Advertisement

ಇನ್ನೆಷ್ಟು ವರ್ಷ ಜನತೆಗೆ ಮೋಸ?

10:15 PM Feb 11, 2017 | |

ಸೂಪರ್‌ಸ್ಟಾರ್‌ ರಜನೀಕಾಂತ್‌ ರಾಜಕೀಯ ಪ್ರವೇಶಿಸಿ ಪಕ್ಷ ಸ್ಥಾಪಿಸುವ ಇಂಗಿತ ಪ್ರಕಟಿಸಿದ್ದಾರೆ. ಅವರ ಸಮಕಾಲೀನ ನಟ ಕಮಲ್‌ಹಾಸನ್‌ ಅವರನ್ನು ತಮಿಳುನಾಡಿನ ರಾಜಕೀಯದ ಬಗ್ಗೆ ಮಾತನಾಡಿಸಿದರೆ ಸಿಡಿಗುಂಡಿನಂತಹ ಉತ್ತರ ಹೊರಬೀಳುತ್ತದೆ. – ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕಮಲ್‌ ಹೇಳಿದ್ದಿಷ್ಟು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಅವರಿಗೊಂದು ಛಾನ್ಸ್‌ ಕೊಡಿ, ಬೇಡ ಅನ್ನಿಸಿದರೆ ಕಿತ್ತೂಗೆಯಿರಿ ಎಂದು ನೇರವಾಗಿ ಹೇಳಿದ್ದೀರಿ. ಶಶಿಕಲಾ ತನ್ನ ಹಠವನ್ನು ತ್ಯಜಿಸಿ ತಮಿಳರ ಭಾವನೆಗಳಿಗೆ ಸ್ಪಂದಿಸಬೇಕಲ್ಲವೆ?

ಖಂಡಿತ. ಜನರ ಭಾವನೆಗಳನ್ನು ಗೌರವಿಸಬೇಕು. ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದಾರೆ. ಅವರಿಗೆ ಅವಕಾಶವೊಂದನ್ನು ಕೊಟ್ಟು ನೋಡಿ. ಅದರ ಬದಲು ಶಶಿಕಲಾ ತಮ್ಮ ಆಧಿಪತ್ಯವನ್ನು ಶಾಸಕರ ಮೇಲೆ, ಜನರ ಮೇಲೆ ಹೇರುವುದೇಕೆ? ನಾನೇನೂ ಪನ್ನೀರ್‌ಸೆಲ್ವಂ ಅವರ ಸ್ನೇಹಿತನಲ್ಲ ಅಥವಾ ಬೆಂಬಲಿಗನಲ್ಲ. ಪ್ರಜಾಸತ್ತಾತ್ಮಕವಾಗಿ ನಾವು ಸಾಗಬೇಕಾದ ದಾರಿ ಇದು. ಅದು ಬಿಟ್ಟು ವ್ಯಕ್ತಿಪೂಜೆಯಲ್ಲಿ ಮುಳುಗಿ ದಡ್ಡರನ್ನು ಹೆಡ್ಡರನ್ನು ಭ್ರಷ್ಟರನ್ನು ಬೆಂಬಲಿಸುತ್ತ ಹೋದರೆ ಶಿಲಾಯುಗಕ್ಕೆ ಮರಳಬೇಕಾದೀತು.  

ರಾಜಕಾರಣಿಗಳು ತಮಿಳರನ್ನು ನಿರಂತರವಾಗಿ ಮೋಸಗೊಳಿಸುತ್ತ, ಬಂದಿದ್ದಾರೆ ಎಂದು ಭಾವಿಸುತ್ತೀರಾ? 
ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ತಮಿಳುನಾಡು ಒಳ್ಳೆಯ ಆಡಳಿತ ಕಂಡಿಲ್ಲ. ಕಾಂಗ್ರೆಸ್‌, ಕಾಮರಾಜ್‌, ರಾಜಾಜಿ ಎಲ್ಲರೂ ಹಿಂದಿನ ವೈಭೋಗದಲ್ಲಿಯೇ ತೃಪ್ತಿಪಟ್ಟುಕೊಂಡರು. ಆ ಬಳಿಕ ದ್ರಾವಿಡ ಪಕ್ಷಗಳು ಅಧಿಕಾರಕ್ಕೆ ಬಂದವು. ಅವರು ತಮ್ಮದು ಜನರ ಪಕ್ಷ, ತಮಿಳರು ದ್ರಾವಿಡರು, ತಾವು ಅವರಿಗಾಗಿ ಆಡಳಿತ ಮಾಡುತ್ತೇವೆ ಅಂದರು. ಭರವಸೆಗಳನ್ನು ಕೊಟ್ಟದ್ದು ಮಾತ್ರ, ಯಾವುದನ್ನೂ ಈಡೇರಿಸಲಿಲ್ಲ.   

ನಿಮ್ಮ ಪ್ರಕಾರ ಈ ಹೊತ್ತಿನಲ್ಲಿ ತಮಿಳರಿಗೆ ಯಾರಿಂದ ಒಳಿತಾಗುತ್ತದೆ – ಪನ್ನೀರ್‌ಸೆಲ್ವಂ ಅಥವಾ ಶಶಿಕಲಾ?   
ಶಶಿಕಲಾ ಅವರ ಅರ್ಹತೆಯೇನು ಅನ್ನುವುದು ನನಗೆ ಗೊತ್ತಿಲ್ಲ, ಜನರಿಗೂ ತಿಳಿದಿಲ್ಲ. ಯಾರಿಗೋ ಒಬ್ಬರಿಗೆ ದೀರ್ಘ‌ಕಾಲ ಅತ್ಯಾಪ್ತರಾಗಿದ್ದರು ಅಂದ ಮಾತ್ರಕ್ಕೆ ಅರ್ಹತೆ ಒದಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಜಯಲಲಿತಾ ಅವರಿಗೆ ನಿಕಟರಾಗಿದ್ದರು ಅನ್ನುವುದೇ ಶಶಿಕಲಾ ಮುಖ್ಯಮಂತ್ರಿಯಾಗಲು ಅಗತ್ಯವಾದ ಅರ್ಹತೆಯೇ? ವಕೀಲನ ಮಗ ಅಂದ ಮಾತ್ರಕ್ಕೆ ನಾನು ಕೋರ್ಟಿನಲ್ಲಿ ಹೋಗಿ ವಾದಿಸಲಾಗುವುದಿಲ್ಲವಲ್ಲ! ನಾನು ಅಭಿನಯ ತರಬೇತಿ ಪಡೆದು ನಟನಾಗಿದ್ದೇನೆ. ಆಯಾಯ ವೃತ್ತಿಗೆ ಅದಕ್ಕೆ ಅಗತ್ಯವಾದ ನೈಪುಣ್ಯ, ಅನುಭವ, ತರಬೇತಿ ಬೇಕು. 

Advertisement

ನಿಮ್ಮ ಮಾತಿನಲ್ಲಿ ಹತಾಶೆ ಕಾಣಿಸುತ್ತಿದೆ. ತಮಿಳುನಾಡಿನ ರಾಜಕಾರಣಿ ವರ್ಗ ಜನರನ್ನು ಮೋಸಗೊಳಿಸಿದೆ ಎಂದೇ? 
ಎಷ್ಟು ಕಾಲದಿಂದ ಈ ಮೋಸ ನಡೆಯುತ್ತ ಬಂದಿದೆ ಮತ್ತು ಇನ್ನೆಷ್ಟು ಸಮಯ ಈ ವಂಚನೆ ಮುಂದುವರಿಯಲಿಕ್ಕಿದೆ? ರಾಜಕಾರಣಿಗಳು ಕುಂಟು ನೆಪ, ಸಬೂಬುಗಳನ್ನು ಹೇಳುತ್ತಲೇ ಜನರನ್ನು ಸತತವಾಗಿ ವಂಚಿಸುತ್ತ ಬಂದಿದ್ದಾರೆ. ಸಬೂಬು ಹೇಳಬೇಡಿ; ನೀವು ಒಂದಾದರೂ ಒಳ್ಳೆಯ ಕೆಲಸ ಮಾಡಿದ್ದೀರಾ? ಮಾಡಿದ್ದರೆ ಅದರ ಫ‌ಲಿತಾಂಶ, ಸಾಕ್ಷಿಗಳನ್ನು ತೋರಿಸಿ. ಒಳ್ಳೆಯ ರಸ್ತೆಗಳಿವೆಯಾ, ನದಿಗಳು ನಿರ್ಮಲವಾಗಿವೆಯಾ? ನೀವು, ರಾಜಕಾರಣಿಗಳು ಏನನ್ನೂ ಮಾಡಿಲ್ಲ. ಚೆನ್ನೈ ಸುತ್ತ ಎರಡು ಚರಂಡಿಗಳಿವೆ, ನೂರು ವರ್ಷಗಳ ಹಿಂದೆ ಅವು ನದಿಗಳಾಗಿದ್ದವು. ಜನರಿಗಾಗಿ ಒಳ್ಳೆಯದನ್ನು ಮಾಡಿ, ನಿರ್ಮಲೀಕರಣದಂತಹ ಸರಳ ಸಂಗತಿಯಿಂದ ನಿಮ್ಮ ಕೆಲಸಗಳನ್ನು ಆರಂಭಿಸಿ.  

ರಾಜಕಾರಣಿಗಳದ್ದು ಭ್ರಷ್ಟರ ಕೂಟ ಅನ್ನುತ್ತೀರಿ. ಈ ಕಾರಣದಿಂದಾಗಿ ತಮಿಳು ರಾಜಕಾರಣಿಗಳು ಜನರಿಂದ ಮತ್ತು ಜನರ ಹಿತಾಸಕ್ತಿಗಳಿಂದ ಬಹುದೂರದಲ್ಲಿದ್ದಾರೆಯೇ? 
ಖಂಡಿತವಾಗಿ. ಕಾಂಗ್ರೆಸ್ಸನ್ನೇ ನೋಡಿ. ತಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವು, ಹೀಗಾಗಿ ದೇಶದ ಪ್ರತಿಯೊಬ್ಬರೂ ತಮ್ಮ ಋಣದಲ್ಲಿದ್ದಾರೆ ಅಂದುಕೊಂಡರು. ಇದು ಸರಿಯಲ್ಲ, ಸರಕಾರ ಏನು ಮಾಡಿದೆ ಅನ್ನುವುದನ್ನು ನೋಡಿ ಮತದಾರರು ನಿರ್ಧರಿಸಬೇಕು. ಸ್ವತ್ಛ ಆಡಳಿತ ನೀಡುವ ಮನಸ್ಸಿದ್ದರೆ ಐದೇ ವರ್ಷಗಳಲ್ಲಿ ಏನೇನನ್ನೆಲ್ಲ ಮಾಡಿ ತೋರಿಸಬಹುದು! ತಮಿಳುನಾಡಿನಂತಹ ಒಂದು ರಾಜ್ಯವನ್ನು ಅಭಿವೃದ್ಧಿ ಮಾಡುವ ಆಸೆ ಹುಟ್ಟಿಸುತ್ತ ಎಲ್ಲರೂ ಅರ್ಧ ಶತಮಾನ ವ್ಯರ್ಥ ಮಾಡಿದ್ದಾರೆ. ಇದು ಒಂದು ರಾಜ್ಯದ ಕತೆ, ಇನ್ನು ಇಡೀ ದೇಶದಲ್ಲಿ ಕೂಡ ಆಗಿರುವುದು ಇದೇ ಅಲ್ಲವೇ?  ನಾನು ಯಾವುದೋ ಒಂದು ಪಕ್ಷವನ್ನಷ್ಟೇ ದೂರುತ್ತಿಲ್ಲ. ತಮಿಳುನಾಡು ಕಂಡ ಎಲ್ಲ ರಾಜಕಾರಣಿಗಳದ್ದೂ ಇದೇ ಕತೆ. ತಮಿಳುನಾಡಿನ ಜನರು ಈಗ ಧ್ವನಿಯೆತ್ತಲೇಬೇಕು, “ಪ್ರಜಾಸತ್ತೆ ಎಂದರೆ ಏನು ಎಂದು ನಮಗೆ ಹೇಳಿಕೊಟ್ಟಿದ್ದೀರಿ, ಆದರೆ ಇದುವರೆಗೆ ನಮ್ಮನ್ನು ವಂಚಿಸುತ್ತಲೇ ಬಂದಿದ್ದೀರಿ. ನಮಗೆ ಬೇಕಾದ ಒಳ್ಳೆಯ ಆಡಳಿತ ಸಿಗುತ್ತಿಲ್ಲ. ನಾವು ಕುರಿಗಳಲ್ಲ, ನಮಗೆ ನಾಯಕರು ಬೇಕಿಲ್ಲ. ನಮ್ಮಂತೆ ಇದ್ದು ರಾಜ್ಯ, ದೇಶಕ್ಕಾಗಿ ಕೆಲಸ ಮಾಡುವ ಜನರು ನಮಗೆ ಬೇಕು’ ಎಂದು ಈ ರಾಜಕಾರಣಿಗಳಿಗೆ ಸ್ಪಷ್ಟವಾಗಿ ತಿಳಿಸಿಕೊಡಬೇಕು.

ನಿಮ್ಮ ಮಾತಿನಲ್ಲಿ ಒಬ್ಬ ಉದಯೋನ್ಮುಖ ರಾಜಕಾರಣಿಯ ವರಸೆ ಕಾಣಿಸುತ್ತಿದೆ. ತಮಿಳುನಾಡಿನಲ್ಲಿ ಹಲವು ಸಿನೆಮಾ ತಾರೆಯರು ರಾಜಕಾರಣಿಗಳಾಗಿದ್ದಾರೆ – ಎಂಜಿಆರ್‌, ಎನ್‌ಟಿಆರ್‌… ಕಮಲ್‌ ಹಾಸನ್‌ ಕೂಡ ಈ ಯಾದಿಗೆ ಸೇರಬಹುದೇ?
ಇಲ್ಲ, ನಾನು ಹಾಗೆ ಭಾವಿಸುವುದಿಲ್ಲ. ನಿಮಗೆ ಪ್ರಾರ್ಥನೆಯಲ್ಲಿ ನಂಬಿಕೆ ಇದ್ದರೆ ನನಗಾಗಿ, ನಾನು ರಾಜಕೀಯಕ್ಕೆ ಬರಬಾರದು ಎಂಬುದಾಗಿ ಪ್ರಾರ್ಥಿಸಿ. ಮತದಾನ ಮಾಡಿದಾಗ ನನ್ನ ಬೆರಳಿಗೆ ಮಸಿ ಹಾಕುತ್ತಾರೆ. ರಾಜಕಾರಣದ ಕಪ್ಪು ಮಸಿ ಮೆತ್ತಿಕೊಳ್ಳುವುದನ್ನು ನಾನು ಅಷ್ಟಕ್ಕೇ ಸೀಮಿತಗೊಳಿಸಿದ್ದೇನೆ. ಅದು ಅದಕ್ಕಿಂತ ಹೆಚ್ಚು ನನ್ನ ಮೇಲೆ ಹರಡಿಕೊಳ್ಳುವುದು ನನಗಿಷ್ಟವಿಲ್ಲ. ಆದರೆ ನನಗೆ ರಾಜಕೀಯ ಪ್ರಜ್ಞೆ ಇದೆ, ನನ್ನದೇ ಆದ ರಾಜಕೀಯ ಸಿದ್ಧಾಂತಗಳಿವೆ. 

ಜನರಿಗೆ ಯಾವುದು ಒಳಿತೋ ಅದಕ್ಕೆ ನನ್ನ ಬೆಂಬಲ. ನಾನು ಮತ್ತು ನನ್ನ ಜನರು ಈ ಕೊಳಕು ರಾಜಕಾರಣದ ಬಗ್ಗೆ ಎಷ್ಟು ಆಕ್ರೋಶಗೊಂಡಿದ್ದೇವೆ ಎಂದರೆ, ರಾಜಕೀಯಕ್ಕೆ ಬರುವುದಿದ್ದರೆ ಬಂದೂಕುಗಳನ್ನು ಹೊತ್ತೇ ಬರುತ್ತೇವೆ. ನಾವದನ್ನು ಬಯಸುವುದಿಲ್ಲ. ನಾನು ಆಡುವ ಮಾತುಗಳು ಈ ಹೊತ್ತಿನ ಉದ್ವಿಗ್ನ ಪರಿಸ್ಥಿತಿಯಲ್ಲಿ ಅನಾಹುತವನ್ನು ಸೃಷ್ಟಿಸಬಾರದು ಅನ್ನುವ ಎಚ್ಚರ ನನಗಿದೆ. ಹಾಗಾಗಿ ಸಂಯಮ ಕಾಯ್ದುಕೊಳ್ಳುತ್ತಿದ್ದೇನೆ. ಈ ದೇಶ ಶಾಂತಿಯ ಪರಂಪರೆ ಹೊಂದಿದೆ. ಅದನ್ನು ಮುರಿಯುವುದು ಬೇಡ. ದಯವಿಟ್ಟು ಜನರನ್ನು ದಂಗೆಯೇಳುವ ಪರಿಸ್ಥಿತಿಗೆ ತಳ್ಳಬೇಡಿ. ಆ ದಿನಗಳನ್ನು ಕಾಣಲು ನಾನು ಬಯಸುವುದಿಲ್ಲ, ರಾಜಕಾರಣಿಗಳು ಬೂಟಾಟಿಕೆಯವರು, ಹೀಗಾಗಿ ಜನರನ್ನು ಬಹಳ ಲಘುವಾಗಿ ತೆಗೆದುಕೊಂಡಿದ್ದಾರೆ. ಆದರೆ ಇದಕ್ಕೆ ಒಂದಲ್ಲ ಒಂದು ದಿನ ವಿರಾಮ ಬಿದ್ದೇ ಬೀಳುತ್ತದೆ.

ಕಮಲ್‌ಹಾಸನ್‌ ಖ್ಯಾತ ನಟ

Advertisement

Udayavani is now on Telegram. Click here to join our channel and stay updated with the latest news.

Next