ತುಮಕೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನ. 18ರಿಂದ ಜೆ.ಸಿ. ರಸ್ತೆಯಲ್ಲಿ ರುವ ಕೆಎಸ್‌ಆರ್‌ಟಿಸಿ ಘಟಕ 1ರ ಸ್ಥಳಕ್ಕೆ ತಾತ್ಕಾಲಿಕವಾಗಿ ಬಸ್ ನಿಲ್ದಾಣ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಕೆಎಸ್‌ಆರ್‌ಟಿಸಿ, ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಮಕೂರು ನಗರದಲ್ಲಿರುವ ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ಹೈಟೆಕ್ ಆಗಿ ನಿರ್ಮಿ ಸಲುಸ್ಮಾಟ್‌ಸಿಟಿ ಯೋಜನೆಯಡಿ ಕೈಗೆತ್ತಿ ಕೊಳ್ಳಲಾಗಿದೆ ಎಂದು ಹೇಳಿದರು.
ಕಾಮಗಾರಿ ಪೂರ್ಣಗೊಳ್ಳುವರೆಗೂ ಈಗಿರುವ ಬಸ್ ನಿಲ್ದಾಣದ ಹತ್ತಿರ ದಲ್ಲಿರುವ ಜೆ.ಸಿ. ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಸ್ಥಳಕ್ಕೆ ನಿಲ್ದಾಣ ತಾತ್ಕಾಲಿಕವಾಗಿ ಸ್ಥಳಾಂತರಿಸಿ, ಅಲ್ಲಿಂದ ಬಸ್ ಓಡಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನ.15ರೊಳಗೆ ಪೂರ್ಣ: ಬಸ್‌ಗಳು ಹೊಸ ಸ್ಥಳದಿಂದ ಕಾರ್ಯಾಚರಣೆ ಆರಂಭಿಸುವ ಮೊದಲು ಅಶೋಕ ರಸ್ತೆ, ಜೆ.ಸಿ. ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ ಸೇರಿ ನಿಲ್ದಾಣ ಸಂದಿಸುವ ರಸ್ತೆಗಳು ಸ್ವತ್ಛವಾಗಿರಬೇಕು. ಬಸ್‌ಗಳ ಸಂಚಾರಕ್ಕೆ ಸಮರ್ಪಕವಾಗಿರುವಂತೆ ನ.15ರೊಳಗೆ ಈಗಾಗಲೇ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸ್ಮಾರ್ಟ್‌ಸಿಟಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಜೆ.ಸಿ.ರಸ್ತೆ, ಪ್ರಶಾಂತ ಚಿತ್ರಮಂದಿರ ರಸ್ತೆ, ಕೆನರಾ ಬ್ಯಾಂಕ್ ರಸ್ತೆ ಹಾಗೂ ಅಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮುಕ್ತ ರಸ್ತೆಯನ್ನಾಗಿ ಘೋಷಿಸ ಬೇಕಾಗಿದೆ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ರಸ್ತೆಯಲ್ಲಿ ಕ್ಯಾಂಟರ್‌ಗಳು, ಗೂಡ್ಸ್ ವಾಹನಗಳ ನಿಲ್ದಾಣವಿದ್ದು, ಬೇರೆಡೆಗೆ ಸ್ಥಳಾಂತರಿಸಬೇಕಿದೆ. ನಗರದ ಒಳಗಡೆ ದೊಡ್ಡ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿಲ್ಲ ಎಂದು ಹೇಳಿದರು.
ವೀಡಿಯೋ ಸಿದ್ಧಪಡಿಸಿ: ಬಸ್ ನಿಲ್ದಾಣದ ಬದಲಾವಣೆ ಹಾಗೂ ಮಾರ್ಗದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ನೀಡ ಬೇಕು. ರೂಟ್‌ಮ್ಯಾಪ್ ಬಗ್ಗೆ 30 ಸೆಕೆಂಡಿನ ವಿಡಿಯೋ ಸಿದ್ಧಪಡಿಸಿ ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಹೊಂದಿ ಕೊಂಡಂತೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗ ಆಟೋಗಳಿಗೆ ನಿಲ್ದಾಣ ಕಲ್ಪಿಸ ಲಾಗುವುದು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದರು.
ನಿರ್ಮಾಣ ಕಾಮಗಾರಿ ಕೈಗೊಂಡಿರುವ ಎಂ.ಜಿ. ಕ್ರೀಡಾಂಗಣ ಹಾಗೂ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಾಂಕ್ರೀಟ್, ಜಲ್ಲಿ ಸೇರಿ ಅವಶ್ಯಕತೆಯಿರದ ತ್ಯಾಜ್ಯ ವಸ್ತು ತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿ ಗುರುತಿಸಿರುವ ಪ್ರದೇಶ ದಲ್ಲಿ ಸುರಿಯುವಂತೆ ಎಂಜಿನಿಯರ್‌ಗಳಿಗೆ ಸೂಚಿಸಿ, ತ್ಯಾಜ್ಯ ವಸ್ತು ಮರು ಬಳಕೆ ಮಾಡಲು ಚಿಂತಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್ ಸೇರಿ ಸ್ಮಾರ್ಟ್‌ಸಿಟಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಇತರರಿದ್ದರು.