಿ, 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪವಿತ್ರ ಕರ್ಮಭೂಮಿ ಇದು. ಇಲ್ಲಿನ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಎಲ್ಲರೂ ಶಾಲೆಗೆ ಕೊಡುಗೆ ಕೊಟ್ಟಿರುವಾಗ ಇಲ್ಲಿ ಶಿಕ್ಷಕನಾಗಿರುವ ನಾನೂ ಏನನ್ನಾದರೂ ಕೊಡದಿದ್ದರೆ ತಪ್ಪಾದೀತು ಎಂಬ ಭಾವನೆ ನನ್ನಲ್ಲಿತ್ತು. ಹಾಗಾಗಿ ಶಾಶ್ವತ ನೀರಿನ ಟ್ಯಾಂಕ್‌ನ್ನು ಕೊಟ್ಟಿದ್ದೇನೆ ಎಂದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಬಿ. ಇಂದುಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ವಸಂತ ಎಸ್‌. ವೀರಮಂಗಲ, ಡಾ| ಸೀತಾರಾಮ ಭಟ್‌ ಕಲ್ಲಮ, ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಕಮಲೇಶ್‌ ಸರ್ವೆದೋಳಗುತ್ತು, ಶಾಲಾ ಸಂಚಾಲಕ ವಿಜಯಕುಮಾರ್‌ ಶುಭ ಹಾರೈಸಿದರು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ್‌ ಆಚಾರ್ಯ, ಪ್ರಮುಖರಾದ ಶಶಿಧರ್‌ ಎಸ್‌.ಡಿ., ಜಯಂತ್‌ ಬೇಕಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಸಮ್ಮಾನ, ಗೌರವಾರ್ಪಣೆ
ಶ್ರೀನಿವಾಸ್‌ ಎಚ್‌.ಬಿ. ಅವರನ್ನು ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು. ನೀರಿನ ಟ್ಯಾಂಕ್‌ ನಿರ್ಮಿಸಿದ ಗುತ್ತಿಗೆದಾರ ದಯಾನಂದ, ಸಹಾಯಕರಾದ ಪದ್ಮಯ್ಯ, ಕರುಣಾಕರ ಗೌಡ, ಎಲೆಕ್ಟ್ರಿಷಿಯನ್‌ ಬೆಳಿಯಪ್ಪ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕಿ ಪುಷ್ಪಾ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರು, ಹೆತ್ತವರು, ಷಣ್ಮುಖ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ
ಸ್ಮಾರ್ಟ್‌ ಕ್ಲಾಸ್‌ “ವಿಡಿಯೋ ವಿಶುವಲ್‌’ಅನ್ನು ಉದ್ಘಾಟಿಸಿದ ಮುಂಡೂರು ಗ್ರಾ.ಪಂ. ಅಧ್ಯಕ್ಷ ಎಸ್‌.ಡಿ, ವಸಂತ ಮಾತನಾಡಿ, ತರಬೇತಿ ಪೂರ್ಣಗೊಳಿಸಿ ಕೆಲಸಕ್ಕೆ ಸೇರಿದ ಮಾತ್ರಕ್ಕೆ ಯಾವ ಶಿಕ್ಷಕರೂ ಪರಿಪೂರ್ಣ ಆಗಲಾರರು. ಮಕ್ಕಳು ಹಾಗೂ ಸಮಾಜದೊಂದಿಗೆ ಬೆರೆತು ಸಕ್ರಿಯರಾಗಿದ್ದಾಗ ಮಾತ್ರ ಪರಿಪೂರ್ಣ ಶಿಕ್ಷಕರಾಗಲು ಸಾಧ್ಯ. ಇಂಥ ಪರಿಪೂರ್ಣತೆಗೆ ಎಚ್‌.ಬಿ. ಶ್ರೀನಿವಾಸ್‌ ಅವರು ಉತ್ತಮ ಉದಾಹರಣೆ. ಇವರು ಶಿಕ್ಷಕ ಸಮುದಾಯಕ್ಕೆ ಆದರ್ಶರಾಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next