ಕೊಪ್ಪಳ: ಬರಪೀಡಿತ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಬೆಳೆ ಹಾನಿಯಾಗಿದ್ದು,ಆ.29ರೊಳಗೆ ವರದಿ ಸಲ್ಲಿಸಲು ಸೂಚನೆ
ನೀಡಲಾಗಿದೆ.
ಆ.31ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬರಪೀಡಿತ ಜಿಲ್ಲೆಗಳ ಘೋಷಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಕಂದಾಯ
ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸಚಿವರು ಬುಧವಾರ ಕೊಪ್ಪಳ ಜಿಲ್ಲೆಯ ಬರ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದರು. ಬನ್ನಿ ಕೊಪ್ಪ,ತಳಕಲ್, ಹಲಗೇರಿ, ಭಾನಾಪುರ ಭಾಗಗಳಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಬೆಳೆ ಹಾನಿ ವೀಕ್ಷಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆ ಕೊರತೆ ಯಿಂದ ಬೆಳೆ ಹಾನಿಯಾದ ಪ್ರದೇಶಗಳಲ್ಲಿ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಬೇಕು.
2016ರಲ್ಲಿ ಕೇಂದ್ರ ಸರ್ಕಾರ ಬರಪೀಡಿತ ಜಿಲ್ಲೆಗಳ ಘೋಷಣೆಗೆ ಕೆಲವು ನಿಯಮ ಜಾರಿಗೆ ತಂದಿದ್ದು, ಆ ನಿಯಮದ ಅನ್ವಯ ಆ.29 ರೊಳಗೆ ವರದಿ ಸಲ್ಲಿಸಬೇಕು. ಬೆಳೆ ಹಾನಿಯನ್ನು ಕೇಂದ್ರದ ಗಮನಕ್ಕೆ ತರಲು ಡ್ರೋಣ್ ಕ್ಯಾಮರಾ ಮೂಲಕ ಸಮೀಕ್ಷೆ ನಡೆಸಲಾಗುವುದು. ಅಧಿಕಾರಿಗಳೂ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದರು.