Advertisement

ಋಣಪರಿಹಾರ ಅಧಿನಿಯಮ: ರಾಷ್ಟ್ರಪತಿ ಜತೆ ಚರ್ಚೆ

06:45 AM Aug 31, 2018 | Team Udayavani |

ಬೆಂಗಳೂರು: ರೈತರು ಹಾಗೂ ಕೃಷಿ ಕಾರ್ಮಿಕರನ್ನು ಖಾಸಗಿ ಸಾಲಗಳಿಂದಲೂ ಮುಕ್ತಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ “ಋಣ ಪರಿಹಾರ ಅಧಿನಿಯಮ’ದ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರೊಂದಿಗೆ ಚರ್ಚಿಸಿದ್ದಾರೆ.

Advertisement

ದೆಹಲಿಯಲ್ಲಿ ಗುರುವಾರ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಋಣ ಪರಿಹಾರ ಅಧಿನಿಯಮ ಕುರಿತು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಶೀಘ್ರದಲ್ಲೇ ಸುಗ್ರೀವಾಜ್ಞೆ ಸಿದ್ಧಪಡಿಸಿ ಕಳುಹಿಸಿಕೊಡಲಾಗುವುದು. ರಾಜ್ಯದ ರೈತರು ಮತ್ತು ಕೃಷಿ ಕಾರ್ಮಿಕರ ಹಿತಕ್ಕಾಗಿ ಇದಕ್ಕೆ ಸಹಿ ಹಾಕುವಂತೆ ಮನವಿ ಮಾಡಿದರು.

ಕಳೆದ ಹಲವು ವರ್ಷ ರಾಜ್ಯದಲ್ಲಿ ಸತತ ಬರಗಾಲ ಬಂದಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದೆಡೆ ಈ ಬಾರಿ ಹಲವು ಕಡೆ ಅತಿವೃಷ್ಠಿಯಾಗಿ ಬೆಳೆಹಾನಿಯಾಗಿದ್ದರೆ, ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಮುಂದುವರಿದಿದೆ. ಇದರಿಂದ ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈಗಾಗಲೇ ಸಹಕಾರ ಬ್ಯಾಂಕ್‌ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಕುರಿತು ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ವಿವರಿಸಿದ್ದಾರೆ.

ಆದರೆ, ಬ್ಯಾಂಕ್‌ಗಳ ಸಾಲ ಮಾತ್ರ ಮನ್ನಾ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುವುದಿಲ್ಲ. ಸಾಕಷ್ಟು ರೈತರು ಖಾಸಗಿಯವರಿಂದ ಸಾಲ ಮಾಡಿದ್ದು, ಬಡ್ಡಿ, ಚಕ್ರ ಬಡ್ಡಿ ಕಟ್ಟಲು ಸಾಧ್ಯವಾಗದೆ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಾಲಗಳಿಂದಲೂ ಅವರನ್ನು ಮುಕ್ತಗೊಳಿಸಲು ಸುಗ್ರೀವಾಜ್ಞೆ ಮೂಲಕ “ಋಣ ಪರಿಹಾರ ಅಧಿನಿಯಮ’ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ 1976 ಮತ್ತು 1980ರಲ್ಲಿ ಎರಡು ಬಾರಿ ಈ ಅಧಿನಿಯಮ ಜಾರಿಗೊಳಿಸಿದಾಗ ರೈತರಿಗೆ ಸಾಕಷ್ಟು ಅನುಕೂಲವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ “ಋಣ ಪರಿಹಾರ ಅಧಿನಿಯಮ-2018′ ಸಿದ್ಧಪಡಿಸಿ ಶೀಘ್ರವೇ ಕಳುಹಿಸಿಕೊಡಲಿದೆ. ಆದ್ಯತೆ ಮೇಲೆ ಅದನ್ನು ಪರಿಗಣಿಸಿ ಸುಗ್ರೀವಾಜ್ಞೆಗೆ ಸಹಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next