Advertisement

ಮೀನುಗಾರರಿಗೆ ಡಿಸೇಲ್‌ ದರ ಏರಿಕೆಯ ಹೊರೆ

11:13 PM Jan 06, 2020 | Sriram |

ಮಲ್ಪೆ : ಡಿಸೇಲ್‌ ದರ ಹೆಚ್ಚಳ, ಮೀನಿನ ಬರ. ಜತೆಗೆ ಮೇಲಿಂದ ಮೇಲೆ ಎರಗಿದ ಚಂಡಮಾರುತದಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳವನ್ನು ಹೂಡಿ ನಡೆಸುವ ಮೀನುಗಾರಿಕೆಗೆ ಈ ಬಾರಿಯೂ ದೊಡ್ಡ ಹೊಡೆತ ಬಿದ್ದಂತಾಗಿದೆ. ರಾಜ್ಯದ ಕರಾವಳಿಯ ಉದ್ದಕ್ಕೂ ಇದೇ ಪರಿಸ್ಥಿತಿ ಉಂಟಾಗಿದ್ದು ಮೀನುಗಾರರು ತತ್ತರಿಸಿ ಹೋಗಿದ್ದಾರೆ.

Advertisement

ಯಾಂತ್ರಿಕ ದೋಣಿ ಮೀನುಗಾರರಿಗೆ ಋತು ಆರಂಭದ ದಿನದಿಂದಲೂ ಸರಿಯಾದ ಪ್ರಮಾಣದಲ್ಲಿ ಮೀನು ದೊರಕದೆ ನಷ್ಟವನ್ನು ಉಂಟು ಮಾಡಿದ್ದು ನಿರಾಸೆಯನ್ನು ಮೂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೀನುಗಾರರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಬೋಟಿನ ಡಿಸೇಲ್‌ಗಾಗುವಷ್ಟು ಕಿಂಚಿತ್ತು ಲಾಭ ಕಾಣದ ಬೋಟಿನ ಮಾಲಕರು ಹಾಗೂ ಮೀನುಗಾರರು ಸಂಕಷ್ಟಕ್ಕೊಳಗಾಗಿದ್ದಾರೆ.

ಆರಂಭದಲ್ಲೇ ಪ್ರಕೃತಿಯ ಅವಕೃಪೆ
ಈ ಬಾರಿ ಮಳೆಗಾಲ ಆರಂಭ ವಿಳಂಬವಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಮೀನುಗಾರಿಕೆ ಆರಂಭಕ್ಕೆ ಮುನ್ನವೇ ಮಳೆ ಹಾಗೂ ಗಾಳಿಯ ಅರ್ಭಟ ಹೆಚ್ಚಾಯಿತು. ಅಗಸ್ಟ್‌ ತಿಂಗಳ ಕೊನೆಯ ತನಕವೂ ಸಮುದ್ರ ಶಾಂತಗೊಂಡಿಲ್ಲವಾಯಿತು. ವಾಯುಭಾರ ಕುಸಿತ, ಮಳೆಯ ಪರಿಣಾಮ ಬೋಟು ಕಡಲಿಗಿಳಿಯಲು ಸಾಧ್ಯವಾಗಿಲ್ಲ. ಕೆಲವೊಂದು ಬೋಟುಗಳು ಸಮುದ್ರಕ್ಕೆ ಇಳಿದರೆ ಮೀನಿನ ಅಲಭ್ಯತೆಯಿಂದ ಚಭದಾಯಕವಾಗಲಿಲ್ಲ. ಅಕ್ಟೋಬರ್‌ ಕಾಣಿಸಿಕೊಂಡ ಮಹಾ ಚಂಡ ಮಾರುತದಿಂದಾಗಿ ಮೀನುಗಾರಿಕೆಗೆ ತೊಡಕಾಗಿ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿತ್ತು.

ಮೀನುಗಾರಿಕೆಗೆ ಹೊಡೆತ:
ಸಮುದ್ರದಲ್ಲಿ ಮೀನಿನ ಕ್ಷಾಮದ ಜತೆಗೆ ಡಿಸೇಲ್‌ ದರ ಹೆಚ್ಚಳವಾಗಿರುವುದು. ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಿನದಿಂದ ದಿನಕ್ಕೆ ಡಿಸೇಲ್‌ ದರ ಹೆಚ್ಚಳವಾಗುತ್ತಿದ್ದು ಇದೀಗ ಲೀಟರಿಗೆ 70.69ರೂ. ವರೆಗೆ ಏರಿಕೆ ಕಂಡಿದೆ. ಈ ಋತು ಆರಂಭದಲ್ಲಿ 67.82ರೂ. ಇತ್ತು. ಆಳಸಮುದ್ರ ಮೀನುಗಾರಿಕೆಗೆ 10ದಿನಕ್ಕೆ 6000ಲೀಟರ್‌ನಂತೆ ಕನಿಷ್ಟ 4 ಲಕ್ಷ ರೂಪಾಯಿ ಡಿಸೇಲ್‌ ವೆಚ್ಚ ವ್ಯಯಿಸಬೇಕಾಗುತ್ತದೆ. ಬಲೆ, ಮಂಜುಗಡ್ಡೆ ಹಾಗು ಇನ್ನಿತರ ಖರ್ಚು ಬೇರೆ. ಒಟ್ಟು 5ರಿಂದ 6ಲಕ್ಷ ರೂಪಾಯಿ ಮೌಲ್ಯದ ಮೀನು ಹಿಡಿದರೂ ಬೋಟ್‌ ಮಾಲಕರಿಗೆ ಇದರಿಂದ ಲಾಭವಾಗದು.

ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ
ಡಿಸೇಲ್‌ ದರ ಏರಿಕೆಯಾಗುತ್ತಿದೆ, ನಿರೀಕ್ಷಿತ ಮೀನಿನ ಇಳುವರಿ ಸಿಕ್ಕಿಲ್ಲ. ಈ ಬಾರಿಯೂ ನಷ್ಟವಾದರೆ ಮೀನುಗಾರರು ದೊಡ್ಡ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
-ಕೃಷ್ಣ ಎಸ್‌. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next