ಹೊಸದಿಲ್ಲಿ: ಸಂಸತ್‌ನ ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ದಿನವೇ ಎರಡೂ ಸದನಗಳಲ್ಲಿ ಕೋಲಾಹಲ ಮನೆ ಮಾಡಿತು. ಪಿಎನ್‌ಬಿ ಹಗರಣ, ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದ ಕಾರಣ, ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಬೇಕಾಯಿತು.
ರಾಜ್ಯಸಭೆಗಳಲ್ಲಿ ಕಲಾಪ ಆರಂಭವಾ ಗುತ್ತಿದ್ದಂತೆ ಪ್ರತಿಪಕ್ಷಗಳು, “ನೀರವ್ ಮೋದಿಯನ್ನು ವಾಪಸ್ ತನ್ನಿ’ ಎಂದು ಘೋಷಣೆ ಕೂಗತೊಡಗಿದರು. ಒಂದು ಹಂತದಲ್ಲಿ ರಾಜ್ಯಸಭೆ ಉಪಸಭಾಪತಿ ಪಿ.ಜೆ. ಕುರಿಯನ್ ಅವರು ಕೈಗಳನ್ನು ಜೋಡಿಸಿ, ಸುಗಮ ಕಲಾಪಕ್ಕೆ ಅವಕಾಶ ಕೊಡುವಂತೆ ಕೇಳಿಕೊಂಡರೂ ಯಾವುದೇ ಪ್ರಯೋಜನ ವಾಗಲಿಲ್ಲ. ಲೋಕಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಇನ್ನೊಂದೆಡೆ, ಆಂಧ್ರ ಪ್ರದೇಶದ ಸಂಸದರು, ತಮ್ಮ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದ್ದರಿಂದಲೂ ಕಲಾಪಕ್ಕೆ ಅಡ್ಡಿಯಾಯಿತು. ಹಲವು ಬಾರಿಗೆ ಕಲಾಪಗಳು ಮುಂದೂಡಲ್ಪಟ್ಟು, ಕೊನೆಗೆ ದಿನದ ಮಟ್ಟಿಗೆ ಮುಂದೂಡಲಾಯಿತು.
ಕಾವೇರಿ ಮಂಡಳಿಗೆ ಒತ್ತಾಯ: ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಸದನದ ಬಾವಿಗಿಳಿದು, ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದೂ ಕಂಡುಬಂತು.
ಶಾಗೆ ಅಭಿನಂದನೆ: ಈಶಾನ್ಯದ 3 ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಪಕ್ಷದ ಸಂಸದರು ಹಾಗೂ ಸಚಿವರು ರಾಜ್ಯಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಅಭಿನಂದಿಸಿದರು. ಅವರು ತಮ್ಮ ಆಸನದಲ್ಲಿ ಆಸೀನರಾ ಗುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲ ತಮ್ಮ ಮೇಜುಗಳನ್ನು ಕುಟ್ಟಿ ಸ್ವಾಗತಿಸಿದರು.
ಹುಲಿಗಳ ಸಾವು ಹೆಚ್ಚಳ: 2014-16ರಲ್ಲಿ ದೇಶದಲ್ಲಿ ಹುಲಿಗಳ ಸಾವಿನ ಪ್ರಮಾಣ ಗಣನೀಯ ಏರಿಕೆ ಕಂಡಿದೆ ಎಂದು ರಾಜ್ಯಸಭೆಗೆ ಸರಕಾರ ಮಾಹಿತಿ ನೀಡಿದೆ. 2016ರಲ್ಲಿ ದೇಶಾದ್ಯಂತ 122 ಹುಲಿಗಳು ಮೃತಪಟ್ಟಿದ್ದು, ಮಧ್ಯಪ್ರದೇಶವೊಂದರಲ್ಲೇ 32 ಹುಲಿಗಳು ಸತ್ತಿವೆ ಎಂದು ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. 2015ರಲ್ಲಿ 81, 2014ರಲ್ಲಿ 79 ಹುಲಿಗಳು ಬಲಿಯಾಗಿವೆ
ಫ್ರಾನ್ಸ್‌ನಿಂದ ಖರೀದಿಸಲಾಗುತ್ತಿರುವ 36 ರಫೇಲ್ ಜೆಟ್‌ಗಳ ದರವನ್ನು ಹಾಗೂ ಯುಪಿಎ ಅವಧಿಯಲ್ಲಿ ಖರೀದಿ ಸಲು ಪ್ರಸ್ತಾಪಿಸಿದ್ದ 126 ಯುದ್ಧ ವಿಮಾನಗಳ ದರವನ್ನು ನೇರವಾಗಿ ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಎರಡೂ ಪ್ರಕರಣಗಳಲ್ಲಿ ಅವುಗಳನ್ನು ಭಾರತಕ್ಕೆ ತರುವಂಥ ವ್ಯವಸ್ಥೆಯು ಭಿನ್ನವಾಗಿದೆ.
ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವೆ