ಹೊಸದಿಲ್ಲಿ: ಭಾರತದಲ್ಲಿ ಆ್ಯಂಡ್ರಾಯ್ಡ ಫೋನ್ ಗಳಲ್ಲಿ ತನ್ನ ಪ್ರಾಬಲ್ಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆಸುತ್ತಿದ್ದ ಟೆಕ್ ದೈತ್ಯ ಗೂಗಲ್ ಕಡೆಗೂ ಮಣಿದಿದೆ. ಭಾರತದ ಆ್ಯಂಡ್ರಾಯ್ಡ ಫೋನ್ ಗಳಲ್ಲಿನ ತನ್ನ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ.
ಆ್ಯಂಡ್ರಾಯ್ಡ ವ್ಯವಸ್ಥೆ ಹೊಂದಿರುವ ಸ್ಮಾರ್ಟ್ ಫೋನ್‌ಗಳಲ್ಲಿ ವೀಡಿಯೋ ಬ್ರೌಸಿಂಗ್, ವೆಬ್ ಸರ್ಚಿಂಗ್, ವೀಡಿಯೋ ಹೋಸ್ಟಿಂಗ್‌ನಂಥ ಎಲ್ಲ ಕಾರ್ಯಾಚರಣೆಗಳಿಗೂ ಗೂಗಲ್ ಆ್ಯಪ್ಲಿಕೇಶನ್ ಗಳನ್ನೇ ಬಳಕೆ ಮಾಡುವ ಆಯ್ಕೆ ನೀಡಿತ್ತು. ಫೋನ್ ತಯಾರಕರ ಜತೆಗೆ ಏಕಪಕ್ಷೀಯ ಒಪ್ಪಂದದ
ಮೂಲಕ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ಗೂಗಲ್‌ನ ಆ್ಯಪ್ಲಿಕೇಶನ್‌ಗಳ ಪ್ರಾಬಲ್ಯ ಖಚಿತಪಡಿಸಿಕೊಳ್ಳಲು ಸಂಸ್ಥೆ ಪ್ರಯತ್ನಿಸಿತ್ತು.ಭಾರತದಲ್ಲಿ ಶೇ.97ರಷ್ಟು ಸ್ಮಾರ್ಟ್‌ಫೋನ್‌ಗಳು ಆ್ಯಂಡ್ರಾಯ್ಡ ವ್ಯವಸ್ಥೆಯನ್ನು ಹೊಂದಿದೆ.
ಬಳಕೆದಾರರಿಗೆ ಬೇರೆ ಆಯ್ಕೆಗಳನ್ನು ನೀಡದ್ದರಿಂದ ಗೂಗಲ್ ಮೇಲೆ ಅವಲಂಬಿತವಾಗುವಂತಾಗಿತ್ತು. ಪ್ರಾಬಲ್ಯ ದುರ್ಬಳಕೆಯನ್ನು ಗಮನಿಸಿದ್ದ ಭಾರತದ
ಸ್ಪರ್ಧಾತ್ಮಕ ಆಯೋಗ (ಸಿಸಿಐ), ಗೂಗಲ್‌ಗೆ 1,337 ಕೋಟಿ ರೂ. ದಂಡ ವಿಧಿಸಿತ್ತು. ದಂಡ ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ್ದ ಗೂಗಲ್‌ಗೆ ಹಿನ್ನಡೆಯಾಗಿತ್ತು. ಬಳಿಕ ಈಗ ಬದಲಾವಣೆಯನ್ನು ಘೋಷಿಸಿದೆ.
ಬದಲಾವಣೆ ಏನು?
ಆ್ಯಂಡ್ರಾಯ್ಡ ಫೋನ್‌ಬಳಕೆದಾರರಿಗೆ ತಮಗೆ ಇಷ್ಟ ಬಂದ ಸರ್ಚ್ ಎಂಜಿನ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುವುದರ ಜತೆಗೆ ತನ್ನ ಆ್ಯಪ್ಲಿಕೇಶನ್‌ಗಳಿಗೆ ಇನ್‌ಸ್ಟಾಲೇಶನ್‌ಗೆ ಮುಂಚೆಯೇ ಪ್ರತ್ಯೇಕ ಪರವಾನಿಗೆ ಮಾಡಿಕೊಳ್ಳುವ ಅವಕಾಶವನ್ನೂ ಮೊಬೈಲ್ ತಯಾರಕರಿಗೆ ನೀಡಿದೆ.