Advertisement

ಕೇಂದ್ರ ಕೊಡದಿದ್ದರೂ ಸಾಲ ಮನ್ನಾ 

06:00 AM Dec 05, 2018 | Team Udayavani |

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋ ಜನವಾಗಿಲ್ಲ. ಕೇಂದ್ರ ಕೊಡಲಿಲ್ಲ  ಎಂದು ನಾವು ಸುಮ್ಮನೆ ಕೂರುವುದಿಲ್ಲ. ನಾನು ಕೊಟ್ಟ ಮಾತಿನಂತೆ ಸಾಲ ಮನ್ನಾಗೆ ಕ್ರಮ ಕೈಗೊಳ್ಳಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ಕೇಂದ್ರದ ಮುಂದೆ ಬಾಕಿ ಇರುವ ರಾಜ್ಯದ ಯೋಜನೆಗಳ ಕುರಿತು ಸಂಸದರ ಜತೆ ಸಭೆ ನಡೆಸಿದ ಅನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ  ರೈತರು ಮಾಡಿರುವ ಸಾಲದ ಶೇ.50ರಷ್ಟು ಹೊರೆ ಭರಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೆ. ಎರಡು ಬಾರಿ ಪ್ರಧಾನಿಗೂ ಪತ್ರ ಬರೆದಿದ್ದೆ. ಆದರೆ ಕೇಂದ್ರ ಸರಕಾರ ನೆರವಿಗೆ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಕೊಡಲಿಲ್ಲ ಎಂದರೆ ರಾಜ್ಯ ಸರಕಾರ ಕೊಟ್ಟ ಮಾತು ತಪ್ಪುವುದಿಲ್ಲ. ರೈತರು ಆತಂಕಪಡುವ ಅಗತ್ಯವೂ ಇಲ್ಲ. ಡಿ.8ರಂದು ಸೇಡಂ, ದೊಡ್ಡಬಳ್ಳಾಪುರದಲ್ಲಿ ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜನವರಿಯಲ್ಲಿ ಹತ್ತು ಲಕ್ಷ ರೈತರ ಸಮಾವೇಶ ಮಾಡಿ ರೈತರಿಗೆ ಋಣಮುಕ್ತ ಪತ್ರ ನೀಡಲಿದ್ದೇವೆ ಎಂದು ಹೇಳಿದರು. ಈಗಾಗಲೇ ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ಕುರಿತು ಮೊದಲ ಕಂತು ಹಣ ಬಿಡುಗಡೆಗೆ ಸೂಚಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಕುರಿತು ನಿರಂತರ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳೂ ಸಭೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಅಸಲು ಶೇ.50ರಷ್ಟು ಬಿಟ್ಟುಕೊಡಲು ಒಪ್ಪಿದ ಬ್ಯಾಂಕ್‌ಗಳು ಅನಂತರ ಒಪ್ಪುತ್ತಿಲ್ಲ. 2.20 ಲಕ್ಷ ಎನ್‌ಪಿ ಖಾತೆಗಳಿವೆ. ಆ ಖಾತೆ ಹೊರತುಪಡಿಸಿ ಉಳಿದವರಿಗೆ ಜನವರಿಯಲ್ಲಿ 50 ಸಾವಿರ ರೂ. ಮೊದಲ ಹಂತದಲ್ಲಿ ಮನ್ನಾ ಆಗಲಿದೆ. 6,500 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಡಲಾಗಿದೆ. ಆದಷ್ಟು ಬೇಗ ಆ ಸಾಲವೂ ಮನ್ನಾ ಆಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next