Advertisement

ಸೋಂಕಿತರ ಸಂಖ್ಯೆ ಇಳಿಕೆ; ಚೇತರಿಕೆ ಏರಿಕೆ

12:40 PM May 15, 2021 | Team Udayavani |

ಬೀದರ: ಸಾವಿನ ರಣಕೇಕೆಯಿಂದ ನಲುಗಿ ಹೋಗಿರುವ ಗಡಿನಾಡು ಬೀದರನಲ್ಲಿ ಕೊರೊನಾ ಪಾಸಿಟಿವ್‌ ಸಂಖ್ಯೆ ಇಳಿಕೆ ಜತೆಗೆ ಸೋಂಕಿತರ ಚೇತರಿಕೆ ಸಂಖ್ಯೆ ಹೆಚ್ಚುತ್ತಿರುವುದು ಹೊಸ ಆಶಾಭಾವ ಮೂಡಿದೆ.ವೈದ್ಯರ ಪರಿಶ್ರಮ, ಜನರ ಮುನ್ನೆಚ್ಚರಿಕೆ ಪರಿಣಾಮಪಾಸಿಟಿವ್‌ ದರ ಕಳೆದ ಮೂರು ದಿನದಿಂದ ಶೇ.4.38ಕ್ಕೆ ತಗ್ಗಿದ್ದು, ಪಾಸಿಟಿವಿಟಿಯ ಕೊನೆಯ ಐದು ಜಿಲ್ಲೆಗಳಲ್ಲಿ ಬೀದರ ಸೇರಿರುವುದು ಸಮಾಧಾನ ತಂದಿದೆ.

Advertisement

ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಕೋವಿಡ್‌-19 ಜಿಲ್ಲೆಯಲ್ಲಿ ಬಾರಿ ತಲ್ಲಣ ಮೂಡಿಸಿತ್ತು. ಕಳೆದ ಒಂದು ವಾರದ ಹಿಂದೆ ಇದ್ದ ಆತಂಕದ ಪರಿಸ್ಥಿತಿ ಈಗ ಸುಧಾರಣೆ ಕಾಣುತ್ತಿರುವುದುಸಾರ್ವಜನಿಕರಲ್ಲಿ ಕೊಂಚ ನೆಮ್ಮದಿ ತಂದಿದೆ. ಸರ್ಕಾರದ ನಿಗದಿತ ಗುರಿಯಂತೆ ನಿತ್ಯ 2300-2400 ಜನರ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿದಿನ ಹೊಸ ಸೋಂಕಿತರ ಪ್ರಕರಣಗಳಿಗಿಂತ ಅದರ ಎರಡು ಪಟ್ಟು ಚಿಕಿತ್ಸೆಯಿಂದ ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಒಂದಿಷ್ಟು ನಿಟ್ಟಿಸಿರು ಬಿಡುವಂತಾಗಿದೆ.

ಸದ್ಯ ಜಿಲ್ಲೆಯಲ್ಲಿ ಮರಣ ಪ್ರಮಾಣ ಸ್ಥಿರವಾಗಿದ್ದರೂ ಚೇತರಿಕೆ ಪ್ರಮಾಣ ವೃದ್ಧಿ ಆಗುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಮೇ 11ರಿಂದ ಮೂರು ದಿನಗಳಲ್ಲಿ 696 ಪಾಸಿಟಿವ್‌ ಕೇಸ್‌ ವರದಿಯಾಗಿದ್ದರೆ, ಇದೇ ದಿನಗಳಲ್ಲಿ ಚೇತರಿಸಿ ಕೊಂಡವರ ಸಂಖ್ಯೆ 1585 ಆಗಿದೆ. ಸದ್ಯ ಪಾಸಿಟಿವಿಟಿ ದರ ಶೇ.4.38ರಷ್ಟಿದ್ದರೆ, ಒಂದು ವಾರದ ಲೆಕ್ಕಾಚಾರದಲ್ಲಿ ಶೇ.12ರಷ್ಟಿದೆ. ಏಪ್ರಿಲ್‌ ಕೊನೆಯ ಮತ್ತು ಮೇ ಮೊದಲ ವಾರದಲ್ಲಿ ಪಾಸಿಟಿವ್‌ ದರ ಶೇ.18.5ರಷ್ಟು ದಾಖಲಾಗಿತ್ತು. ಬ್ರಿಮ್ಸ್‌ನಲ್ಲಿ ಚಿಕಿತ್ಸೆಯಲ್ಲಿ ನಿರ್ಲಕ್ಷ, ಆಕ್ಸಿಜನ್‌ ಮತ್ತು ರೆಮ್‌ಡೆಸಿವಿಯರ್‌ ಚುಚ್ಚುಮದ್ದು ಕೊರತೆ ಸೇರಿದಂತೆ ಅವ್ಯವಸ್ಥೆ ಹೆಚ್ಚಿತ್ತು. ಕೂಡಲೇ ಎಚ್ಚೆತ್ತ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜಿಲ್ಲೆಯ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳ ತುರ್ತುಸಭೆ ನಡೆಸಿ ವ್ಯವಸ್ಥೆ ಸುಧಾರಣೆಗೆ ಕಠಿಣ ಕ್ರಮ ಅಳವಡಿಸಿಕೆ ಜತೆಗೆ ವೈದ್ಯ ಸಿಬ್ಬಂದಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ್ದರು.

ಮುಖ್ಯವಾಗಿ ವೈದ್ಯರು ರೋಗಿಗಳ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಹಿನ್ನೆಲೆ ಕೋವಿಡ್‌ನ‌ ಎಲ್ಲ ವಾರ್ಡ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ವಾರ್‌ ರೂಂ ಸ್ಥಾಪನೆ ಮಾಡುವುದು ಮತ್ತು ಸಮನ್ವಯತೆ ಸಾಧಿಸಲು ವಿಶೇಷ ಕಮಿಟಿ ರಚಿಸುವ ಕಟ್ಟುನಿಟ್ಟಿನ ನಿರ್ದೇಶನವನ್ನು ಜಿಲ್ಲಾಡಳಿತ ಪಾಲಿಸುತ್ತಿದೆ. ಆಕ್ಸಿಜನ್‌, ಚುಚ್ಚುಮದ್ದು ಅಭಾವ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ.

ಸೋಂಕಿತರ ಚಿಕಿತ್ಸೆಗಾಗಿ ಬ್ರಿಮ್ಸ್‌ ಆಸ್ಪತ್ರೆಯ 200 ವೈದ್ಯರಲ್ಲಿ 150ಕ್ಕೂ ಹೆಚ್ಚು ವೈದ್ಯರು ಹಾಗೂ 240 ಶುಶ್ರೂಷಕರನ್ನು ಬಳಸಿಕೊಳ್ಳಲಾಗುತ್ತಿದೆ. ದಿನದ 24 ಗಂಟೆಯೂ ಪಾಳಿಯಂತೆ ಆರೋಗ್ಯ ಸೇವೆ ಪಡೆಯಲಾಗುತ್ತಿದೆ. ಸುಧಾರಿತ ಚಿಕಿತ್ಸಾ ಕ್ರಮಗಳಿಂದಾಗಿರಿಕವರಿ ಪ್ರಮಾಣ ಹೆಚ್ಚುತ್ತಿದ್ದು, ಆಕ್ಸಿಜನ್‌ ಮೇಲೆ ಅವಲಂಬಿತರು ಸಹ ಗುಣಮುಖರಾಗುತ್ತಿದ್ದಾರೆ.

Advertisement

ಬ್ರಿಮ್ಸ್‌ನಲ್ಲಿ ಗುರುವಾರ (ಮೇ 13) 48 ಸೋಂಕಿತರು ದಾಖಲಾಗಿದ್ದರೆ, 78 ಮಂದಿ ಚೇತರಿಸಿಕೊಂಡು ಡಿಸ್ಚಾರ್ಜ್‌ ಆಗಿದ್ದಾರೆ. ಇನ್ನೂ 389 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೋವಿಡ್‌ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್‌ ಮಾದರಿ ನಿರ್ಬಂಧಗಳಿಗೆ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬಹುತೇಕ ಜನರು ಅಗತ್ಯ ವಸ್ತುಗಳ ಖರೀದಿ, ತುರ್ತು ಕೆಲಸ ಹೊರತುಪಡಿಸಿದರೆ ಅನಗತ್ಯ ಓಡಾಟ ತೀರಾ ಕಡಿಮೆಯಾಗಿದೆ. ಗ್ರಾಮೀಣ ಭಾಗದಲ್ಲಿಯೂ ಬಂದ್‌ಗೆ ಸಾಥ್‌ ಸಿಗುತ್ತಿದೆ.

ಇದೆಲ್ಲದರ ಪರಿಣಾಮ ಸೋಂಕು ಹತೋಟಿಗೆ ಬಂದಿದೆ. ಜಿಲ್ಲೆಯ ಜನರು ಕೋವಿಡ್‌ ನಿಯಮಗಳ ಪಾಲನೆ ಮುಂದುವರೆಸಿದ್ದರೆ ಈಗಿರುವ ಪರಿಸ್ಥಿತಿ ಮತ್ತಷ್ಟು ಸುಧಾರಣೆ ಆಗಬಹುದು.

ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಾಂಘಿಕ ಪ್ರಯತ್ನದ ಫಲವಾಗಿ ಬೀದರ ಜಿಲ್ಲೆಯಲ್ಲಿಕೋವಿಡ್‌ ಸೋಂಕು ಹತೋಟಿಗೆ ಬರುತ್ತಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಪಾಸಿಟಿವ್‌ ಸಂಖ್ಯೆಕಡಿಮೆಯಾಗಿದ್ದು, ಸೋಂಕಿತರ ಗುಣಮುಖ ಪ್ರಮಾಣ ವೃದ್ಧಿಯಾಗುತ್ತಿದೆ. ಕೋವಿಡ್‌ ನಿಯಮ ಪಾಲನೆ, ಲಾಕ್‌ಡೌನ್‌ಗೆ ಜನರ ಸಹಕಾರ ಹೀಗೆ ಇದ್ದಲ್ಲಿ ಪರಿಸ್ಥಿತಿ ಇನ್ನಷ್ಟು ಬದಲಾಗಲಿದೆ. -ರಾಮಚಂದ್ರನ್‌ ಆರ್‌., ಜಿಲ್ಲಾಧಿಕಾರಿ

ಬ್ರಿಮ್ಸ್‌ನಲ್ಲಿ ಚಿಕಿತ್ಸಾ ಕ್ರಮದಲ್ಲಿ ಸುಧಾರಣೆ ಜತೆಗೆ ಆಕ್ಸಿಜನ್‌, ಔಷಧ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. 150 ವೈದ್ಯರು ಮತ್ತು 240 ನರ್ಸ್‌ ಗಳನ್ನು ಸೋಂಕಿತರ ಸೇವೆಗೆ ನಿಯೋಜಿಸಲಾಗಿದೆ. ಗುಣಮುಖರಾಗುವ ಸೋಂಕಿತರ ಸಂಖ್ಯೆ ವೃದ್ಧಿಸುತ್ತಿದೆ. ಬ್ರಿಮ್ಸ್‌ಗೆ ರೋಗಿಗಳ ದಾಖಲಾತಿ  ಗಿಂತ ರಿಕವರಿ ಆದವರ ಸಂಖ್ಯೆ ಹೆಚ್ಚುತ್ತಿದೆ.-ಡಾ| ರತಿಕಾಂತ ಸ್ವಾಮಿ, ಶಸ್ತ್ರ ಚಿಕಿತ್ಸಕರು, ಬ್ರಿಮ್ಸ್‌, ಬೀದರ

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next