Advertisement
ವಿಧಾನಸೌಧದಲ್ಲಿ ಗುರುವಾರ ನಿರ್ಗಮಿತ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
ಈಗಾಗಲೇ ರಾಜ್ಯ ಪೊಲೀಸ್ ನಿರ್ದೇಶಕರಾಗಿ ಮಹಿಳೆ ನೇಮಕಗೊಂಡಿದ್ದಾರೆ. ಇದೀಗ ಮುಖ್ಯ ಕಾರ್ಯದರ್ಶಿ ಜವಾಬ್ದಾರಿ ನನಗೆ ಸಿಕ್ಕಿದೆ. ಎರಡು ಪ್ರಮುಖ ಹುದ್ದೆಗಳು ಮಹಿಳೆಯರ ಪಾಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಗಳಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಹಿಳಾ ಸುರಕ್ಷತೆ ವಿಚಾರದಲ್ಲಿ ಏನು ಆಗುತ್ತಿದೆ? ಮುಂದೇನು ಆಗಬೇಕು? ಇರುವ ಲೋಪಗಳೇನು? ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಪೊಲೀಸ್ ಮಹಾನಿರ್ದೇಶಕರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
Advertisement
ಮುಖ್ಯ ಕಾರ್ಯದರ್ಶಿ ಹುದ್ದೆಯ ಅವಧಿ ಕೇವಲ ನಾಲ್ಕು ತಿಂಗಳಾದರು ಮುಖ್ಯ ಕಾರ್ಯದರ್ಶಿ ಹುದ್ದೆಯ ಧನಾತ್ಮಕ ಶಕ್ತಿ ಏನು? ಈ ಶಕ್ತಿ ಬಳಸಿ ಏನು ಬದಲಾವಣೆ ತರಬಹುದು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಸರ್ಕಾರ ಹೆಮ್ಮೆ ಪಡುವ ಜವಾಬ್ದಾರಿ ನೀಡಿದೆ. ಹೀಗಾಗಿ ಸರ್ಕಾರದ ನಿರೀಕ್ಷೆಗಳನ್ನು ತಲುಪುವುದು ನನ್ನ ಜವಾಬ್ದಾರಿ. ಆ ನಿಟ್ಟಿನಲ್ಲಿ ಪ್ರಮಾಣಿಕ ಕೆಲಸ ಮಾಡುತ್ತೇನೆ. ಆದರೆ, ಯಾವತ್ತೂ ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಅವಕಾಶ ನೀಡುವುದಿಲ್ಲ ಎಂದರು.
ಭಾವುಕರಾಗಿದ್ದ ರತ್ನಪ್ರಭಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮತ್ತು ಸುದ್ದಿಗೋಷ್ಠಿಯ ವೇಳೆ ರತ್ನಪ್ರಭ ಅವರು ಭಾವುಕರಾಗಿದ್ದರು. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಯಾವ ಮುಖ್ಯ ಕಾರ್ಯದರ್ಶಿಗೂ ಸಿಗದ ಜನಬೆಂಬಲ ನನಗೆ ಸಿಕ್ಕಿದೆ. ನಾನು ಮುಖ್ಯ ಕಾರ್ಯದರ್ಶಿಯಾಗುವುದನ್ನು ಜನ ಕಾಯುತ್ತಿದ್ದರು ಎನ್ನುವಷ್ಟರ ಮಟ್ಟಿಗೆ ಇಂದು ಜನ ಸೇರಿದ್ದರು. ಇದರಿಂದ ಭಾವುಕಳಾಗುವುದು ಸಹಜ ಎಂದರು. ಅಷ್ಟೇ ಅಲ್ಲ, ಭಾವುಕತೆ ಇದ್ದರೆ ಉತ್ತಮವಾಗಿ ಕೆಲಸ ಮಾಡಬಹುದು. ಬೇರೆಯವರ ಭಾವನೆಗಳನ್ನು ತಿಳಿದುಕೊಳ್ಳಬೇಕಾದರೆ ಭಾವುಕತೆ ಇರಬೇಕು. ಮೊದಲಿನಿಂದಲೂ ನಾನು ಇದೇ ರೀತಿ ಇದ್ದೆ ಎಂದು ಹೇಳಿದರು. ವಿಶೇಷವೆಂದರೆ ಇದೇ ಮೊದಲ ಬಾರಿ ಜೈಕಾರ, ಘೋಷಣೆಗಳೊಂದಿಗೆ ರತ್ನಪ್ರಭ ಅವರು ಅಧಿಕಾರ ಸ್ವೀಕರಿಸಿದರು. ಸಹಜವಾಗಿಯೇ ಇದರಿಂದ ಅವರು ಭಾವುಕರಾಗಿದ್ದರು. ನಿನಗ್ಯಾಕೆ ದೂರದ ಜಿಲ್ಲೆ ಸಿಕ್ಕಿದೆ ಎಂದು ಕೇಳಿದ್ದರು
ನಾನು ಐಎಎಸ್ ಮುಗಿಸಿ ಬಂದ ಆರಂಭದಲ್ಲಿ (1983) ನನಗೆ ಪ್ರಥಮವಾಗಿ ಸಿಕ್ಕಿದ್ದು ಬೀದರ್ ಉಪವಿಭಾಗಾಧಿಕಾರಿ ಹುದ್ದೆ. ಆ ಸಂದರ್ಭದಲ್ಲಿ ನನ್ನ ಬ್ಯಾಚ್‌ಮೆಟ್‌ಗಳೆಲ್ಲಾ, ನಮಗೆಲ್ಲಾ ಒಳ್ಳೆಯ ಜಿಲ್ಲೆ ಸಿಕ್ಕಿದೆ. ನಿನಗೊಬ್ಬಳಿಗೆ ಏಕೆ ದೂರದ ಜಿಲ್ಲೆ ಸಿಕ್ಕಿದೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು, ಇದು ಒಳ್ಳೆಯ ಕಾಣಿಕೆ ಎಂದು ತಿಳಿದುಕೊಳ್ಳುತ್ತೇನೆ ಎಂದಷ್ಟೇ ಹೇಳಿದೆ. ಆದರೆ, ಬೀದರ್ ಜಿಲ್ಲೆಯಲ್ಲಿ ಹೆಚ್ಚಿನ ಸಮಸ್ಯೆ ಇದ್ದುದರಿಂದ ಅದನ್ನು ಬಗೆಹರಿಸಲು ಉಪವಿಭಾಗಾಧಿಕಾರಿ ಹುದ್ದೆಗೆ ಐಎಎಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ನಿರ್ಧರಿಸಿದ್ದರು. ಅದರಂತೆ ನನ್ನನ್ನು ಆಯ್ಕೆ ಮಾಡಿದ್ದರು ಎಂಬುದು ನಂತರ ನನಗೆ ಗೊತ್ತಾಯಿತು. ಈಗಲೂ ಬೀದರ್‌ನ ಜನ ನನ್ನನ್ನು ಹೆಚ್ಚು ಪ್ರೀತಿಸುತ್ತಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ರತ್ನಪ್ರಭ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ರತ್ನಪ್ರಭ ಅವರನ್ನು ಕಾಣಲು ಬಂದ ರತ್ನಪ್ರಭ ಪಾಟೀಲ್
ನೂತನ ಮುಖ್ಯ ಕಾರ್ಯದರ್ಶಿಯಾಗಿ ಕೆ.ರತ್ನಪ್ರಭ ಅವರು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ವಿಶೇಷ ಅತಿಥಿಯೊಬ್ಬರು ಹಾಜರಿದ್ದರು. ಅವರ ಹೆಸರು ರತ್ನಪ್ರಭ ಪಾಟೀಲ್. ಹೌದು, ವಿಶೇಷವೆಂದರೆ ರತ್ನಪ್ರಭ ಪಾಟೀಲ್ ಅವರಿಗೆ ಆ ಹೆಸರು ಇಡಲು ಕಾರಣರಾಗಿದ್ದೇ ಮುಖ್ಯ ಕಾರ್ಯದರ್ಶಿ ರತ್ನಪ್ರಭ. ಐಎಎಸ್ ಮುಗಿಸಿ ಪ್ರೊಬೆಷನರಿ ಅವಧಿ ಮುಗಿಸಿದ ಬಳಿಕ ಅವರಿಗೆ ಪ್ರಥಮವಾಗಿ ಸಿಕ್ಕಿದ್ದು ಬೀದರ್ ಉಪವಿಭಾಗಾಧಿಕಾರಿ ಹುದ್ದೆ. ಅಲ್ಲದೆ, ಬೀದರ್‌ನಲ್ಲಿ ಆ ಹುದ್ದೆಯನ್ನು ಐಎಎಸ್ ಅಧಿಕಾರಿಯೊಬ್ಬರು ಅಲಂಕರಿಸಿದ್ದು ಅದೇ ಪ್ರಥಮ. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾಟೀಲ್ ಎಂಬ ಸಿಬ್ಬಂದಿಯೊಬ್ಬರು, ತಮ್ಮ ಮಗಳೂ ಐಎಎಸ್ ತೇರ್ಗಡೆಯಾಗಿ ರತ್ನಪ್ರಭ ಅವರಂತೆ ಆಗಬೇಕು ಎಂದು ತಮ್ಮ ಪುತ್ರಿಗೆ ರತ್ನಪ್ರಭ ಪಾಟೀಲ್ ಎಂದು ಹೆಸರಿಟ್ಟಿದ್ದರು. ಹೀಗಾಗಿ ರತ್ನಪ್ರಭ ಪಾಟೀಲ್ ಅವರು ಗುರುವಾರ ವಿಧಾನಸೌಧಕ್ಕೆ ಆಗಮಿಸಿ ನೂತನ ಮುಖ್ಯ ಕಾರ್ಯದರ್ಶಿಗೆ ಶುಭ ಕೋರಿದರು.