Advertisement

ನಾಟಿ ಬಟಾಣಿ ಬೆಲೆ ದುಪ್ಪಟ್ಟು: ಮಾರುಕಟ್ಟೆಯಲ್ಲಿ ಕೇಜಿಗೆ 250 ರೂ.

10:28 AM Jun 10, 2022 | Team Udayavani |

ಬೆಂಗಳೂರು: ನಾಟಿ ಬಟಾಣಿ ಬೆಲೆಯಲ್ಲಿ ದಿಢೀರ್‌ ಏರಿಕೆ ಕಂಡುಬಂದಿದ್ದು, ಪ್ರತಿ ಕೆಜಿ ದರ 250 ರೂ.ವರೆಗೂ ಮುಟ್ಟಿದೆ.

Advertisement

ಕೆ.ಆರ್‌.ಮಾರುಕಟ್ಟೆಯಲ್ಲಿ ಗುಣಮಟ್ಟದ ನಾಟಿ ಬಟಾಣಿ ಪ್ರತಿ ಕೆ.ಜಿ.ಗೆ 250 ರೂ. ವರೆಗೂ ಖರೀದಿ ಆಗುತ್ತಿದೆ. ಈ ಹಿಂದೆ ನಾಟಿ ಬಟಾಣಿ ಪ್ರತಿ ಕೆ.ಜಿ ಗೆ 90 ರೂ.ದಿಂದ 100 ರೂ. ವರೆಗೂ ಮಾರಾಟವಾಗುತ್ತಿತ್ತು. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಅಧಿಕ ಸಂಖ್ಯೆಯಲ್ಲಿ ನಾಟಿ ಬಟಾಣಿ ಖರೀದಿಸುತ್ತಿರುವುದು ಬೆಲೆ ದ್ವಿಗುಣಕ್ಕೆ ಕಾರಣವಾಗಿದೆ.

ಹಸಿರು ಬಟಾಣಿಯನ್ನು ಪಾನಿಪುರಿ, ಪಲ್ಯ, ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ. ಆದರೆ, ಇದೀಗ ಶುಭ ಕಾರ್ಯಕ್ರಮಗಳು ಅಧಿಕ ಸಂಖ್ಯೆಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ನಾಟಿ ಬಟಾಣಿ ಕ್ಷಣ ಮಾತ್ರದಲ್ಲಿ ಮಾರಾಟವಾಗಿ ಬಿಡುತ್ತದೆ ಎಂದು ಕೆ.ಆರ್‌. ಮಾರುಕಟ್ಟೆಯ ಹೋಲ್‌ಸೇಲ್‌ ವ್ಯಾಪಾರಿ ಆರ್‌ .ವಿ.ಗೋಪಿ ಹೇಳುತ್ತಾರೆ.

ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಬಟಾಣಿ ಪೂರೈಕೆಯಲ್ಲಿ ಅಭಾವ ಸೃಷ್ಟಿಯಾಗಿತ್ತು. ಆ ವೇಳೆ ಪ್ರತಿ ಕೆ.ಜಿ. ನಾಟಿ ಬಟಾಣಿ ಸುಮಾರು 450 ರೂ.ದಿಂದ 500 ರೂ.ವರೆಗೂ ಖರೀದಿಯಾಗಿತ್ತು ಎಂದು ಮಾಹಿತಿ ನೀಡುತ್ತಾರೆ.

5 ರಿಂದ 10 ಕ್ವಿಂಟಲ್ಮಾತ್ರ ಪೂರೈಕೆ

Advertisement

ಆನೇಕಲ್‌, ರಾಮನಗರ ಮತ್ತು ಬೆಂಗಳೂರಿನ ಸುತ್ತಮುತ್ತಲಿನ ಕೆಲವು ಕಡೆಗಳಲ್ಲಿ ರೈತರು ನಾಟಿ ಬಟಾಣಿ ಬೆಳೆಯುತ್ತಾರೆ. ಈ ಹಿಂದೆ ಕೆ.ಆರ್‌. ಮಾರುಕಟ್ಟೆಗೆ 40ರಿಂದ 50 ಕ್ವಿಂಟಲ್‌ ನಾಟಿ ಬಟಾಣಿ ಪೂರೈಕೆ ಆಗುತ್ತಿತ್ತು. ಆದರೆ ಈಗ ಪ್ರತಿ ದಿನ 5 ರಿಂದ 10 ಕ್ವಿಂಟಲ್‌ ಬಟಾಣಿ ಪೂರೈಕೆ ಆಗುತ್ತಿದೆ ಎಂದು ಹೋಲ್‌ ಸೇಲ್‌ ವ್ಯಾಪಾರಸ್ಥರು ಹೇಳುತ್ತಾರೆ.

ಇತ್ತೀಚೆಗೆ ಸುರಿದ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅದೇ ರೀತಿಯ ಬಟಾಣಿ ಬೆಳೆಗೂ ಆಗಿದೆ. ಮಳೆ ಹೀಗೆ ಸುರಿಯುತ್ತಿದ್ದರೆ ತೋಟಗಾರಿಕೆ ಬೆಳೆಗಳಿಗೆ ಮತ್ತಷ್ಟು ಹಾನಿ ಗೊಳಗಾಗುವ ಸಾಧ್ಯತೆ ಇದ್ದು ಬೆಲೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎನ್ನುತ್ತಾರೆ.

ಇದನ್ನೂ ಓದಿ:ಜೆಡಿಎಸ್ ಗೆ ಅಡ್ಡ ಮತದಾನದ ಗುನ್ನ: ಬಿಜೆಪಿ ಗೆಲ್ಲಿಸುವುದಕ್ಕೆ ಅಭಿನಂದನೆಗಳು ಎಂದ ಎಚ್ ಡಿಕೆ

ಮಧ್ಯಪ್ರದೇಶದಿಂದ ವಿಮಾನದಲ್ಲಿ ಬಟಾಣಿ ಪೂರೈಕೆ

ನಾಟಿ ಬಟಾಣಿಗೆ ಬೇಡಿಕೆ ಬಂದಿದೆ. ಪೂರೈಕೆಗಿಂತ ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ದುಪ್ಪಟ್ಟಾಗಿದೆ. ಇದೀಗ ಶುಭ ಕಾರ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಟಾಣಿ ಮಾರುಕಟ್ಟೆಗೆ ಪೂರೈಕೆ ಆಗುತ್ತಿದ್ದ ಹಾಗೆ ಕ್ಷಣ ಮಾತ್ರದಲ್ಲಿ ಮಾರಾಟವಾಗುತ್ತದೆ. ಮಧ್ಯಪ್ರದೇಶದಿಂದಲೂ ದಪ್ಪ ಬಟಾಣಿ ವಿಮಾನದ ಮೂಲಕ ಬೆಂಗಳೂರಿಗೆ ಪೂರೈಕೆ ಆಗುತ್ತಿದೆ ಎಂದು ಕಲಾಸಿಪಾಳ್ಯ ತರಕಾರಿ ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ತಿಳಿಸಿದ್ದಾರೆ.

ಶತಕದ ಗಡಿದಾಟಿದ್ದ ಟೊಮೆಟೋ ಸೇರಿದಂತೆ ತರಕಾರಿ ಬೆಲೆ ಇಳಿಕೆ

ಶತಕದ ಗಡಿದಾಟಿದ್ದ ಟೊಮೆಟೋ ಬೆಲೆ ಇದೀಗ ಇಳಿಕೆ ಹಾದಿ ಹಿಡಿದಿದೆ. ಇದರ ಜತೆಗೆ ಬೀನ್ಸ್‌, ಕ್ಯಾರೆಟ್‌ ಸೇರಿದಂತೆ ಇನ್ನಿತರ ತರಕಾರಿ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಪ್ರತಿ ಕೆ.ಜಿಗೆ 120 ರೂ. ವರೆಗೂ ತಲುಪಿದ್ದ ಟೊಮೆಟೋ ಇದೀಗ 45 ರೂ. ಹೋಲ್‌ಸೇಲ್‌ ದರದಲ್ಲಿ ಮಾರಾಟವಾಗುತ್ತಿದೆ. ಮಹಾರಾಷ್ಟ್ರದಿಂದ ಟೊಮೆಟೋ ಪೂರೈಕೆ ಆಗುತ್ತಿದೆ. ಜತೆಗೆ ಕೋಲಾರ ಸೇರಿದಂತೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗ ‌ಳಿಂದಲೂ ಟೊಮೆಟೋ ಪೂರೈಕೆ ಆಗುತ್ತಿದ್ದು ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಕಲಾಸಿಪಾಳ್ಯದ ಹೋಲ್‌ ಸೇಲ್‌ ವ್ಯಾಪಾರಿ ರವಿರಾಜ್‌ ಹೇಳುತ್ತಾರೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next