Advertisement

ಬಾಂದಾರದಿಂದಾಗಲಿ ರೈತರಿಗೆ ಆಧಾರ 

03:40 PM Sep 24, 2018 | |

ಹಾವೇರಿ: ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟಿದ್ದು ಜಿಲ್ಲೆಯ ನದಿಗಳಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕೂಡಲೇ ನದಿ ಬಾಂದಾರುಗಳಿಗೆ ಗೇಟ್‌ ಅಳವಡಿಸಿ, ನೀರು ಸಂಗ್ರಹಿಸುವ ಕಾರ್ಯವಾಗಬೇಕಿದೆ. ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಒಂದಿಷ್ಟು ಸುರಿದಿದ್ದು ಬಳಿಕ ಮಳೆ ಸಂಪೂರ್ಣ ಕ್ಷೀಣಿಸಿ ಬೇಸಿಗೆ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯ ವಾರ್ಷಿಕ ವಾಡಿಕೆಯಂತೆ 792 ಮಿಮೀ ಮಳೆಯಾಗಿದ್ದು ಈವರೆಗೆ 696 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಈವರೆಗೆ 418ಮಿಮೀ ಮಾತ್ರ ಮಳೆಯಾಗಿದೆ. 278 ಮಿಮೀ ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮಳೆ ಪ್ರಮಾಣವನ್ನು ದಿನಗಳಿಗೆ ಲೆಕ್ಕ ಹಾಕಿದರೆ ಮಳೆ ಬಿದ್ದ ದಿನಗಳು ಗಣನೀಯವಾಗಿ ಕಡಿಮೆಯಾಗಿದೆ.

Advertisement

ಇಷ್ಟೊಂದು ಕಡಿಮೆ ಮಳೆಯಾಗಿದ್ದರೂ ಈ ಬಾರಿ ಜಿಲ್ಲೆಯ ಕೆಲ ಗ್ರಾಮದಲ್ಲಿ ನೆರೆಯಿಂದ ನೂರಾರು ಎಕರೆ ಕೃಷಿ ಬೆಳೆ ನಾಶವಾಗಿದೆ. ಅಕ್ಕಪಕ್ಕದ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯೇ ಕಾರಣವಾಗಿದೆ.

ಅತಿವೃಷ್ಟಿ-ಅನಾವೃಷ್ಟಿ: ಜಿಲ್ಲೆಯಲ್ಲಿ ಹರಿದಿರುವ ತುಂಗಾ, ವರದಾ ನದಿಗಳು ಈ ಬಾರಿ ಅಪಾಯಮಟ್ಟದವರೆಗೆ ತುಂಬಿ ಹರಿದವು. ತಾಲೂಕಿನ ನೂರಾರು ಎಕರೆ ಕೃಷಿ ಭೂಮಿಗೆ ನದಿಗಳ ನೀರು ಉಕ್ಕಿ ಬೆಳೆ ಕೂಡ ನಾಶವಾಯಿತು. ಆದರೆ, ವಾಸ್ತವದಲ್ಲಿ ಜಿಲ್ಲೆಯಾದ್ಯಂತ ಸಮರ್ಪಕ ಮಳೆ ಆಗಿಯೇ ಇಲ್ಲ. ಈಗ ಮಳೆ ಕಡಿಮೆಯಾಗಿದ್ದು ನದಿಗಳಲ್ಲಿನ ನೀರಿನ ಹರಿವು ಸಹ ಕಡಿಮೆಯಾಗಿದೆ. ಮಳೆ ಇಲ್ಲದ್ದರಿಂದ ಸಾವಿರಾರು ಎಕರೆ ಬೆಳೆ ಒಣಗುತ್ತಿದೆ. ಹೀಗಾಗಿ ಈ ಬಾರಿ ಜಿಲ್ಲೆ ಅತಿವೃಷ್ಟಿ, ಅನಾವೃಷ್ಟಿ ಎರಡನ್ನೂ ಎದುರಿಸಿದಂತಾಗಿದೆ. 2015ರಲ್ಲಿ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿತ್ತು. ಆಗ ನದಿಗಳ ಬಾಂದಾರಗಳಿಗೆ ಸಾಕಷ್ಟು ಮುಂಚೆಯೇ ಅಂದರೆ ಅಕ್ಟೋಬರ್‌ನಲ್ಲಿಯೇ ಗೇಟ್‌ ಅಳವಡಿಸಿದ್ದರಿಂದ ನದಿಗಳು ಬತ್ತಿದ್ದರೂ ಬಾಂದಾರಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿ ರೈತರಿಗೆ ಅನುಕೂಲವಾಗಿತ್ತು. 2016ರಲ್ಲಿ ಮುಂಗಾರು ಕೈಕೊಟ್ಟು, ಹಿಂಗಾರು ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದಿದ್ದರಿಂದ ಬಾಂದಾರುಗಳಿಗೆ ಗೇಟ್‌ ಅಳವಡಿಸುವ ಕಾರ್ಯ ತಡ ಮಾಡಲಾಗಿತ್ತು. ಈ ಬಾರಿ ಈಗಲೇ ಮಳೆ ಸಂಪೂರ್ಣ ಮಾಯವಾದ ಲಕ್ಷಣಗಳು ಕಂಡು ಬಂದಿದ್ದು ಈಗಲೇ ಬಾಂದಾರುಗಳಿಗೆ ಗೇಟ್‌ ಅಳವಡಿಸುವುದು ಅವಶ್ಯಕತೆ ಇದೆ.

ಬ್ಯಾರೇಜ್‌ಗಳಿಂದ ಅನುಕೂಲ: ವರದಾ ನದಿಯ 16, ಕುಮದ್ವತಿ ನದಿಯ 10, ಧರ್ಮಾ ನದಿಯ 12, ಹಳ್ಳಗಳು 12 ಹೀಗೆ 50 ಬ್ಯಾರೇಜ್‌ಗಳಿವೆ. ಇವುಗಳಲ್ಲಿ ವರದಾ, ಧರ್ಮಾ ನದಿಗಳ ಬ್ಯಾರೇಜ್‌ಗಳು ಜಿಲ್ಲೆಯ ರೈತರಿಗೆ ಹೆಚ್ಚು ವರದಾನವಾಗಿದ್ದು, ಈ ಬ್ಯಾರೇಜ್‌ ಗಳಿಗೆಲ್ಲ ಗೇಟ್‌ ಹಾಕುವ ಕೆಲಸ ನಡೆಯಬೇಕಿದೆ. ಬ್ಯಾರೇಜ್‌ಗಳಿಗೆ ಗೇಟ್‌ ಹಾಕಿ ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸಿದರೆ ವರದಾ ನದಿಯ ಕಳಸೂರ, ಮನ್ನಂಗಿ, ನಾಗನೂರ, ಸಂಗೂರ, ಆಡೂರ, ಅರೇಲಕ್ಮಾಪುರ, ಕೂಸನೂರ, ಶೇಷಗಿರಿ, ಹೊಂಕಣ, ಮಕರಳ್ಳಿ, ಗೊಂದಿ, ಕರಜಗಿ, ಹಿರೇಮರಳಿಹಳ್ಳಿ, ಹೊಸರಿತ್ತಿ, ಬೆಳವಿಗಿ, ಮರೊಳಗಳ ಗ್ರಾಮಗಳ ಸಾವಿರಾರು ಹೆಕ್ಟೇರ್‌ ರೈತರ ಕೃಷಿ ಭೂಮಿಗೆ, ಜನ, ಜಾನುವಾರುಗಳಿಗೆ ಅನುಕೂಲವಾಗಿದೆ.  ಜಿಲ್ಲಾಡಳಿತ ಕೂಡಲೇ ನದಿಯ ಎಲ್ಲ ಬಾಂದಾರಗಳಿಗೆ ಗೇಟ್‌ ಹಾಕಿದರೆ ನದಿ ಪಾತ್ರದ ರೈತರು ಕೃಷಿ ಮಾಡಲು, ಕುಡಿಯಲು ನದಿ ನೀರು ಅವಲಂಬಿತ ನಗರ, ಪಟ್ಟಣಗಳಿಗೆ ಸಮರ್ಪಕ ನೀರು ಪೂರೈಸಲು ಹೆಚ್ಚು ಸಹಕಾರಿಯಾಗಲಿದೆ ಎಂಬ ಅಪೇಕ್ಷೆ ಜಿಲ್ಲೆಯ ಜನತೆಯದ್ದಾಗಿದೆ.

ಬ್ಯಾರೇಜ್‌ಗಳಿಗೆ ಕೂಡಲೇ ಗೇಟ್‌ ಹಾಕಿ ನದಿಯ ಹರಿಯುವ ನೀರು ತಡೆದು ಸಂಗ್ರಹಿಸುವ ಕಾರ್ಯ ಈಗಲೇ ಆಗಬೇಕಿದೆ. ಈಗ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳದಿದ್ದರೆ ಈ ಬಾರಿಯ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಹೆಚ್ಚಾಗಲಿದೆ.
. ಫಕ್ಕಿರಪ್ಪ ಬೆಳವಿಗಿ, ರೈತ

Advertisement

ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು ಮುಂದಿನ ಬೇಸಿಗೆಯಲ್ಲಿ ಆಗುವ ನೀರಿನ ಸಮಸ್ಯೆ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ನದಿಗಳ ಬಾಂದಾರಗಳಿಗೆ ಕೂಡಲೇ ಗೇಟ್‌ ಅಳವಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
. ಡಾ| ವೆಂಕಟೇಶ್‌ ಎಂ.ವಿ,
  ಜಿಲ್ಲಾಧಿಕಾರಿ

ಮಳೆ ಸಂಪೂರ್ಣ ನಿಂತು ಹೋಗಿರುವುದರಿಂದ ದಿನದಿಂದ ದಿನಕ್ಕೆ ನದಿಗಳಲ್ಲಿನ ನೀರಿನ ಹರಿವು ಕಡಿಮೆಯಾಗುತ್ತಿದೆ. ಕೂಡಲೇ ಬಾಂದಾರಗಳಿಗೆ ಗೇಟ್‌ ಅಳವಡಿಸುವ ಕಾರ್ಯವಾಗಬೇಕು. ಗೇಟ್‌ ಹಾಕುವ ಸಂದರ್ಭದಲ್ಲಿ ಬಾಂದಾರಗಳಲ್ಲಿ ಸಿಕ್ಕು ಹಾಕಿಕೊಂಡಿರುವ ಕಸ ಕಡ್ಡಿ ಸ್ವತ್ಛಗೊಳಿಸಿ ಉತ್ತಮ ರೀತಿಯ ರಬ್ಬರನ್ನು ಅಳವಡಿಸಿ ಗೇಟ್‌ಗಳನ್ನು ಭದ್ರಗೊಳಿಸಬೇಕು.
. ಸಿದ್ದರಾಜ ಕಲಕೋಟಿ, ಸದಸ್ಯರು, ಜಿಪಂ

Advertisement

Udayavani is now on Telegram. Click here to join our channel and stay updated with the latest news.

Next