ಚಿಕ್ಕಮಗಳೂರು: ತಾಲೂಕಿನ ಕೆಲವೆಡೆಗಳಲ್ಲಿ ಸದ್ಯಕ್ಕೆ ಸ್ವಲ್ಪ ಮಳೆಯಾಗಿದೆ. ಆದರೂ ಮಳೆ ಕೊರತೆ ಇದ್ದೇ ಇದೆ. ಮಳೆ ಕೊರತೆ ಮುಂದುವರೆದಲ್ಲಿ ತಾಲೂಕಿನ 3 ಸ್ಥಳಗಳಲ್ಲಿ ಗೋ ಶಾಲೆ ತೆರೆಯಲು ಪ್ರಸ್ತಾವನೆ ಸಲ್ಲಿಸಲು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ
ಕೈಗೊಳ್ಳಲಾಯಿತು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಈ.ಆರ್.ಮಹೇಶ್, ತಾಲೂಕಿನ ವಿವಿಧ ಕಡೆ ಉತ್ತಮ ಮಳೆಯಾಗಿದೆ. ಆದರೆ, ಲಕ್ಯಾ, ಅಂಬಳೆ, ಆಲ್ದೂರು ಮತ್ತು ಕಸಬಾ ಹೋಬಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ
ಮಳೆಯಾಗಿಲ್ಲ. ಹಾಗಾಗಿ ಮತ್ತೆ ಗೋಶಾಲೆ ತೆರೆಯಲು ಜಿಲ್ಲಾ ಪಂಚಾಯತ್ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಇದಕ್ಕೂ ಮುನ್ನ ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಈವರೆಗೆ ತಾಲೂಕಿನಲ್ಲಿ 995 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 843 ಮಿಮೀ ಮಳೆಯಾಗಿ, ಶೇ.15 ರಷ್ಟು ಕೊರತೆಯಿದೆ. ವಸ್ತಾರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ, ಆಲ್ದೂರಿಗೆ ಮಳೆಯಾಗಿಲ್ಲ ಎಂದರು. ಈ ವೇಳೆ ಸದಸ್ಯ ಮಹೇಶ್ ಮಾತನಾಡಿ, ಮಳೆ ಮಾರುತಗಳು ಬರುವುದೇ ಆಲ್ದೂರು ಕಡೆಯಿಂದ, ವಸ್ತಾರೆಗೆ ಮಳೆಯಾದರೆ ಆಲ್ದೂರಿಗೂ ಸಹಜವಾಗಿ ಮಳೆಯಾಗಬೇಕು ಎಂದರು. ಇದಕ್ಕೆ ದನಿಗೂಡಿಸಿದ ಸದಸ್ಯ ಡಿ.ಜೆ.ಸುರೇಶ್, ವಸ್ತಾರೆಯಲ್ಲಿ ಗದ್ದೆಗಳು ಒಣಗಿವೆ, ಕೆರೆಕಟ್ಟೆಗಳು ತುಂಬಿಲ್ಲ, ಕೃಷಿ ಹೊಂಡಗಳು ಖಾಲಿ ಇವೆ. ಆದರೆ ಇಲ್ಲಿ ಮಳೆ ಜಾಸ್ತಿ ಆಗಿದೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಹೇಶ್ ಮಳೆ ಮಾಪನ ಕೇಂದ್ರಗಳನ್ನು ಒಮ್ಮೆ ತಜ್ಞರಿಂದ ಪರಿಶೀಲಿಸಿ. ಮುಂದೆ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಇದೇ ವರದಿಗಳು ಸರ್ಕಾರಕ್ಕೆ ಆಧಾರವಾಗುವುದರಿಂದ ಈ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಲೂಗೆಡ್ಡೆಗೆ ಅಂಗಮಾರಿ ಬಂದು ಕೆಲವೆಡೆ ಬೆಳೆ ಸಂಪೂರ್ಣ ನಾಶವಾಗಿದೆ. ರೋಗ ತಡೆಗೆ ಇಲಾಖೆ ಸೂಕ್ತ ಸಲಹೆ ನೀಡಲಿಲ್ಲ. ಇತ್ತ ಬೆಳೆ
ವಿಮಾ ಪರಿಹಾರವೂ ಬರಲಿಲ್ಲ. ಹೀಗಾದರೆ ರೈತರ ಪರಿಸ್ಥಿತಿ ಏನಾಗಬೇಕು ಎಂದು ಹಲವು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಸಹಾಯಕ ಸಿಬ್ಬಂದಿ ಉತ್ತರಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಪ್ಪ ಸಭೆಗೆ ಮಾಹಿತಿ ನೀಡಿ ಅ.2 ರಿಂದ ಅಂಗನವಾಡಿ ಕೇಂದ್ರಗಳಲ್ಲೇ ಬಾಣಂತಿ ಮತ್ತು ಗರ್ಭಿಣಿಯರಿಗೆ
ಮಾತೃಪೂರ್ಣ ಯೋಜನೆಯಡಿ ಪೌಷ್ಟಿಕ ಆಹಾರ ನೀಡಲಾಗುವುದು ಎಂದು ತಿಳಿಸಿದರು. ಸದಸ್ಯೆ ಭವ್ಯ ನಟೇಶ್ ಮಾತನಾಡಿ, ಆಲ್ದೂರು
ಸರ್ಕಾರಿ ಆಸ್ಪತ್ರೆಗೆ ವೈದ್ಯರು ಮತ್ತು ನರ್ಸ್‌ಗಳನ್ನು ನೇಮಿಸುವಂತೆ ಆಗ್ರಹಿಸಿದರು. ಕುಸುಮ ದೊಡ್ಡೆಗೌಡ ಮಾತನಾಡಿ, ನಮ್ಮಲ್ಲಿನ ಅಂಗನವಾಡಿಯಲ್ಲಿ ಮಕ್ಕಳಿಗೆ ಅರ್ಧ ಮೊಟ್ಟೆ ಕೊಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ಕೃಷ್ಣಪ್ಪ, 3 ರಿಂದ 6 ವರ್ಷದ ಮಕ್ಕಳಿಗೆ ಮಾತ್ರ ಮೊಟ್ಟೆ ಕೊಡಬೇಕು ಎಂದು ಆದೇಶವಿದೆ. ಆದರೆ, ಅಲ್ಲಿ ಸಣ್ಣ ಮಕ್ಕಳು ಕೂಡ ಬರುವುದರಿಂದ ಅವರಿಗೆ ಸುಧಾರಿಸಿ ಕೊಡುವಂತೆ ಸೂಚಿಸಿರುವುದಾಗಿ ಹೇಳಿದರು.
ಉಪಾಧ್ಯಕ್ಷ ಸುರೇಶ್, ಇಒ ಸಿದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಹಾಜರಿದ್ದರು.