Advertisement

ದೈನಂದಿನ ಸೋಂಕು ಪ್ರಕರಣ ಇಳಿಮುಖ; 24 ಗಂಟೆಯಲ್ಲಿ ಕೇವಲ ಶೇ.6 ಏರಿಕೆ

12:19 AM Apr 26, 2020 | Sriram |

ದೇಶದಲ್ಲಿನ ಕೋವಿಡ್-19 ಪ್ರಕರಣಗಳ ಸಂಖ್ಯೆ 100 ದಾಟಿದ ನಂತರ ಇದೇ ಮೊದಲ ಬಾರಿಗೆ 24 ಗಂಟೆಗಳ ಅವಧಿಯ ಹೊಸ ಪ್ರಕರಣಗಳ ಸಂಖ್ಯೆ ಕನಿಷ್ಠ ಮಟ್ಟಕ್ಕಿಳಿದಿದೆ. ಶುಕ್ರವಾರ ರಾತ್ರಿ 8ರಿಂದ ಶನಿವಾರ ಬೆಳಗ್ಗೆ 8 ರವರೆಗೆ ಸೋಂಕಿತರ ಸಂಖ್ಯೆಯಲ್ಲಿ ಕೇವಲ ಶೇ.6ರಷ್ಟು ಮಾತ್ರ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

Advertisement

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ನೇತೃತ್ವದಲ್ಲಿ ಶನಿವಾರ ಉನ್ನತ ಮಟ್ಟದ ಸಚಿವರ ಸಮಿತಿಯ 13ನೇ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ದೇಶದ ವಿವಿಧ ರಾಜ್ಯ ಗಳಲ್ಲಿರುವ ಕೋವಿಡ್-19 ಆಸ್ಪತ್ರೆಗಳು, ಐಸೋ ಲೇಷನ್‌ ಬೆಡ್‌ ಗಳು, ವಾರ್ಡ್‌ ಗಳು, ಪಿಪಿಇ ಕಿಟ್‌ಗಳು, ಎನ್‌ 95 ಮಾಸ್ಕ್ಗಳು, ಔಷಧ, ವೆಂಟಿ ಲೇಟರ್‌, ಆಮ್ಲಜನಕದ ಸಿಲಿಂಡರ್‌ಗಳ ಲಭ್ಯತೆ ಮುಂತಾದ ವಿವರಗಳನ್ನೂ ಸಭೆಯಲ್ಲಿ ನೀಡಲಾಗಿದೆ.

ಶುಕ್ರವಾರವಷ್ಟೇ ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 1,700ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಈ ಮೂಲಕ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು ಎಂದು ಹೇಳಲಾಗಿತ್ತು. ಆಗ ಸೋಂಕಿತರ ಸಂಖ್ಯೆಯ ಏರಿಕೆ ಪ್ರಮಾಣ ಶೇ.7.48 ಇತ್ತು. ಆದರೆ, ನಂತರದ 24 ಗಂಟೆಯಲ್ಲಿ (ಶುಕ್ರವಾರ ರಾತ್ರಿ 8ರಿಂದ ಶನಿವಾರ ಬೆ. 8ರವರೆಗೆ) ಈ ಪ್ರಮಾಣ ಶೇ.5.8ಕ್ಕೆ ಇಳಿದಿದೆ ಎಂದು ಸರ್ಕಾರ ತಿಳಿಸಿದೆ.

ಈಗ ಹೇಗಿದೆ?:ಪ್ರಸ್ತುತ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು ಈಗ ಸರಾಸರಿ 9.1 ದಿನಗಳು ಬೇಕು. ಸದ್ಯದ ಮಟ್ಟಿಗೆ ದೇಶದಲ್ಲಿ ಮರಣ ಪ್ರಮಾಣ ಶೇ.3.1ರಷ್ಟಿದೆ.

ಗುಣಮುಖರಾಗುತ್ತಿರುವವರ ಪ್ರಮಾಣ ಶೇ.20.66ರಷ್ಟಿದೆ. ಬಹುತೇಕ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಪರಿಸ್ಥಿತಿ ಉತ್ತಮವಾಗಿದೆ. ಇದನ್ನು ಸೋಂಕು ಕಡಿವಾಣ ಕಾರ್ಯತಂತ್ರ ಹಾಗೂ ದೇಶವ್ಯಾಪಿ ಲಾಕ್‌ಡೌನ್‌ ಪ್ರಭಾವ ಎಂದು ತಿಳಿದುಕೊಳ್ಳಬಹುದು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

ಪರೀಕ್ಷಾ ಕಾರ್ಯತಂತ್ರ, ಪರೀಕ್ಷಾ ಕಿಟ್‌ಗಳ  ಲಭ್ಯತೆ, ಹಾಟ್‌ಸ್ಪಾಟ್‌ಗಳಲ್ಲಿ ಕೈಗೊಳ್ಳಲಾದ ಕಾರ್ಯಗಳು ಹಾಗೂ ಕ್ಲಸ್ಟರ್‌ ನಿರ್ವಹಣೆಯ ಕುರಿತೂ ಸಭೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌, ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಹಾಯಕ ಸಚಿವ ಮನ್ಸುಕ್‌ ಮಾಂಡವ್ಯ ಇದ್ದರು.

“ರ್ಯಾಪಿಡ್‌ ಆ್ಯಂಟಿಬಾಡಿ ಟೆಸ್ಟ್‌ ಕಿಟ್‌’ಬಳಸಬೇಡಿ
ಕೋವಿಡ್-19 ಸೋಂಕಿತರನ್ನು ಪತ್ತೆ ಹಚ್ಚಲು ಬಳಸುವ ಚೀನಾ ನಿರ್ಮಿತ “ರ್ಯಾಪಿಡ್‌ ಆ್ಯಂಟಿಬಾಡಿ ಟೆಸ್ಟ್‌ ಕಿಟ್‌’ಗಳನ್ನು ಮುಂದಿನ ಆದೇಶದವರೆಗೆ ಬಳಸಬಾರದು ಎಂದು ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ. ಈ ಕಿಟ್‌ಗಳು ದೋಷಪೂರಿತವಾಗಿದ್ದು,ನಿಖರ ಫ‌ಲಿತಾಂಶವನ್ನು ನೀಡುತ್ತಿಲ್ಲ ಎಂಬುದಾಗಿ ಹಲವು ರಾಜ್ಯಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ಈ ಕಿಟ್‌ಗಳ ಗುಣಮಟ್ಟ ಹಾಗೂ ಫ‌ಲಿತಾಂಶದ ಬಗ್ಗೆ ನಿಖರತೆ ಬಗ್ಗೆ ಪರಾಮರ್ಶೆ ನಡೆಸಲು ಐಸಿಎಂಆರ್‌ ಎರಡು ತಂಡಗಳನ್ನು ನೇಮಿಸಿದೆ. ಅದು ಪರಿಶೀಲನೆ ನಡೆಸಿ, ಬಳಸಲು ಶಿಫಾರಸು ಮಾಡುವವರೆಗೂ ಈ ಕಿಟ್‌ಗಳನ್ನು ಬಳಸದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗ ಳಿಗೆ ಸೂಚಿಸಲಾಗಿದೆ. ಚೀನಾದ ಎರಡು ಕಂಪನಿಗಳಿಂದ 5 ಲಕ್ಷ “ರ್ಯಾಪಿಡ್‌ ಆ್ಯಂಟಿ ಬಾಡಿ ಟೆಸ್ಟ್‌ ಕಿಟ್‌’ (ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳು) ಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಏನಾಗುತ್ತಿದೆ?
ದೇಶದಲ್ಲಿ ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ಪಿಪಿಇ ಕಿಟ್‌, ಎನ್‌ 95 ಮಾಸ್ಕ್ಗಳ ಉತ್ಪಾದನೆ.

ಪ್ರಸ್ತುತ 104 ದೇಶೀಯ ಪಿಪಿಇ ಉತ್ಪಾದಕರು ಹಾಗೂ ಮೂರು ಎನ್‌95 ಮಾಸ್ಕ್ ಉತ್ಪಾದಕರಿದ್ದಾರೆ.

ದೇಶೀಯ ಉತ್ಪಾದಕರೇ ವೆಂಟಿಲೇಟರ್‌ಗಳನ್ನೂ ತಯಾರಿಸುತ್ತಿದ್ದಾರೆ. 9 ಸಂಸ್ಥೆಗಳಿಂದ 59 ಸಾವಿರ ವೆಂಟಿಲೇಟರ್‌ಗಳಿಗೆ ಆರ್ಡರ್‌ ಮಾಡಲಾಗಿದೆ.

ದೇಶಾದ್ಯಂತ ವಲಸೆ ಕಾರ್ಮಿಕರಿಗೆ 92 ಸಾವಿರ ಎನ್‌ಜಿಒಗಳು,ಸ್ವಸಹಾಯ ಸಂಘಗಳು ಹಾಗೂ ಹಲವು ಸಂಘಸಂಸ್ಥೆ ಗಳು ಆಹಾರ ಪೂರೈಕೆ ಮಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next