ಚಿಕ್ಕೋಡಿ: ನೆರೆಯ ಜಲಘಟ್ಟ ಪ್ರದೇಶದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ ಅಬ್ಬರ ಕಡಿಮೆಯಾಗಿದ್ದು, ಇದರಿಂದ ಗಡಿ ಭಾಗದ ನದಿಗಳ ನೀರಿನ ಮಟ್ಟದಲ್ಲಿ ಸೋಮವಾರ ನಾಲ್ಕು ಅಡಿಯಷ್ಟು ಇಳಿಕೆ ಕಂಡಿವೆ.
ಸತತ ಮಳೆಯಿಂದ ಮುಳುಗಡೆಗೊಂಡಿದ್ದ ತಾಲೂಕಿನ ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಭೋಜ, ವೇಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಭೋಜವಾಡಿ-ಕುನ್ನೂರ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದು, ಎಂದಿನಂತೆ ಸಾರ್ವಜನಿಕ ಸಂಚಾರ ಆರಂಭವಾಗಿದೆ. ಕಳೆದ 24 ಗಂಟೆಯಲ್ಲಿ ಮಳೆ ಸುರಿಯದೇ ಹೋದರೆ ಮಂಗಳವಾರ ಮತ್ತೆರಡು ಸೇತುವೆ ಸಂಚಾರಕ್ಕೆ ಮುಕ್ತವಾಗಲಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜದಿಂದ ರಾಜ್ಯಕ್ಕೆ 43,730 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಯಿಂದ 14,080 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಬರುತ್ತಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 57,810 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 83 ಸಾವಿರ ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ ಎಂದು ತಹಶೀಲ್ದಾರ್ ಡಾ| ಸಂತೋಷ ಬಿರಾದಾರ ತಿಳಿಸಿದರು.
ಸೇತುವೆಗಳ ನೀರಿನ ಮಟ್ಟ: ಖೈಷ್ಣಾ ನದಿಯ ಅಂಕಲಿ-ಮಾಂಜರಿ ಸೇತುವೆ ಅಪಾಯ ಮಟ್ಟ 537 ಮೀಟರ್ ಇಂದಿನ ನೀರಿನ ಮಟ್ಟ 529.11 ದೂಧಗಂಗಾ ನದಿಯ ಸದಲಗಾ-ಬೋರಗಾಂವ ಸೇತುವೆ ಅಪಾಯ ಮಟ್ಟ 538 ಮೀಟರ್ ಇಂದಿನ ನೀರಿನ ಮಟ್ಟ 532.890 ಮೀಟರ್. ಹಿಪ್ಪರಗಿ ಬ್ಯಾರೇಝ ಅಪಾಯ ನೀರಿನ ಮಟ್ಟ 524 ಮೀಟರ್ ಇಂದಿನ ನೀರಿನ ಮಟ್ಟ 521 ಮೀಟರ್.
ಮಹಾರಾಷ್ಟ್ರದ ಮಳೆ ಪ್ರಮಾಣ: ಕೊಯ್ನಾ-109 ಮಿಮೀ, ವಾರಣಾ-25 ಮಿಮೀ, ಕಾಳಮ್ಮವಾಡಿ- 42ಮಿಮೀ, ನವಜಾ-98 ಸಾಂಗ್ಲೀ-1 ಮಿಮೀ, ರಾಧಾನಗರಿ-68 ಮಿಮೀ, ಪಾಟಗಾಂವ-120 ಮಿಮೀ, ಮಹಾಬಲೇಶ್ವರ-68 ಮಿಮೀ, ಕೊಲ್ಲಾಪೂರ-9 ಮಿಮೀ. ಈ ರೀತಿ ಮಹಾರಾಷ್ಟ್ರದಲ್ಲಿ ಮಳೆ ಆಗಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ: ಚಿಕ್ಕೋಡಿ-02 ಮಿಮೀ, ಅಂಕಲಿ-4.0 ಮಿಮೀ, ನಾಗರಮುನ್ನೋಳ್ಳಿ-1.4 ಮಿಮೀ, ಸದಲಗಾ-4.1 ಮಿಮೀ, ಗಳತಗಾ-4.0 ಮಿಮೀ, ಜೋಡಟ್ಟಿ-3.4 ಮಿಮೀ, ನಿಪ್ಪಾಣಿ ಪಿಡಬ್ಲುಡಿ-0.2 ಮಿಮೀ, ನಿಪ್ಪಾಣಿ ಎಆರ್‌ಎಸ್-0.2 ಮಿಮೀ, ಸೌಂದಲಗಾ-12.3 ಮಿಮೀ ಮಳೆಯಾಗಿದೆ.