ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಹಿಳಾ ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆ ಶೇ. 20ರಷ್ಟು ಇಳಿಮುಖವಾಗಿದ್ದು, ಬಂದ ಕರೆಗಳಲ್ಲಿ ಶೇ. 40ಕ್ಕೂ ಅಧಿಕ ಮಹಿಳೆಯರು ಕೋವಿಡ್ 19 ವೈರಸ್ ಭೀತಿ ಬಗ್ಗೆಯೇ ಆತಂಕ ವ್ಯಕ್ತಪಡಿಸಿದ್ದಾರೆ. ಮಾ. 3ರಿಂದ ಏ. 7ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 916 ಕರೆಗಳು ಸಹಾಯವಾಣಿಗೆ ಬಂದಿದೆ. ಇದರಲ್ಲಿ 318 ಕರೆಗಳು ವೈರಾಣು ಭೀತಿಗೆ ಸಂಬಂಧಪಟ್ಟದ್ದಾಗಿದ್ದು, ಸಮಾಲೋಚನೆ ನಡೆಸಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ ಅಂಶ ತಿಳಿಸಿದೆ.
ಲಾಕ್‌ಡೌನ್‌ಗೆ ಮೊದಲು ಅಂದರೆ ಮಾ. 3ರಿಂದ 21ರವರೆಗೆ 489 ಕರೆಗಳು ಮಹಿಳಾ ಸಹಾಯವಾಣಿಗೆ ಬಂದಿದ್ದು, ಲಾಕ್‌ಡೌನ್ ಆರಂಭವಾದ ಮಾ. 22ರಿಂದ ಏ. 7ರವರೆಗೆ 427 ಕರೆಗಳು ಬಂದಿವೆ. ಈ ಪೈಕಿ 318 ಜನ ಕೋವಿಡ್ 19 ವೈರಸ್‌ಗೆ ಸಂಬಂಧಿಸಿದ ಮಾಹಿತಿ ಪಡೆದಿದ್ದಾರೆ. ಇದರಲ್ಲಿ ಗರ್ಭಿಣಿ ಮತ್ತು ಬಾಣಂತಿಯರು ಮತ್ತು ಮಕ್ಕಳ ರಕ್ಷಣೆ ಸೇರಿ ವೈಯಕ್ತಿಕ ಸಮಾಲೋಚನೆ ನಡೆಸಿದ್ದಾರೆ. ಕೆಲವರು ವೈರಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
“ನಿರ್ಭಯ” ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆ ಮಹಿಳೆಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮಹಿಳಾ ಸಹಾಯವಾಣಿ (ಉಚಿತ ಕರೆ) ಆರಂಭಿಸಿದ್ದು, ರಾಜ್ಯ ಸರ್ಕಾರ ಎರಡು ವರ್ಷದ ಹಿಂದೆ ಈ ಸಂಖ್ಯೆಯನ್ನು ಅಳವಡಿಸಿಕೊಂಡಿತ್ತು. ಈ ಸಹಾಯವಾಣಿಗೆ ಬರುವ ಕರೆಗಳು ಪೊಲೀಸ್ ಇಲಾಖೆಯ ಗಮನಕ್ಕೂ ಬರಲಿವೆ. ಮಹಿಳಾ ದೌರ್ಜನ್ಯ, ಶೋಷಣೆಯಾದಾಗ ಸಹಾಯವಾಣಿಗೆ ಕರೆ ಮಾಡಿದರೆ, ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಸಂರಕ್ಷಿಸಿ ಒನ್ ಸ್ಟಾಪ್ ಕೇಂದ್ರಕ್ಕೆ ರವಾನಿಸಲಾಗುತ್ತದೆ.
ಲಾಕ್‌ಡೌನ್ ಹಿನ್ನೆಲೆ ಜನರು ಮನೆಯಲ್ಲಿ ಇರುವುದರಿಂದ ಕಿಡಿಗೇಡಿಗಳ ಉಪಟಳ ಕಡಿಮೆಯಾಗಿದೆ. ಕುಟುಂಬ ಸದಸ್ಯರೊಂದಿಗೆ ಇರುವುದರಿಂದ ಮಹಿಳೆಯರು ಸುರಕ್ಷಿತವಾಗಿದ್ದಾರೆ. ಆದ್ದರಿಂದ ಕರೆಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಹಿಳಾ ಸಾಮಾಜಿಕ ಕಾರ್ಯಕರ್ತೆಯರ ಪ್ರಕಾರ ಎಂದಿನಂತೆ ಪ್ರತಿದಿನ ಕರೆಗಳು ಬರುತ್ತಿದ್ದು, ಮಹಿಳಾ ದೌರ್ಜನ್ಯ, ಶೋಷಣೆ ಪ್ರಮಾಣದಲ್ಲಿ ವ್ಯತ್ಯಾಸವಾಗಿಲ್ಲ. ಸದ್ಯ ಕುಟುಂಬ ಸದಸ್ಯರು ಮನೆಯಲ್ಲೇ ಇರುವುದರಿಂದ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅವಿಭಕ್ತ ಕುಟುಂಬಗಳಿದ್ದರೆ, ಮಹಿಳೆಯ ಸಮಸ್ಯೆಯನ್ನು ಮನೆಯ ಹಿರಿಯರೇ ಬಗೆಹರಿಸುತ್ತಾರೆ. ಆದರೆ, ಗಂಡ-ಹೆಂಡತಿ, ಮಕ್ಕಳು ಎಂಬ ಕುಟುಂಬ ವ್ಯವಸ್ಥೆ ಇರುವುದರಿಂದ ದೌರ್ಜನ್ಯ ಪ್ರಕರಣ ಹೆಚ್ಚು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಮನೆಯಿಂದ ಹೊರಗೆ ಬಾರದಿರಲು ಜನರಿಗೆ ತಿಳಿಸಿರುವುದರಿಂದ ಹಾಗೂ ಸಾರ್ವಜನಿಕ ಸಾರಿಗೆ ನಿಷೇಧಿಸಿರುವುದರಿಂದ ಶೋಷಣೆಗೊಳಗಾದ ಮಹಿಳೆಯರ ನೆರವಿಗಾಗಿ ತಾಲೂಕು ಮಟ್ಟದಲ್ಲೂ ಇಲಾಖೆ ಸಹಾಯವಾಣಿ ಸೌಲಭ್ಯ ಕಲ್ಪಿಸಿದೆ.
ಮಹಿಳೆಯರ ರಕ್ಷಣೆಗಾಗಿಯೇ ಇಲಾಖೆಯು ಮಹಿಳಾ ಸಹಾಯವಾಣಿ ಸೌಲಭ್ಯ ಒದಗಿಸಲಾಗಿದೆ. ಎಂದಿನಂತೆಯೇ ಕರೆಗಳು ಬರುತ್ತಿದ್ದು, ಅಧಿಕಾರಿಗಳು, ಪೊಲೀಸರು ಸಂರಕ್ಷಣೆ ಮಾಡಲಿಸದ್ದಾರೆ. ಕೋವಿಡ್ 19 ಸೋಂಕು ಕುರಿತು ವೈಯಕ್ತಿಕ ಸಮಾಲೋಚನೆ ಅಗತ್ಯವಿದ್ದವರು ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ.
– ಕೆ.ಎ. ದಯಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ನಿರ್ದೇಶಕ