ಬೆಂಗಳೂರು: ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ಶೀಘ್ರ ಹಾಗೂ ಕಾಲಮಿತಿಯ ಇತ್ಯರ್ಥಕ್ಕೆ ವಿಕೇಂದ್ರೀಕರಣ ವ್ಯವಸ್ಥೆ ರೂಪಿಸಿ, ಅನ್ಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 93,834 ಪ್ರಕರಣಗಳು ಬಾಕಿ ಇದ್ದು, ಕಾಲಮಿತಿಯ ಇತ್ಯರ್ಥಕ್ಕಾಗಿ ಅಧಿಕಾರಿಗಳಿಗೆ ಮ್ಯಾಜಿಸ್ಟೀರಿಯಲ್ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಈ ನ್ಯಾಯಾಲಯಗಳಲ್ಲಿ ಪ್ರಕರಣಗಳ ವಿಚಾರಣೆ ಸ್ಥಗಿತಗೊಂಡಿದ್ದರಿಂದ ಇತ್ಯರ್ಥಕ್ಕೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳ ಪೈಕಿ ಆಯ್ದ ತಾಲ್ಲೂಕುಗಳ ಪ್ರಕರಣಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿ ಆಯ್ದ ತಾಲ್ಲೂಕುಗಳ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ಶ್ರೇಣಿಯ ವಿಶೇಷ ಭೂಸ್ವಾಧೀನಾಧಿಕಾರಿ, ತಹಸೀಲ್ದಾರ್ ನ್ಯಾಯಾಲಯದ ಪ್ರಕರಣಗಳ ಪೈಕಿ ಆಯ್ದ ಹೋಬಳಿಗಳ ಪ್ರಕರಣಗಳನ್ನು ಉಪ ತಹಸೀಲ್ದಾರ್‌ಗಳು ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಈ ಕುರಿತು 20 ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ಪ್ರಕರಣಗಳ ಇತ್ಯರ್ಥಕ್ಕಾಗಿ ಮಾಸಿಕವಾರು ವಿಚಾರಣೆ, ಇತ್ಯರ್ಥಕ್ಕೆ ಗುರಿ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
93,834 ಪ್ರಕರಣ:
ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ 15,881, ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ 62,100 ಹಾಗೂ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 15,853 ಪ್ರಕರಣಗಳು ಬಾಕಿ ಇವೆ ಎಂದು ಹೇಳಿದರು.
ಹಕ್ಕುಪತ್ರ ವಿತರಣೆ:
ಇದೇ ವೇಳೆ, ರಾಜ್ಯಾದ್ಯಂತ ಹಾಡಿ, ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಎಲ್ಲ ನಾಗರಿಕ ಸೌಲಭ್ಯ ಒದಗಿಸುವ ಕಾರ್ಯಕ್ರಮಗಳನ್ನು ಯಾದಗಿರಿಯಲ್ಲಿ ಮಾಡಲು ತೀರ್ಮಾನಿಸಲಾಗಿದೆ. ಐದು ಜಿಲ್ಲೆಗಳ ಒಟ್ಟು 60,000 ಕುಟುಂಬಗಳಿಗೆ ಅಂದು ಏಕಕಾಲಕ್ಕೆ ಹಕ್ಕುಪತ್ರ ವಿತರಿಸಲಾಗುವುದು. ಕುಟುಂಬಗಳು ನೆಲೆಸಿರುವ ವಿಸ್ತೀರ್ಣದ ಮನೆಗಳನ್ನು ಸಂಬಂಧಪಟ್ಟವರ ಹೆಸರಿಗೆ ನೋಂದಣಿ ಮಾಡಿಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.