Advertisement

ಮುಖ್ಯಮಂತ್ರಿ ಬಳಿ ರೈತರ ನಿಯೋಗ ತೆರಳಲು ನಿರ್ಧಾರ: ಸಾಮೀಜಿ

09:42 AM Jan 05, 2019 | |

ಹೂವಿನಹಿಪ್ಪರಗಿ: ತಾಲೂಕಿನ ಕುದರಿಸಾಲವಾಡಗಿ ಮುಖ್ಯ ಕಾಲುವೆಯಿಂದ 12 ಕೆರೆಗಳಿಗೆ ನೀರನ್ನು ಪೆಬ್ರವರಿ ಅಂತ್ಯದಲ್ಲಿ ಬಿಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಹಿನ್ನೆಲೆ ರೈತರು ನಡೆಸುತ್ತಿರುವ ಧರಣಿಯನ್ನು ಅಂತ್ಯಗೊಳಿಸಲಾಗುವುದೆಂದು
ಯರನಾಳದ ಸಂಗನಬಸವ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ನಾಡ ಕಚೇರಿ ಆವರಣದಲ್ಲಿ ನಡೆಯುತ್ತಿರುವ ರೈತ ಸಂಘ, ವಿವಿಧ ಮಠಾಧೀಶರು ಹಾಗೂ ಕರವೇ ನಡೆಸುತ್ತಿರುವ 4ನೇ ದಿನದಲ್ಲಿ ಮುಂದುವರಿದಿದ್ದ ಧರಣಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.

ರೈತರು ಹೋರಾಟ ನಡೆಸುತ್ತಿರುವ ಪ್ರತಿಫಲವಾಗಿ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಆದರೆ ಬಳೂತಿ ಜಾಕ್‌ವೆಲ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿರುವುದರಿಂದ 12 ಕೋಟಿಗೂ ಅಧಿಕ ಬೆಲೆ ಬಾಳುವ ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿದ್ದು ಕೆಬಿಜೆಎನ್‌ಎಲ್‌ ಇಲಾಖೆ ಅಧಿಕಾರಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದರು.

ಸರಕಾರ ಬಳೂತಿಯ ಜಾಕ್‌ವೆಲ್‌ ಉಪಕರಣದ ಕೆಲಸವನ್ನು ಟೆಂಡರ್‌ ಕರೆದು ಕಾಮಗಾರಿ ಪೂರ್ಣಗೊಳಿಸಬೇಕಾಗುತ್ತದೆ. ಅದಕ್ಕೆ 4 ತಿಂಗಳ ಕಾಲಾವಕಾಶ ಬೇಕು ಎಂದು ಸಂಬಂಧಿಸಿದ ಅಧಿಕಾರಿಗಳು ಸ್ವಾಮೀಜಿಗಳ ಹಾಗೂ ರೈತರ ನೇತೃತ್ವದ ತಂಡ ಬಳೂತಿಯ ಘಟನಾ ಸ್ಥಳಕ್ಕೆ ಹೋದಾಗ ತಿಳಿಸಿದ್ದಾರೆ. ಆದರೆ ನಾವು ಜ. 7 ಅಥವಾ 8ರೊಳಗೆ ರೈತರನ್ನು ಕರೆದುಕೊಂಡು ಬೆಂಗಳೂರಿಗೆ ನಿಯೋಗ ಹೋಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಅರೊಗ್ಯ ಸಚಿವ ಶಿವಾನಂದ ಪಾಟೀಲರಿಗೆ
ತಿಳಿಸಿದಾಗ ಅದಕ್ಕೆ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ನೇತೃತ್ವದ ತಂಡದವರು ಈ ವಿಷಯ ಮನವರಿಕೆ ಮಾಡಿ, ಶೀಘ್ರವೇ ಬಳೂತಿ ಜಾಕ್‌ವೆಲ್‌ ಮಶೀನರಿ ಕಾಮಗಾರಿ ಪೂರ್ಣಗೊಳಿಸಿ ಫೆಬ್ರವರಿ ಅಂತ್ಯಕ್ಕೆ ನೀರು ಬಿಡುವಂತೆ ಒತ್ತಾಯ ಮಾಡೋಣ. ಅದಕ್ಕೆ
ಬೆಂಗಳೂರಿಗೆ ಆಗಮಿಸವವರು ರೈತ ಮುಖಂಡ ಅರವಿಂದ ಕುಲಕರ್ಣಿ ಅವರನ್ನು ಸಂಪರ್ಕಿಸಲು ತಿಳಿಸಿದರು.

Advertisement

ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಬಳೂತಿ ಜಾಕ್‌ವೆಲ್‌ ಬಳಿಯ ಮಶಿನರಿಗಳಿಗೆ ಆಕಸ್ಮಿಕ ಬೆಂಕಿ ತಗಲಿರುವ ಕಾರಣ ಕೆರೆಗಳಿಗೆ ನೀರು ಬರುವುದು ವಿಳಂಬವಾಗುತ್ತದೆ. ಆದರೆ ಪೆಬ್ರವರಿ ಅಂತ್ಯದಲ್ಲಿ ನೀರು ಬಿಡುವಂತೆ ಸರಕಾರಕ್ಕೆ ಒತ್ತಾಯಿಸೋಣ ಎಂದು ಹೇಳಿದರು. ಗ್ರೇಡ್‌-2 ತಹಶೀಲ್ದಾರ್‌ ಪಿ.ಜಿ. ಪವಾರ ಅವರು ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗುವುದೆಂದು ತಿಳಿಸಿದರು. ಕರಿಭಂಟನಾಳದ ಶಿವಕುಮಾರ ಸ್ವಾಮೀಜಿ, ರೈತ ಸಂಘದ ತಾಲೂಕಾಧ್ಯಕ್ಷ ಸಿದ್ರಾಮ ಅಂಗಡಗೇರಿ, ಉಪ ತಹಶೀಲ್ದಾರ್‌ ಜಗದೀಶ ಹಾರಿವಾಳ, ರೈತ ಮುಖಂಡರಾದ ಗಿರೀಶ ಶಿವಯೋಗಿ, ಸಿದ್ದಲಿಂಗಯ್ಯ ಹಿರೇಮಠ, ಸಿದ್ದು ಹಾದಿಮನಿ, ರಮಜಾನ ಮುಜಾವರ, ಅಶೋಕ ಶಿವಯೋಗಿ, ಪರಮಣ್ಣ ಭಜಂತ್ರಿ, ಪಾವಡೆಪ್ಪ ಹಳೆಗೌಡರ, ಮಲ್ಲಣ್ಣ ಭಜಂತ್ರಿ, ಶರಣಗೌಡ ಪಾಟೀಲ, ಲಾಲ್‌ಸಾಬ ಮುಲ್ಲಾ, ಹಸನಸಾಬ ಮುಲ್ಲಾ, ಸುಭಾಷ್‌ ಐಹೋಳಿ, ಎಂ.ಎ. ಪೂಜಾರಿ, ಅರವಿಂದ ಬ್ಯಾಕೋಡ
ಇದ್ದರು.

ಧರಣಿ ಅಂತ್ಯ: ಕಳೆದ ನಾಲ್ಕು ದಿನಗಳಿಂದ ಹೂವಿನಹಿಪ್ಪರಗಿ ಸೇರಿದಂತೆ ವಿವಿಧ ಗ್ರಾಮದ ಕರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟವನ್ನು ಶುಕ್ರವಾರ ಯರನಾಳ ಶ್ರೀಗಳ ಭರವಸೆ ಮೇರೆಗೆ ಹೋರಾಟ ಅಂತ್ಯಗೊಳಿಸಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಲು ರೈತರು ಇದೇ ಸಂದರ್ಭದಲ್ಲಿ ನಿರ್ಧರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next