ಚನ್ನಪಟ್ಟಣ: ರಾಜ್ಯದ ಜನತೆಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ 2.45 ಲಕ್ಷ ಕೋಟಿ ರೂ. ಸಾಲ ಮಾಡಿ ಹೊರೆಯಾಗಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ಧಾಳಿ ಮಾಡಿದರು.
ತಾಲೂಕಿನ ದೊಡ್ಡಮಳೂರು ಬಳಿ ಬುಧವಾರ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಆಯೋಜಿಸಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ, ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ 18 ಮಂದಿ ಮುಖ್ಯಮಂತ್ರಿಗಳು ಮಾಡಿರದಷ್ಟು ದಾಖಲೆ ಮೊತ್ತದ ಸಾಲ ಮಾಡುವ ಮೂಲಕ ಬರೋಬ್ಬರಿ 2 ಲಕ್ಷದ 42 ಸಾವಿರದ 420 ಕೋಟಿ ರೂ. ಸಾಲ ಮಾಡಿ ರಾಜ್ಯದ ಜನತೆ ಮೇಲೆ ತಲಾ 38 ಸಾವಿರ ರೂ.ಗೂ ಹೆಚ್ಚು ಸಾಲ ಹೊರಿಸಿದ್ದಾರೆ ಎಂದು ಕಿಡಿಕಾರಿದರು.
ಖಜಾನೆ ಲೂಟಿ: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಬೆಂಗಳೂರಿನ ಕಾರ್ನರ್ ಸೈಟುಗಳನ್ನು ಒತ್ತೆ ಇಟ್ಟು 975 ಕೋಟಿ ರೂ. ಪಡೆದಿದ್ದಾರೆ. ಮೈಸೂರು ಮಿನರಲ್ಸ್ ಲಿಮಿಟೆಟ್ ಖಾತೆಯಲ್ಲಿ ಇಟ್ಟಿದ್ದ 1400 ಕೋಟಿ ರೂ. ಪಡೆದಿ ರುವುದು ನಾಚಿಕೆಗೇಡಿನ ಸಂಗತಿ ಎಂದು ಯಡಿಯೂರಪ್ಪ ವಾಗ್ಧಾಳಿ ನಡೆಸಿದರು.
ಸರ್ಕಾರ ಕಾನೂನು ನಿಯಮಗಳನ್ನು ಪಾಲಿಸುತ್ತಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಬರದಂತಾಗಿದೆ. ಅತ್ಯಾಚಾರ, ಹತ್ಯೆಗಳು ನಡೆಯುತ್ತಲೇ ಇವೆ. ಹೈಕೋರ್ಟ್ ನ್ಯಾಯಾಧೀಶರು ನಿನ್ನೆಯಷ್ಟೇ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದ ಆಡಳಿತದ ಕಾರ್ಯವೈಖರಿಗೆ ಛೀಮಾರಿ ಹಾಕಿ. ರಾಜ್ಯ ಸರ್ಕಾರಕ್ಕೆ ಮೆದುಳಿದೆಯೇ ಎಂದು ಪ್ರಶ್ನೆ ಮಾಡಿದೆ ಎಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗುರುತಿನಡಿ ಚುನಾಯಿತರಾಗಿದ್ದ ತಾಲೂಕು ಪಂಚಾಯ್ತಿಯ 15 ಸದಸ್ಯರು ಈ ವೇಳೆ ಬಿಜೆಪಿ ಸೇರಿದರು. ಇದಕ್ಕೂ ಮುನ್ನ ತಾಲೂಕಿನ ಕೆಂಗಲ್ ಬಳಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಶಾಸಕ ಸಿ.ಪಿ.ಯೋಗೇಶ್ವರ್ ಸೇರಿ ಹಲವರನ್ನು ತೆರೆದ ವಾಹನದಲ್ಲಿ ಬೈಕ್ ರ್ಯಾಲಿ ಮೂಲಕ ಕರೆತರಲಾಯಿತು.
ಫೆ.4ರಂದು ರಾಜಧಾನಿಗೆ ಪ್ರಧಾನಿ “ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಯುವಶಕ್ತಿಯ ಮೇಲೆ ಅಪಾರ ವಿಶ್ವಾಸವಿದೆ. ದೇಶದ ಯುವ ಶಕ್ತಿಗೆ ಉದ್ಯೋಗ ನೀಡಬೇಕು, ರೈತರಿಗೆ ಉತ್ತಮ ಯೋಜನೆಗಳನ್ನು ರೂಪಿಸಬೇಕು. ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸಿ ಆರ್ಥಿಕವಾಗಿ ಸದೃಢರನ್ನಾಗಿಸುವ ಸಂಕಲ್ಪ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.4ರಂದು ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ರಾಜ್ಯದ ಅಭಿವೃದ್ಧಿಗೆ, ಜನತೆಗಾಗಿ ನಾನು ಸಂಕಲ್ಪ ಮಾಡಿರುವ ಯೋಜನೆಗಳು ಹಾಗೂ ನನ್ನ ಮನದಾಳದ ಮಾತುಗಳನ್ನು ತಿಳಿಸುತ್ತೇನೆ,’ ಎಂದು ಯಡಿಯೂರಪ್ಪ ಹೇಳಿದರು.