ಬೆಳ್ತಂಗಡಿ: ಮಾನವನಿಂದ ಪರಿಸರ ಅಶುಚಿತ್ವಗೊಂಡಿದೆ. ಕಸ ಎಸೆದು ಸ್ವಚ್ಛತೆ ಕಾರ್ಯಕ್ರಮ ನಡೆಸುವುದಕ್ಕಿಂತ ಕಸ ಎಸೆಯದಂತೆ ಸಂಕಲ್ಪ ತೊಡಬೇಕು ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪ್ರಯುಕ್ತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಚ್ಛತಾ ಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಗ್ರಾ.ಪಂ. ವತಿಯಿಂದ ಹಮ್ಮಿಕೊಂಡ ಧರ್ಮಸ್ಥಳ ಸ್ವತ್ಛತಾ ಕಾರ್ಯಕ್ರಮ ಬಳಿಕ ಅಮೃತವರ್ಷಿಣೆ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಮನೆಯಲ್ಲೂ ಒಣ ಕಸ, ಹಸಿ ಕಸ ಬೇರ್ಪಡಿಸುವ ಮೂಲಕ ಕಸ ಉತ್ಪಾದನೆಗೆ ಕಡಿವಾಣ ಹಾಕಬೇಕಿದೆ. ಶಿಕ್ಷಣದಿಂದಲೇ ಸ್ವಚ್ಛತೆ ಪಾಠ ಕಲಿಸುವ ಮೂಲಕ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ನಾವು ಎಸೆಯುವ ಪ್ಲಾಸ್ಟಿಕ್ 10 ವರ್ಷಗಳಷ್ಟು ಕಾಲ ಭೂಮಿಯಲ್ಲಿ ಮಲೀನವನ್ನು ಸೃಷ್ಟಿಸುತ್ತದೆ ಎಂದಾದ ಮೇಲೆ ಪರಿಸರಕ್ಕೆ ನಾವೇ ಮಾರಕವಾಗುತ್ತಿದ್ದೇವೆ ಎಂಬ ಪ್ರಜ್ಞೆ ನಮ್ಮಲ್ಲಿ ಬೆಳೆಯಬೇಕಿದೆ. ಕಸ ಎಸೆದವನಿಂದಲೇ ಕಸ ಹೆಕ್ಕುವ ಅಭಿಯಾನ ಆರಂಭಿಸಿದರೆ ಸ್ವಚ್ಛ ಪರಿಸರ ನಮ್ಮದಾಗಲಿದೆ ಎಂದರು.
ಸುಪ್ರಿಯಾ ಹರ್ಷೇಂದ್ರ ಮಾತನಾಡಿ, ಮನುಷ್ಯನ ಆಕಾಂಕ್ಷೆ ಗಳಿಂದ ಪರಿಸರ ಹಾಳಾಗುತ್ತಿದೆ ವಿನಃ ಪ್ರಾಣಿ-ಪಕ್ಷಿಗಳಿಂದಲ್ಲ. ಜಾಗೃತಿಯಿಂದ ಅರಿವು ಮೂಡಿಸುವ ಜತೆಗೆ ಕಾರ್ಯರೂಪಕ್ಕೆ ಬಂದಲ್ಲಿ ಅಭಿಯಾನಕ್ಕೆ ಅರ್ಥ ಬರಲಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ, ಗ್ರಾ.ಪಂ. ಪಿಡಿಒ ಉಮೇಶ್, ಯೋಜನಾಧಿಕಾರಿ ಪ್ರವೀಣ್, ಸ್ವತ್ಛತೆ ವಿಭಾಗದ ನಿರ್ದೇಶಕರು ಲಕ್ಷ್ಮಣ್ ಉಪಸ್ಥಿತರಿದ್ದರು. ಶ್ರೀನಿವಾಸ್ ರಾವ್ ನಿರೂಪಿಸಿದರು.
114 ಮಂದಿ ಭಾಗಿ-292 ಗೋಣಿ ಕಸ ಸಂಗ್ರಹ
ಧರ್ಮಸ್ಥಳ ಆಸುಪಾಸು ಧರ್ಮಸ್ಥಳ ಗ್ರಾ.ಪಂ., ಕನ್ಯಾಕುಮಾರಿ ಯುವತಿ ಮಂಡಲ, ಆಂಗ್ಲ ಮಾಧ್ಯಮ, ಪ್ರೌಢಶಾಲೆ ಧರ್ಮಸ್ಥಳ, ಕೃಷಿ ವಿಭಾಗ, ಅನ್ನಪೂರ್ಣ ಛತ್ರ ಸಿಬಂದಿ, ವಾಹನ ಚಾಲಕ-ಮಾಲಕರು,
ಅಂಗಡಿ ಮಾಲಕರು, ಸ್ಥಳೀಯರು, ದೇವಾಲಯ ಸಿಬಂದಿ ಬೆಳಗ್ಗೆ 6ರಿಂದ 10ರವರೆಗೆ ಮಿಥಿಲಾ
ನಗರ, ಮಂಜುಶ್ರೀ ನಗರ, ಪ್ರೀತಿ ನಗರ, ಟೀಚರ್ ಕ್ವಾರ್ಟರ್ಸ್, ನಡುಗುಡ್ಡೆ ( ರಜತಗಿರಿ), ಜೋಡುಸ್ಥಾನ, ಮಹಾದ್ವಾರ, ರಥಬೀದಿ, ಅಮೃತವರ್ಷಿಣಿ ಸಭಾಭವನ ಸುತ್ತ, ಅಣ್ಣಪ್ಪ ಬೆಟ್ಟ, ವಸತಿಗೃಹ, ಬಸದಿ, ಗಂಗೋತ್ರಿ, ಸಾಕೇತ, ವೈಶಾಲಿ ವಸತಿ ಗೃಹ ಸುತ್ತ, ಧರ್ಮಸ್ಥಳ ಪ್ರೌಢಶಾಲೆಯಿಂದ ನೇತ್ರಾವತಿ ಸ್ನಾನಘಟ್ಟ ಸಹಿತ ರಸ್ತೆ ಬದಿ ಸುತ್ತಮುತ್ತ ಆವರಣ ಸ್ವತ್ಛಗೊಳಿಸಲಾಯಿತು. ಒಟ್ಟು 114 ಮಂದಿ ಭಾಗವಹಿಸಿದ್ದು, 292 ಗೋಣಿಚೀಲ ಕಸ ಸಂಗ್ರಹಿಸಲಾಯಿತು.