Advertisement

ದ.ಕ.: ಪ್ರಸವ ಶಿಶು ಮರಣ ಪ್ರಮಾಣ ಇಳಿಕೆ

11:17 PM Jan 04, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಹೆರಿಗೆ ವೇಳೆ ಶಿಶು ಮರಣ ಪ್ರಮಾಣ ಗಣನೀಯ ಇಳಿಕೆ ಖಂಡಿರುವುದು ಆಶಾದಾಯಕ ಬೆಳವಣಿಗೆ. ಅದೇರೀತಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆರಿಗೆ ವೇಳೆ ತಾಯಿ ಮರಣ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿವೆ. ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019ರಲ್ಲಿ ಹೆರಿಗೆ ವೇಳೆ ಒಟ್ಟು 269 ಶಿಶು ಮರಣ ಮತ್ತು 14 ತಾಯಿ ಮರಣ ಪ್ರಕರಣಗಳು ಸಂಭವಿಸಿದೆ. 2015ರಿಂದ 2019ರ ಡಿಸೆಂಬರ್‌ವರೆಗಿನ ಅಂಕಿ-ಅಂಶ ಗಮನಿಸಿದಾಗ, ಹೆರಿಗೆ ವೇಳೆ ಒಟ್ಟಾರೆ 72 ಮಂದಿ ತಾಯಂದಿರು ಸಾವ ನ್ನಪ್ಪಿದ್ದರೆ, 1,572 ಶಿಶುಗಳು ಮೃತಪಟ್ಟಿವೆ.

Advertisement

ವಿಟಮಿನ್‌ಯುಕ್ತ ಆಹಾರ
ಗರ್ಭ ಧರಿಸಿದ ವೇಳೆ ತಾಯಿಯು ವಿಟಮಿನ್‌ಯುಕ್ತ ಆಹಾರ ಸೇವಿಸದೇ ಇರುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಕಂಡು ಬಂದು ಹೆರಿಗೆ ವೇಳೆ ಶಿಶು ಮರಣ ಹೊಂದುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂಗನವಾಡಿಗಳ ಮುಖಾಂತರ ಸರಕಾರವೇ ವಿಟಮಿನ್‌ಯುಕ್ತ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಸೊಪ್ಪು ತರಕಾರಿ, ಹಣ್ಣು, ಒಣ ಹಣ್ಣು, ಮೊಟ್ಟೆ, ಮೀನು, ಹಾಲು, ಮೊಸರು ಮುಂತಾದವುಗಳ ಸೇವನೆಯಿಂದ ತಾಯಿ, ಮಗುವಿನ ದೇಹಕ್ಕೆ ವಿಟಮಿನ್‌ ದೊರೆಯುತ್ತದೆ.

ಗರ್ಭಿಣಿಯರ ನೋಂದಣಿಯಾದ ತತ್‌ಕ್ಷಣದಿಂದಲೇ ಅವರ ಆರೋಗ್ಯದ ಬಗ್ಗೆ ನಿಗಾ ಇಡುವ ಕೆಲಸ ಈಗಾಗಲೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನಡೆಯುತ್ತಿದೆ. ಪ್ರತಿ ತಿಂಗಳು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಲಾಗುತ್ತದೆ. ರಕ್ತದೊತ್ತಡ, ರಕ್ತಹೀನತೆ ಪರೀಕ್ಷೆ ಮುಂತಾದ ಅವಶ್ಯ ತಪಾಸಣೆಗಳನ್ನು ಆರೋಗ್ಯ ಇಲಾಖೆ ಮೂಲಕ ನಡೆಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರ ಮುಖಾಂತರ ಆಗಾಗ ಮನೆ-ಮನೆ ಭೇಟಿ ನಡೆಸಲಾಗುತ್ತಿದೆ. ಹೈ ರಿಸ್ಕ್ ಪ್ರಕರಣಗಳಿದ್ದಲ್ಲಿ, ಹಿಂದೆ ಗರ್ಭಪಾತ, ಸಿಝೇರಿಯನ್‌ ಆಗಿದ್ದರೆ ಅಥವಾ ಈ ಮೊದಲು ನಿರ್ಜೀವ ಶಿಶು ಜನನವಾಗಿದ್ದಲ್ಲಿ ಅಂತಹವರ ಬಗ್ಗೆ ವಿಶೇಷವಾಗಿ ನಿಗಾ ವಹಿಸುವ ಕೆಲಸವೂ ಇಲಾಖೆಯಿಂದ ನಡೆಯುತ್ತಿದೆ.

 ಮುನ್ನೆಚ್ಚರಿಕೆ ಮಾಹಿತಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖಾಂತರ ತಾಯಿ-ಶಿಶು ಆರೋಗ್ಯಕ್ಕೆ ಸಂಬಂಧಿಸಿ ನಿರಂತರ ಜಾಗೃತಿ ಕಾರ್ಯ ನಡೆಯುತ್ತಿದೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಒತ್ತು ನೀಡುವಂತೆ ಪ್ರೇರೇಪಿಸಲಾಗುತ್ತದೆ. ಕಾಲಕಾಲಕ್ಕೆ ಲಸಿಕೆ ಹಾಕುವಿಕೆ, ಗರ್ಭಾವಸ್ಥೆಯಲ್ಲಿ ಮತ್ತು ಶಿಶು ಜನನದ ಅನಂತರವೂ ಆರೋಗ್ಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಮಾಹಿತಿ ಒದಗಿಸಲಾಗುತ್ತದೆ.
– ಉಸ್ಮಾನ್‌, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ

 ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ
ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರ ಮುಖಾಂತರ ಮನೆ ಭೇಟಿ ನಡೆಸಲಾಗುತ್ತಿದೆ. ಹೈರಿಸ್ಕ್ ಪ್ರಕರಣಗಳಿದ್ದಲ್ಲಿ ವಿಶೇಷ ನಿಗಾ ಇಡಲಾಗುತ್ತದೆ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Advertisement

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next