Advertisement

ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ

12:06 PM Aug 04, 2018 | Team Udayavani |

ಬೆಂಗಳೂರು: ನಗರದ ವಿವಿಧೆಡೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಸುಮಾರು ಹತ್ತಕ್ಕೂ ಅಧಿಕ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಇರುವ ರಕ್ಷಣಾ ಇಲಾಖೆಯ ಭೂಮಿಯನ್ನು ಹಸ್ತಾಂತರ ಮಾಡುವ ಸಂಬಂಧ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. 

Advertisement

ರೈಲ್ವೆ ಮೇಲ್ಸೇತುವೆ (ಆರ್‌ಒಬಿ), ಸರ್ವಿಸ್‌ ರಸ್ತೆ, ಪಾದಚಾರಿ ಮಾರ್ಗ, ಮೆಟ್ರೋ ಎರಡನೇ ಹಂತದ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳಿಗೆ ನಗರದಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 16 ಎಕರೆ ಭೂಮಿಯ ಅವಶ್ಯಕತೆ ಇದೆ. ಇದನ್ನು ಹಸ್ತಾಂತರಿಸಿ, ಬದಲಿ ಭೂಮಿಯನ್ನು ಪಡೆಯಲು ಅವಕಾಶ ಕಲ್ಪಿಸುವಂತೆ ರಾಜ್ಯ ಸರ್ಕಾರವು ಶನಿವಾರ ನಗರಕ್ಕೆ ಭೇಟಿ ನೀಡಲಿರುವ ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಲು ಉದ್ದೇಶಿಸಿದೆ.  

ರಕ್ಷಣಾ ಸಚಿವರ ಭೇಟಿ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು. ಅಲ್ಲಿ ಈ ಸಂಬಂಧ ಚರ್ಚಿಸಲಾಯಿತು. ಬಿಬಿಎಂಪಿಗೆ ಸಂಬಂಧಿಸಿದ ಒಟ್ಟಾರೆ 11 ಕಾಮಗಾರಿಗಳು ರಕ್ಷಣಾ ಇಲಾಖೆಗೆ ಸೇರಿದ ಭೂಮಿಯಲ್ಲಿ ಬರುತ್ತವೆ.

ಈ ಪೈಕಿ 9 ಯೋಜನೆಗಳಿಗೆ 16 ಎಕರೆ ಭೂಮಿಯ ಅಗತ್ಯವಿದೆ. ಇದರ ಮೌಲ್ಯ ಸರಿಸುಮಾರು 328 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನು ಹಸ್ತಾಂತರಿಸಿದರೆ, ಪ್ರತಿಯಾಗಿ ಆನೇಕಲ್‌ ತಾಲ್ಲೂಕಿನ ಕಮ್ಮನಾಯಕನಹಳ್ಳಿ ಬಳಿ 207.6 ಎಕರೆ ಹಾಗೂ ಹಲಸೂರು ಕೆರೆ ಪಕ್ಕದಲ್ಲಿ 2.2 ಎಕರೆ ಭೂಮಿಯನ್ನು ರಕ್ಷಣಾ ಇಲಾಖೆಗೆ ನೀಡಲಾಗುವುದು. ಇದರ ಮೌಲ್ಯ 488 ಕೋಟಿ ರೂ. ಆಗುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿ ಗಮನಕ್ಕೆ ತಂದರು. 

ಲೈಸನ್ಸ್‌ ಆಧಾರದಲ್ಲಿ ಬೇಡಿಕೆ: ಈಗಾಗಲೇ ಈ ಭೂಮಿ ವಿನಿಮಯಕ್ಕೆ ರಕ್ಷಣಾ ಇಲಾಖೆಯು ಲಿಖೀತವಾಗಿ ಒಪ್ಪಿಗೆ ನೀಡಿದೆ. ಆದರೆ, ಯಾವ ರೂಪದಲ್ಲಿ ಹಸ್ತಾಂತರ ಮಾಡುತ್ತದೆ ಎನ್ನುವುದು ಕಾದುನೋಡಬೇಕು. ಸಾಮಾನ್ಯವಾಗಿ ರೈಲ್ವೆ ಮೇಲ್ಸೇತುವೆ ಮತ್ತು ಎತ್ತರಿಸಿದ ಸೇತುವೆ (ಎರಡು ಯೋಜನೆಗಳು ಇದೇ ಮಾದರಿಯಲ್ಲಿವೆ)ಗಳನ್ನು ಲೈಸನ್ಸ್‌ ಆಧಾರದಲ್ಲಿ ನೀಡಲಾಗುತ್ತದೆ.

Advertisement

ಇದರಿಂದ ಹೆಚ್ಚು ಅನುಕೂಲ ಆಗುತ್ತದೆ. ಚದರ ಮೀಟರ್‌ಗೆ ವರ್ಷಕ್ಕೆ 1 ರೂ. ಲೈಸನ್ಸ್‌ ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೆ ರಕ್ಷಣಾ ಇಲಾಖೆ ಒಪ್ಪದಿದ್ದರೆ, ನೂರಾರು ಕೋಟಿ ರೂ. ಸರ್ಕಾರಕ್ಕೆ ಹೊರೆ ಆಗಲಿದೆ. ಈ ನಿಟ್ಟಿನಲ್ಲಿ ರಕ್ಷಣಾ ಇಲಾಯ ಮನವೊಲಿಕೆ ನಡೆಸಲಿದೆ ಎನ್ನಲಾಗಿದೆ.  

ಮೆಟ್ರೋಗೂ ಬೇಕಿದೆ ಭೂಮಿ: ಇದಲ್ಲದೆ, “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆ ಅನುಷ್ಠಾನಕ್ಕಾಗಿ ತಾತ್ಕಾಲಿಕವಾಗಿ ಸುಮಾರು 3 ಸಾವಿರ ಚದರ ಮೀಟರ್‌ ಭೂಮಿ ಬೇಕಾಗುತ್ತದೆ. ಈ ಸಂಬಂಧ ಕೂಡ ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಅಧಿಕಾರಿಗಳು ಮಾಹಿತಿ ನೀಡಿದರು. 

-11 ಬಿಬಿಎಂಪಿ ಯೋಜನೆಗಳು
-16.52 ಎಕರೆ ಅಗತ್ಯ ಇರುವ ರಕ್ಷಣಾ ಇಲಾಖೆ ಭೂಮಿ
-328 ಕೋಟಿ ರೂ. ಭೂಮಿಯ ಮೌಲ್ಯ
-209 ಎಕರೆ ರಕ್ಷಣಾ ಇಲಾಖೆಗೆ ಸರ್ಕಾರ ಹಸ್ತಾಂತರಿಸಲು ಉದ್ದೇಶಿಸಿರುವ ಭೂಮಿ
-488 ಕೋಟಿ ರೂ. ಭೂಮಿಯ ಮೌಲ್ಯ

Advertisement

Udayavani is now on Telegram. Click here to join our channel and stay updated with the latest news.

Next