ಲಕ್ನೋ: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ನಡೆಸಿದ ನೆನಪಿನಲ್ಲಿ ಆಚರಿಸಲಾಗುತ್ತಿದ್ದ “ಶೌರ್ಯ ದಿನ’ ವನ್ನು ಇನ್ನು ಮುಂದೆ ಆಚರಿಸದೇ ಇರಲು ಹಿಂದೂ ಸಂಘಟನೆಗಳು ನಿರ್ಧರಿಸಿವೆ. ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಈ ವರ್ಷ ಶೌರ್ಯ ದಿವಸ ಆಚರಿಸಬೇಡಿ ಹಾಗೂ ಕೋಮು ಸಾಮರಸ್ಯ ಕಾಪಾಡಲು ನೆರವಾಗಿ ಎಂದು ದೇಶದ ಜನತೆಗೆ ಉತ್ತರ ಪ್ರದೇಶದ ಹಿಂದೂ ಸಂಘಟನೆಗಳು ಕರೆ ನೀಡಿವೆ. ಇದಕ್ಕೂ ಮುನ್ನ ಮಾತನಾಡಿದ್ದ ರಾಮ ಜನ್ಮಭೂಮಿ ನ್ಯಾಸ್ ಸಮಿತಿ ಮುಖ್ಯಸ್ಥ ಮಹಾಂತ ನೃತ್ಯ ಗೋಪಾಲ್ ದಾಸ್, ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಅನು ಗುಣವಾಗಿದೆ. ಆದ್ದರಿಂದ ಈ ಆಚ ರಣೆಗೆ ಇನ್ನು ಮುಂದೆ ಅರ್ಥವಿರು ವುದಿಲ್ಲ. ಹಾಗಾಗಿ, ಶೌರ್ಯ ದಿವಸ ಆಚರಣೆ ಕೈಬಿಡಿ ಎಂದು ಅವರು ವಿವಿಧ ಸಂಘಟನೆಗಳಿಗೆ ಮನವಿ ಮಾಡಿದ್ದರು. ಡಿ. 6ರಂದು ಶೌರ್ಯ ದಿವಸ ಅಂಗವಾಗಿ ನಿಮ್ಮ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೀಪ ಹಚ್ಚಿ, ರಾಮನಿಗೆ ಆರತಿ ಬೆಳಗಿ ಸಮಾಜಕ್ಕೆ ಸೌಹಾರ್ದದ ಸಂದೇಶ ನೀಡಿ ಎಂದಿದ್ದಾರೆ.