Advertisement
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಈ ಬಾರಿಯ ಹಿಂಗಾರು ಆರಂಭಿಕ ಹಂತದಲ್ಲಿಯೇ ಕ್ಷೀಣಿಸಿತ್ತು. ಇನ್ನು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ. ಕರಾವಳಿ ಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಸುಗ್ಗಿ ಬೆಳೆಯು ಬಹುತೇಕ ಹಿಂಗಾರು ಮಳೆಯನ್ನು ಅವಲಂಬಿಸಿದೆ. ಮುಂಗಾರಿನಲ್ಲಿ ಅತಿವೃಷ್ಟಿಯಿಂದ ನಲುಗಿದ್ದ ರೈತ ಈಗ ಹಿಂಗಾರು ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದಾನೆ. ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದ ವರೆಗೂ ನದಿ, ತೊರೆ ಗಳಲ್ಲಿ ನೀರಿನ ಹರಿವು ಇರುತ್ತದೆ. ಆದರೆ ಈ ಬಾರಿ ತೀರಾ ಕಡಿಮೆಯಾಗಿದೆ. ಹಿಂಗಾರು ಮಳೆ ಉತ್ತಮವಾಗಿ ಸುರಿದು ನೀರಿನ ಮಟ್ಟ ಕಾಯ್ದುಕೊಳ್ಳಲು ಸಹಾಯವಾಗಬಹುದು ಎಂದು ನಿರೀಕ್ಷಿಸ ಲಾಗಿತ್ತು. ಅದಾಗಿಲ್ಲ. ಸಾಮಾನ್ಯವಾಗಿ ತೋಟಗಾರಿಕೆ ಬೆಳೆಗಳಿಗೆ ನೀರು ಹಾಯಿಸಲು ಪ್ರಾರಂಭಿಸುವುದು ಡಿಸೆಂಬರ್ ಬಳಿಕ. ಆದರೆ ಈ ಬಾರಿ ಅನೇಕ ಕಡೆ ಈಗಾಗಲೇ ನೀರುಣಿಸಲು ಆರಂಭಿಸಲಾಗಿದೆ. ಅಕ್ಟೋಬರ್ 2ನೇ ವಾರದಿಂದ ಹಿಂಗಾರು ಮಾರುತದ ಪ್ರವೇಶವಾಗಿ ಮಧ್ಯಾಹ್ನದ ಅನಂತರ ಗುಡುಗು ಸಹಿತ ಭಾರೀ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಹಿಂಗಾರು ಮಾರುತ ದುರ್ಬಲವಾಗಿ ನಿರೀಕ್ಷಿತ ಮಳೆಯಾಗಿಲ್ಲ.
ನ. 3ರಂದು ರಾಜ್ಯಕ್ಕೆ ಹಿಂಗಾರು ಪ್ರವೇಶಿಸಿದ್ದರೂ ನಿರೀಕ್ಷೆಯಂತೆ ಮಳೆಯಾಗಲಿಲ್ಲ. ನ.19ರಂದು ಕೊನೆಯ ಮಳೆ ನಕ್ಷತ್ರ ಅನುರಾಧಾ ಪ್ರಾರಂಭವಾಗಿ ಆಸುಪಾಸಿನ ಒಂದೆರಡು ದಿನ ಉತ್ತಮ ಮಳೆಯಾಗಿತ್ತು. ಆ ಬಳಿಕ ಉತ್ತಮ ಮಳೆಯಾಗಿಲ್ಲ. ಇದರಿಂದಾಗಿ ಕರಾವಳಿಯಲ್ಲಿ ಶೇ.29ರಷ್ಟು ಮಳೆ ಕೊರತೆ ಉಂಟಾಗಿದೆ. ಅ.1ರಿಂದ ನ.22ರ ವರೆಗೆ ಕರಾವಳಿ ಪ್ರದೇಶದಲ್ಲಿ 239.20 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 171.36 ಮಿ.ಮೀ. ಮಳೆ ಸುರಿದಿದೆ. ಅವಧಿಗೂ ಮುನ್ನ ಶುರುವಾಗಿದೆ ಚಳಿ
ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಡಿಸೆಂಬರ್, ಜನವರಿ, ಫೆಬ್ರ ವರಿ ತಿಂಗಳಿನಲ್ಲಿ ಚಳಿ ಇರುತ್ತದೆ. ಆದರೆ ಈ ಬಾರಿ ಅವಧಿಗೂ ಮುನ್ನ ಅಂದರೆ ನವೆಂಬರ್‌ನಲ್ಲಿಯೇ ಚಳಿ ಪ್ರಾರಂಭವಾಗಿದೆ. ಬಾನಿ ನಲ್ಲಿ ಮೋಡಗಳ ಚಲನೆ ಕಡಿಮೆ ಯಾಗಿದ್ದೇ ಇದಕ್ಕೆ ಕಾರಣ. ಇದ ರಿಂದಾಗಿ ವಾತಾವರಣದಲ್ಲಿ ಮಧ್ಯಾಹ್ನದ ವೇಳೆ ವಾಡಿಕೆ ಉಷ್ಣಾಂಶಕ್ಕಿಂತ 2-3 ಡಿಗ್ರಿ ಸೆ. ಹೆಚ್ಚಳವಾಗುತ್ತಿದೆ. ಅದೇ ರೀತಿ ರಾತ್ರಿ ವೇಳೆ ವಾಡಿಕೆಗಿಂತ 2 ಡಿ.ಸೆ. ಉಷ್ಣಾಂಶ ಕಡಿಮೆಯಾಗುತ್ತಿದೆ.
Related Articles
ಈ ನಡುವೆ ಬಂಗಾಲಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿ ಉತ್ತಮ ಮಳೆ ನಿರೀಕ್ಷೆ ಮೂಡಿಸಿದರೂ ಪಥ ಬದಲಾಗಿ ದೊಡ್ಡ ಮಟ್ಟದ ಮಳೆ ಸುರಿಯಲಿಲ್ಲ. ತ. ನಾಡು, ಕೇರಳದ ಕೆಲವೆಡೆ ಮಳೆ ಸುರಿದಿತ್ತು. ಈಗ ಮತ್ತೆ ಬಂಗಾಲಕೊಲ್ಲಿಯಲ್ಲಿ ಮಳೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ತ.ನಾಡು, ಪುದುಚೇರಿ ಮತ್ತು ಕೇರಳದಲ್ಲಿ ನ. 29ರಿಂದ ಕೆಲವು ದಿನ ಮಳೆ ನಿರೀಕ್ಷೆ ಇದೆ. ಈಗಿನ ಮುನ್ಸೂಚನೆಯಂತೆ ಕರಾವಳಿಯಲ್ಲಿ ಲಘು ಮಳೆ ಮಾತ್ರ ನಿರೀಕ್ಷಿಸಲಾಗಿದೆ.
Advertisement
ಮಾನ್ಸೂನ್ ಮೇಲೂ ಪರಿಣಾಮ?ಹವಾಮಾನ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ಪ್ರತಿಕ್ರಿಯಿಸಿ, ಎಲ್‌ನಿನೊ ಹೆಚ್ಚಾಗುತ್ತಿದೆ. ಇದರ ಪರಿಣಾಮ ವಾಗಿ ರಾಜ್ಯಕ್ಕೆ ಹಿಂಗಾರು ಪ್ರವೇಶವಾಗದೇ ಇದ್ದಿರಬಹುದು. ಉಷ್ಣಾಂಶ ಮತ್ತಷ್ಟು ಹೆಚ್ಚಿದರೆ ಮುಂದಿನ ವರ್ಷದ ಮಾನ್ಸೂನ್ ಮೇಲೆ ಕೂಡ ನೇರ ಪರಿಣಾಮ ಬೀಳ ಬಹುದು ಎಂದಿದ್ದಾರೆ.