ಮಡಿಕೇರಿ: ಮಳೆಹಾನಿ ಸಂಭವಿಸಿ ಹತ್ತು ತಿಂಗಳುಗಳೇ ಕಳೆದಿದ್ದರೂ ಮಕ್ಕಂದೂರು ಗ್ರಾಮದಲ್ಲಿ ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲವೆಂದು ಆರೋಪಿಸಿ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ 10 ದಿನಗಳಲ್ಲಿ ಮತ್ತೂಂದು ವಿಶೇಷ ಗ್ರಾಮ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇಷ್ಟು ದಿನ ಕಳೆದರೂ ಸಂತ್ರಸ್ತರಿಗೆ ಒಂದು ಮನೆಯನ್ನೂ ಹಸ್ತಾಂತರಿಸಿಲ್ಲ, ಪರಿಹಾರ ಹಣವೂ ಕೈಸೇರಿಲ್ಲ. ಮನೆ ಕಳೆದುಕೊಂಡ ಕೆಲವು ಸಂತ್ರಸ್ತರ ಹೆಸರುಗಳನ್ನು ಪಟ್ಟಿಯಿಂದಲೇ ಕೈಬಿಡಲಾಗಿದೆ. ಇದೀಗ ಮತ್ತೂಂದು ಮಳೆಗಾಲ ಆರಂಭವಾಗಿದ್ದು, ಅಧಿಕಾರಿಗಳು ಮಾತ್ರ ಸಂತ್ರಸ್ತರನ್ನು ಗೊಂದಲದಲ್ಲೇ ಉಳಿಸಿದ್ದಾರೆ ಎಂದು ಸಂತ್ರಸ್ತ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದರು.
ಗ್ರಾ.ಪಂ.ಅಧ್ಯಕ್ಷೆ ಕಾವೇರಮ್ಮ ಹರೀಶ್ ಅಧ್ಯಕ್ಷತೆಯಲ್ಲಿ ಮಕ್ಕಂದೂರು ವಿಎಸ್‌ಎಸ್‌ಎನ್ ಸಭಾಂಗಣಭದಲ್ಲಿ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತ್ತು. ಗ್ರಾಮ ಸಭೆಗೆ ಮಡಿಕೇರಿ ತಾಲೂಕು ಮಟ್ಟದ ಕೆಳ ಹಂತದ ಅಧಿಕಾರಿಗಳು ಮಾತ್ರ ಹಾಜರಾಗಿದ್ದರು. ಗ್ರಾಮ ಸಭೆಯಲ್ಲಿ ಸಂತ್ರಸ್ತರ ಸಮಸ್ಯೆಗಳಿಗೆ ಉತ್ತರಿಸಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ಬಳಿಕ ಮತ್ತೂಂದು ವಿಶೇಷ ಗ್ರಾಮ ಸಭೆ ಆಯೋಜಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ, ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಸಂತ್ರಸ್ತ ಗ್ರಾಮಸ್ಥ ರವಿ ಕುಶಾಲಪ್ಪ ಮಾತನಾಡಿ, ಮಕ್ಕಂದೂರು ವ್ಯಾಪ್ತಿಯಲ್ಲಿ 330ಕ್ಕೂ ಹೆಚ್ಚು ಮನೆಗಳು ನಾಶವಾಗಿರುವ ಬಗ್ಗೆ ಪಂಚಾಯತ್‌ನಲ್ಲಿ ಮಾಹಿತಿ ಇದೆ. ಆದರೆ ಕಂದಾಯ ಇಲಾಖೆೆ ಅಧಿಕಾರಿಗಳು ಮಾತ್ರ ಬೆರಳೆಣಿಕೆ ಮನೆಗಳ ಲೆಕ್ಕ ಹೇಳುತ್ತಿದ್ದಾರೆ.
ಇಂತಹ ಅಧಿಕಾರಿಗಳಿಂದ ಸಂತ್ರಸ್ತರು ಎಂತಹ ಸೇವೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ , ಜಿ. ಪಂ. ಸದಸ್ಯೆ ಯಾಲದಾಳು ಪದ್ಮಾ ವತಿ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ ಉಪಸ್ಥಿತರಿದ್ದರು.