Advertisement

ಸಚಿವ ಚವ್ಹಾಣಗೆ ಕ್ಷೌರ ಮಾಡದಿರಲು ತೀರ್ಮಾನ

08:17 PM Apr 04, 2021 | Team Udayavani |

ಕಲಬುರಗಿ : ಬೀದರ್‌ ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಶು ಸಂಗೋಪನೆ ಸಚಿವರಾದ ಔರಾದ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಕ್ಷೌರ ವೃತ್ತಿ ಬಗ್ಗೆ ಅವಹೇಳನಕಾರಿ ಪದಪ್ರಯೋಗ ಮಾಡಿದ್ದು, ತಕ್ಷಣವೇ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಅವರಿಗೆ ಯಾರೂ ಕ್ಷೌರ ಮಾಡದಿರುವಂತೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಸುಭಾಷ ಬಾದಾಮಿ ತಿಳಿಸಿದರು.

Advertisement

ಉಪ ಚುನಾವಣೆ ಪ್ರಚಾರದಲ್ಲಿ “ಕೇಂದ್ರ ಮತ್ತು ಕರ್ನಾಟಕದಲ್ಲಿ ನಮ್ಮ ಸರ್ಕಾರ ಇದೆ. ಬಸವಕಲ್ಯಾಣದಲ್ಲಿ ಬೇರೆಯವರು ಗೆದ್ದರೆ ಬಂದರೆ ದಾಡಿ, ಶೇವಿಂಗ್‌ ಮಾಡುತ್ತಾರೇನು’ ಎನ್ನುವ ಮಾತನ್ನು ಹೇಳುವ ಮೂಲಕ ಸಚಿವ ಪ್ರಭು ಚವ್ಹಾಣ ಕ್ಷೌರ ವೃತ್ತಿಗೆ ಅಪಮಾನ ಮಾಡಿದ್ದು, ಅತ್ಯಂತ ಖಂಡನೀಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಮ್ಮ ಸಮಾಜದ ಈರಣ್ಣ ಹಡಪದ ಸ್ಪರ್ಧಿಸಿದ್ದಾರೆ.

ಆವರನ್ನು ಉದ್ದೇಶವಾಗಿಟ್ಟುಕೊಂಡು ಇಂತಹ ಮಾತನ್ನಾಡಿದ್ದಾರೆ. ಅಭ್ಯರ್ಥಿ ಗೌರವಯುತ ಸ್ಥಾನದಲ್ಲಿದ್ದು, ಒಂದು ವೃತ್ತಿಗೆ ಅವಮಾನ ಮಾಡುವುದು ಎಷ್ಟು ಸರಿ? ತಮ್ಮ ಪದ ಬಳಕೆ ಬಗ್ಗೆ ಸಚಿವ ಚವ್ಹಾಣ ಬಹಿರಂಗವಾಗಿ ಕ್ಷಮೆ ಕೋರಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಚಿವರಿಂದ ರಾಜೀನಾಮೆ ಪಡೆಯಬೇಕು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವವರೆಗೂ ರಾಜ್ಯಾದ್ಯಂತ ಉಗ್ರ ಪತ್ರಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಚಿವರು ತಮ್ಮ ತಪ್ಪಿಗೆ ಕ್ಷಮೆಯಾಚಿಸಬೇಕು. ಅಲ್ಲದೇ ರಾಜೀನಾಮೆ ಕೊಡಬೇಕು. ಅಲ್ಲಿಯ ವರೆಗೆ ರಾಜ್ಯದ ಯಾವ ಕ್ಷೌರಿಕರು ಸಚಿವ ಚವ್ಹಾಣ ಅವರಿಗೆ ಕ್ಷೌರ ಮಾಡುವುದಿಲ್ಲ. ಈ ಬಗ್ಗೆ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಿದ್ದು, ಅವರು ಯಾವುದೇ ಜಿಲ್ಲೆಗೆ ಹೋದರೂ ಕ್ಷೌರ ಮಾಡದಂತೆ ನಿಷೇಧ ಹೊರಡಿಸಲಾಗಿದೆ. ಬೇಕಾದರೆ ತಮ್ಮ ಮನೆಯಲ್ಲಿ ತಾವೇ ಕ್ಷೌರ ಮಾಡಿಕೊಳ್ಳಲಿ ಅಥವಾ ಮನೆಯವರಿಂದಲೂ ಕ್ಷೌರ ಮಾಡಿಕೊಳ್ಳಲಿ. ಆದರೆ, ಯಾವ ಕ್ಷೌರಿಕರೂ ಅವರಿಗೆ ಕ್ಷೌರ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

ಸಮಾಜದಿಂದ ಪ್ರತಿಭಟನೆ: ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಸವಿತಾ ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಚಿವ ಪ್ರಭು ಚವ್ಹಾಣ ಕೂಡಲೇ ರಾಜೀನಾಮೆ ನೀಡಬೇಕೆಂದು ಜಿಲ್ಲಾಧಿ ಕಾರಿಗಳ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗೆ ಮುಖಂಡರು ಮನವಿ ಪತ್ರ ಸಲ್ಲಿಸಿದರು.

Advertisement

ಸಮಾಜದ ಮುಖಂಡರಾದ ಅಂಬರೇಶ ಮಂಗಲಗಿ, ಶರಣಬಸಪ್ಪ ಸೂರ್ಯವಂಶಿ, ಪ್ರಭಾಕರ ಪೆದ್ದರಪೇಟ, ಮದನ ಗದ್ವಾಲ್‌, ರಾಮು ನಾವಲಗಿ, ರಾಜು ಸೇಡಂ, ಗೋವಿಂದ ಚಿಕಲಿಕರ, ರಾಜು ಕೊಳ್ಳಿ, ಶ್ರೀನಿವಾಸ ತಾಂಡೂರಕರ್‌ ಮತ್ತಿತರರು ಪಾಲ್ಗೊಂಡಿದ್ದರು. ಸಚಿವ ಪ್ರಭು ಚವ್ಹಾ ಣ ವಿರುದ್ಧ ಕ್ರಮಕ್ಕೆ ಆಗ್ರಹ ಶಹಾಬಾದ್ ಕ್ಷೌರಿಕ ಸಮಾಜದವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಸಚಿವ ಪ್ರಭು ಚವ್ಹಾಣ ವಿರುದ್ಧ ಕ್ರಮ ಕೈಗೊಳ್ಳಬೇಕು.

ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ನಗರದ ಸವಿತಾ ಸಮಾಜ ಸಂಘದಿಂದ ಉಪ ತಹಶೀಲ್ದಾರ್‌ ಮಲ್ಲಿಕಾರ್ಜುನ ರೆಡ್ಡಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಪ್ರತಿಭಟನಾಕಾರರು, ಬಸವ ಕಲ್ಯಾಣ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವರು ಕ್ಷೌರ ವೃತ್ತಿಯ ಬಗ್ಗೆ ಆಡಿದರೆನ್ನಲಾದ ಅವಹೇಳನಕಾರಿ ಪದಪ್ರಯೋಗಕ್ಕೆ ಕ್ಷಮೆ ಯಾಚಿಸಬೇಕು.

ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸವಿತಾ ಸಮಾಜ ಶಹಬಾದ ತಾಲೂಕ ಅಧ್ಯಕ್ಷ ದಶರಥ ಎಸ್‌. ಕೋಟನೂರ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪಾ ಮೊರೆ, ಉಪಾಧ್ಯಕ್ಷ ನರಸಪ್ಪ ಸತನೂರ, ಖಜಾಂಚಿ ಕಂಟಪ್ಪ ಬಿ.ಕೋಟನೂರ., ಮಲ್ಲು ಅಲ್ಲಿಪುರ್‌, ಶಿವು ಗೋರಕುಂಡಾ, ರವಿ ಹುಲಗೊಳ್‌, ಮುಖಂಡರಾದ ಸಂತೋಷ.ಎಸ್‌.ಕೊಟನೂರ, ರವಿ ಸತನೂರ, ಅಂಜು ಗುರುಜಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next