Advertisement

ಜೆಡಿಎಸ್‌ನಿಂದ ಜಾತಿವಾರು ಸಮಾವೇಶಕ್ಕೆ ನಿರ್ಧಾರ

03:45 AM Jul 07, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಜಾತಿವಾರು ಸಮುದಾಯಗಳ ಓಲೈಕೆಗೆ ಜೆಡಿಎಸ್‌ ಮುಂದಾಗಿದ್ದು ವಿಭಾಗೀಯ ಮಟ್ಟದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದೆ.

Advertisement

ಮಾಜಿ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಸಮ್ಮುಖದಲ್ಲಿ ಗುರುವಾರ ನಡೆದ ಜೆಡಿಎಸ್‌ ಕೋರ್‌ ಕಮಿಟಿ ಹಾಗೂ ಶಾಸಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಮೈಸೂರಿನಲ್ಲಿ -ಹಿಂದುಳಿದ ವರ್ಗಗಳ ಸಮಾವೇಶ, ಬಿಜಾಪುರದಲ್ಲಿ ರೈತರ ಸಮಾವೇಶ, ರಾಯಚೂರಿನಲ್ಲಿ ಅಲ್ಪಸಂಖ್ಯಾತರ  ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ , ತುಮಕೂರಿನಲ್ಲಿ ಪರಿಶಿಷ್ಟರ ಸಮಾವೇಶ, ಹಾವೇರಿ ಅಥವಾ ಹುಬ್ಬಳ್ಳಿಯಲ್ಲಿ ಯುವಕರ ಸಮಾವೇಶ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.

ಪಕ್ಷದ ರಾಜ್ಯ ಘಟಕಕ್ಕೆ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಆದಷ್ಟು ಬೇಗ ಪೂರ್ಣಗೊಳಿಸಲ ಹಾಗೂ ತಾಲೂಕು ಮತ್ತು ಜಿಲ್ಲಾ ಘಟಕಗಳು ನಿರಂತರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫ‌ಲ್ಯಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕೋರ್‌ ಕಮಿಟಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ಸಂಘಟನೆ ಹಾಗೂ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಲಾಗಿದ್ದು, ನಿರಂತರ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

Advertisement

ಪಕ್ಷದ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ನಾಳೆಯಿಂದ ಯಾದಗಿರಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಕರನ್ನು ಸಂಘಟಿಸಲಿದ್ದಾರೆ. ಅದೇ ರೀತಿ ಪಕ್ಷದ ಇತರೆ ನಾಯಕರು ಸಹ ನಿರಂತರ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಿಕೊಳ್ಳಲು ಮುಂದಾಗಿದ್ದೆವು. ರೈತರು, ಯುವಕರು, ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ವಿದ್ಯಾರ್ಥಿ ಸಮುದಾಯ ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮದೇ ಆದ ದೃಷ್ಟಿಕೋನ ಹೊಂದಿದ್ದು ಅದನ್ನು  ಈಗಲೇ ಜನರ ಮುಂದಿಡಬೇಕು ಎಂಬ  ಉದ್ದೇಶ ನನ್ನದಾಗಿತ್ತು. ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ನಮ್ಮ ಕಾರ್ಯಕ್ರಮ ಹೈಜಾಕ್‌ ಮಾಡಬಹುದು ಎಂಬ ಕಾರಣಕ್ಕೆ ಇನ್ನೂ ಸ್ವಲ್ಪ ದಿನ ಬಿಟ್ಟು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸೂಕ್ತ ನಿರ್ಧಾರ
ಅನಿತಾ ಕುಮಾರಸ್ವಾಮಿ ಸ್ಪರ್ಧೆ ಕುರಿತ ಪ್ರಶ್ನೆಗೆ, ಕಾರ್ಯಕರ್ತರ ಒತ್ತಡ ಇರುವುದು ನಿಜ. ಆದರೆ, ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದಕೊಳ್ಳಲಾಗುವುದು ಎಂದರು.
ಮಾಜಿ ಸಚಿವ ಎಚ್‌.ವಿಶ್ವನಾಥ್‌, ಶಾಸಕ ಮಧು ಬಂಗಾರಪ್ಪ,ಕೋನರೆಡ್ಡಿ, ಮಾಜಿ ಸಚಿವರಾದ ಜಿ.ಟಿ.ದೇವೇಗೌಡ, ಬಿ.ಬಿ.ನಿಂಗಯ್ಯ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಮುಖಂಡರಾದ ಬಿ.ಎಂ.ಫ‌ರೂಕ್‌ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವನಾಥ್‌ಗೆ  “ಅಹಿಂದ’ ಸಂಘಟನೆ ಉಸ್ತುವಾರಿ
*ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಎಚ್‌.ವಿಶ್ವನಾಥ್‌ಗೆ ಅಹಿಂದ ವರ್ಗಗಳ ಸಂಘಟನೆ ಹೊಣೆಗಾರಿಕೆ ನೀಡಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ವಿಧಾನಪರಿಷತ್‌ನ ಮಾಜಿ ಸದಸ್ಯ ಎಚ್‌.ಸಿ.ನೀರಾವರಿ,ಬಿ.ಬಿ.ನಿಂಗಯ್ಯ, ಬಿ.ಎಂ.ಫ‌ರೂಕ್‌ ಸೇರಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಮುಖಂಡರ ತಂಡ ರಚನೆ ಮಾಡಲು ತೀರ್ಮಾನಿಸಲಾಗಿದೆ.  ಈ ಮುಖಂಡರು ರಾಜ್ಯಾದ್ಯಂತ ಪ್ರವಾಸ ಮಾಡಿ ಅಹಿಂದ ವರ್ಗಗಳ ಸಂಘಟನೆ ಮಾಡಲು ಸೂಚನೆ ನೀಡಲಾಗಿದಸೆ. ಈ ಮೂಲಕ ಅಹಿಂದ ಮಂತ್ರ ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲು ತಂತ್ರ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೋರ್‌ ಕಮಿಟಿ ಸಭೆಯ ನಂತರ ಮಾತನಾಡಿದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ವಿಶ್ವನಾಥ್‌ ಅವರ ಹಿರಿತನ, ಅನುಭವ ಹಾಗೂ ಅವರ ಶಕ್ತಿಯನ್ನು ಹೆಚ್ಚಾಗಿ ಬಳಸಿಕೊಳ್ಳಲು ಪಕ್ಷ ತೀರ್ಮಾನಿಸಿದೆ. ಹೆಚ್ಚುವರಿ ಹೊಣೆಗಾರಿಕೆ ಸಹ ನೀಡಲಾಗುವುದು ಎಂದು ಹೇಳಿದರು.

ಮಂಗಳೂರಲ್ಲಿ ಶಾಂತಿ ಸಭೆ
ಕಲ್ಲಡ್ಕ ಪ್ರಕರಣದಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಮಂಗಳೂರಿನಲ್ಲಿ ಶಾಂತಿ ಸಭೆ ನಡೆಸಲು ಜೆಡಿಎಸ್‌ ತೀರ್ಮಾನಿಸಿದೆ. ಮುಂದಿನ ವಾರದಲ್ಲಿ ಬಂಟ್ವಾಳದಲ್ಲಿ ಶಾಂತಿ ಸಭೆ ಆಯೋಜಿಸಲು ಕೋರ್‌ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next