Advertisement

ರೈಲು ಮಾರ್ಗ ನಿರ್ಮಾಣಕ್ಕೆ ಡಿ.5ರ ಗಡುವು

03:16 PM Nov 28, 2022 | Team Udayavani |

ರಬಕವಿ-ಬನಹಟ್ಟಿ: ರೂ.726 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಬಾಗಲಕೋಟೆ-ಕುಡಚಿ ರೈಲು ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಷ್ಕ್ರಿàಯತೆ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ರೂ. 3000 ಕೋಟಿ ವೆಚ್ಚಕ್ಕೇರಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಡಿ.15ರೊಳಗೆ ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ ಭೂಮಿಯಲ್ಲಿ ರೈಲು ಹಳಿಗಳ ನಿರ್ಮಾಣ ಕಾರ್ಯ ಜರುಗದಿದ್ದರೆ ಡಿ.17ರಿಂದ ಉಗ್ರ ಹೋರಾಟ ಕೈಗೊಳ್ಳುವುದಾಗಿ ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್‌ ಖಾಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ರಬಕವಿಯ ಶ್ರೀಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರವಿವಾರ ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 2016ರಲ್ಲಿ ಖಜ್ಜಿಡೋಣಿವರೆಗೆ ನಿರ್ಮಾಣಗೊಂಡ ಯೋಜನೆಯಿಂದಾಗಿ ಬಾಗಲಕೋಟೆದಿಂದ ಖಜ್ಜಿಡೋಣಿವರೆಗೆ ಮಾತ್ರ ರೈಲು ಸಂಚಾರ ಆರಂಭಗೊಂಡಿದೆ. ಇದೂವರೆಗೆ ಮುಂದಿನ ಮಾರ್ಗ ರಚನೆಗೆ ಬೇಕಾದ ಕಾಮಗಾರಿ ನಿರ್ವಹಿಸದ ಕಾರಣ ಬೀಳಗಿ, ಮುಧೋಳ, ಜಮಖಂಡಿ ಮತ್ತು ರಬಕವಿ-ಬನಹಟ್ಟಿ ತಾಲೂಕುಗಳ ಜನತೆ ರೈಲು ಸಂಚಾರದಿಂದ ವಂಚಿತರಾಗಲು ಇಲ್ಲಿನ ಜನಪ್ರತಿನಿಧಿಗಳ ಅಸಡ್ಡೆ ಮತ್ತು ಬೇಜವಾಬ್ದಾರಿತನವೇ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದರು.

ಭೂಮಿ ನೀಡಿದ ರೈತರಿಗೆ ಯೋಗ್ಯ ಬೆಲೆ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡಬೇಕು. ನಮ್ಮ ಪ್ರದೇಶದ ಮೂವರು ಸಚಿವರು ಕಳೆದ ಮೂರು ವರ್ಷದಿಂದ ಬರೀ ಭರವಸೆ ನೀಡುತ್ತಾ ಬಂದಿದ್ದಾರೆ. ಬಾಗಲಕೋಟೆ ಮತ್ತು ಜಮಖಂಡಿ ಎಸಿಗಳು ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈ ಯೋಜನೆಯಿಂದ ವಾರ್ಷಿಕ ಶೇ.30ರಷ್ಟು ಆದಾಯ ಕೈಸೇರಲಿದೆ. ಭಾರತದಲ್ಲೇ ಅತ್ಯಧಿಕ ಲಾಭದ ರೈಲು ಮಾರ್ಗ ಇದಾಗಿದೆಯಾದರೂ ಕೇಂದ್ರ ಸರ್ಕಾರ ಈ ಯೋಜನೆಗೆ ತ್ವರಿತ ಕ್ರಮ ಕೈಗೊಳ್ಳದೇ ನಮ್ಮ ಭಾಗದ ಜನತೆಗೆ ಅನ್ಯಾಯವೆಸಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.15ರ ವರೆಗೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿ ಚಾಲನೆಗೆ ಗಡುವು ನೀಡಿದ ಬಳಿಕ ಆಗದಿದ್ದಲ್ಲಿ ಡಿ.17ರಂದು ಬಾಗಲಕೋಟೆ ಜಿಲ್ಲಾದಿಕಾರಿಗಳ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಬಳಿಕ ಡಿ.18ರಂದು ಖಜ್ಜಿಡೋಣಿಯಲ್ಲಿ ಸದ್ಯ ಚಾಲ್ತಿ ಇರುವ ವಾಣಿಜ್ಯ ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವ ಮತ್ತು ಡಿ.19ರಂದು ಲೋಕಾಪುರದಲ್ಲಿ ಬೆಳಗಾವಿ ಅಧಿವೇಶನಕ್ಕೆ ತೆರಳುವ ಎಲ್ಲ ಜನಪ್ರತಿನಿಧಿಗಳನ್ನು ತಡೆದು ಪ್ರತಿಭಟಿಸುವುದಾಗಿ ಖಾಜಿ ಪ್ರಕಟಿಸಿದರು.

ಡಿ.20ರಂದು ಮುಧೋಳ, ಡಿ.21ರಂದು ಜಮಖಂಡಿ, ಡಿ.22ರಂದು ರಬಕವಿ-ಬನಹಟ್ಟಿ, ಡಿ.23ರಂದು ತೇರದಾಳ ಮತ್ತು ಡಿ.24ರಂದು ಕುಡಚಿ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆದು ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧಾರವಾಗಿದ್ದು, ಈ ಪ್ರದೇಶದ ಸಮಸ್ತ ನಾಗರಿಕರು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಕೋರಿದರು.

ಪತ್ರಕರ್ತ ಗುರುರಾಜ ಪೋತ್ನಿಸ್‌ ಮಾತನಾಡಿ, ಜನಾಗ್ರಹಭರಿತ ಪ್ರತಿಭಟನೆಗಳ ಜೊತೆಗೆ ಕಾನೂನು ವ್ಯಾಪ್ತಿಯಲ್ಲಿ ಸರ್ವೋತ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಹೋರಾಟಕ್ಕೆ ಬಲ ನೀಡಲು ಸಲಹೆ ನೀಡಿದರು.

Advertisement

ಕಾನೂನು ಪಂಡಿತರೊಡನೆ ಸಮಾಲೋಚಿಸಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣವನ್ನು ದಾಖಲಿಸಲು ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನತೆಯ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಇದಕ್ಕೆ ಉಗ್ರ ಹೋರಾಟವೇ ತಕ್ಕ ಮಾರ್ಗವಾಗಿದೆಯೆಂದು ಗುಲಾಬಸಾಬ್‌ ಅತ್ತಾರ, ದಯಾನಂದ ಬಿಜ್ಜರಗಿ, ಡಾ| ರವಿ ಜಮಖಂಡಿ, ಹಿರಿಯ ಪತ್ರಕರ್ತ ನೀಲಕಂಠ ದಾತಾರ ಅಭಿಪ್ರಾಯ ಹಂಚಿಕೊಂಡರು.

ಜಯಶ್ರೀ ಗುಲಬಾಳ, ಮಂಜುಳಾ ಭುಸರಿ ಉಪಸ್ಥಿತರಿದ್ದರು. ಸಂವಾದದಲ್ಲಿ ಸಂಜಯ ತೇಲಿ, ರವಿ ಗಿರಸಾಗರ, ರಾಮಣ್ಣಾ ಹುಲಕುಂದ, ಪ್ರಕಾಶ ಸುಡಾಳ, ಶಿವಾನಂದ ಬಾಗಲಕೋಟೆಮಠ, ಪ್ರೊ| ಎಂ.ಎಸ್‌. ಬದಾಮಿ, ಸವಿತಾ ಹೊಸೂರ, ಆನಂದ ಜುಗಳಿ, ರವಿ ಹೇರಲಗಿ ಮುಂತಾದವರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next