ಪಣಜಿ: ಗೋವಾ ವಿಧಾನಸಭೆಯ ಅಧಿವೇಶನ ಕಲಾಪದಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆಯಾಗಿದೆ. ಮಹಾದಾಯಿ ನೀರು ಮತ್ತು ಅಭಯಾರಣ್ಯದಲ್ಲಿ ಬೆಂಕಿ ಎಂಬ ಎರಡು ಪ್ರಮುಖ ವಿಷಯಗಳ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ಮೇಲೆ ಪ್ರಶ್ನೆಗಳ ಸುರಿಮಳೆಗೈದವು.
ಮಹದಾಯಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಗೋವಾ ಮುಖ್ಯಮಂತ್ರಿ ವಿವರಣೆ ನೀಡಬೇಕು ಎಂದು ಶಾಸಕ ವಿಜಯ ಸರ್ದೇಸಾಯಿ ಆಗ್ರಹಿಸಿದ್ದಾರೆ. ಆದರೆ, ಡಿಪಿಆರ್‍ಗೆ ಅನುಮತಿ ನೀಡಿದರೆ ಯೋಜನೆ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಸರ್ಕಾರ ಮೂಲ ಸಮಸ್ಯೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು. ಮಹದಾಯಿ ಅಭಯಾರಣ್ಯದಲ್ಲಿ ಬೆಂಕಿ ಪ್ರಕರಣದ ತನಿಖೆಗೆ ಸದನ ಸಮಿತಿಯನ್ನು ನೇಮಿಸಬೇಕು ಅಥವಾ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು.
ಕಳೆದ ಕೆಲ ತಿಂಗಳ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ರೈತರ ಅನುಕೂಲಕ್ಕಾಗಿ ಗೋವಾದ ಒಪ್ಪಿಗೆಯೊಂದಿಗೆ ಮಹದಾಯಿ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ಘೋಷಿಸಿದ್ದರು. ಮಹದಾಯಿ ನದಿ ನೀರಿಗೆ ಸಂಬಂಧಿಸಿದಂತೆ ಗೋವಾ ಫಾರ್ವರ್ಡ್ ಶಾಸಕ ವಿಜಯ್ ಸರ್ದೇಸಾಯಿ ರವರು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮತ್ತು ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಗೋವಾ ವಿಧಾನಸಭಾ ಅಧಿವೇಶನದಲ್ಲಿ ಮಹದಾಯಿ ಕುರಿತು ಸರ್ಕಾರದ ವಿರುದ್ಧ ಗಧಾಪ್ರಹಾರ ನಡೆಸಿದ ವಿಜಯ್ ಸರ್ದೇಸಾಯಿ- ನೀವು ಸದನಕ್ಕೆ ನೀಡುತ್ತಿರುವ ಮಾಹಿತಿ ನಿಜವೇ ಅಥವಾ ಕೇಂದ್ರ ಗೃಹ ಸಚಿವರು ಸಾರ್ವಜನಿಕ ಸಭೆಗಳಲ್ಲಿ ನೀಡಿರುವ ಮಾಹಿತಿ ನಿಜವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಸರ್ದೇಸಾಯಿ ಸವಾಲು ಹಾಕಿದರು.
Related Articles
ಮಹದಾಯಿ ರಕ್ಷಣೆಗೆ ಸರ್ಕಾರ ಬದ್ಧ
ಮಹದಾಯಿ ನದಿ ನೀರು ವಿಷಯದಲ್ಲಿ ಗೋವಾ ರಾಜ್ಯ ಸರ್ಕಾರದ ಪ್ರಯತ್ನದ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು ಮಹದಾಯಿ ನೀರು ಹರಿಸುವುದಕ್ಕೆ ಯಾವುದೇ ಒಪ್ಪಿಗೆ ನೀಡಿಲ್ಲ. ಭವಿಷ್ಯದಲ್ಲಿ ಒಪ್ಪಿಗೆ ನೀಡುವುದಿಲ್ಲ ಎಂದು ಸದನದಲ್ಲಿ ಸ್ಪಷ್ಟಪಡಿಸಿದರು. ನ್ಯಾಯಾಲಯದ ನಿರ್ದೇಶನದಂತೆ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಇಂಜಿನಿಯರ್‍ಗಳು ಮಹದಾಯಿ ಸ್ಥಳ ಪರಿಶೀಲನೆ ನಡೆಸಿ ತಮ್ಮ ಸ್ವತಂತ್ರ ವರದಿಗಳನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದಾರೆ. ಜುಲೈನಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಾವಂತ್ ಸದನಕ್ಕೆ ತಿಳಿಸಿದರು.
ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿರುವ ಮಹದಾಯಿ-ಪ್ರವಾಹ ಪ್ರಾಧಿಕಾರವನ್ನು ನೇಮಕ ಮಾಡಲಾಗಿದ್ದು, ಅದರ ಕೇಂದ್ರ ಕಚೇರಿಯನ್ನು ಗೋವಾದಲ್ಲಿ ಸ್ಥಾಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು. ಮಹದಾಯಿ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ನಮ್ಮ ಬೇಡಿಕೆಯಂತೆ ಕೇಂದ್ರವು ಮಹದಾಯಿ ಹರಿವು ಪ್ರಾಧಿಕಾರ ಸ್ಥಾಪಿಸಿದೆ. ವನ್ಯಜೀವಿ ವಾರ್ಡನ್ ಮೂಲಕ ಕರ್ನಾಟಕಕ್ಕೆ ನೋಟಿಸ್ ಕಳುಹಿಸಿರುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲೂ ಕರ್ನಾಟಕಕ್ಕೆ ನೀರು ಹರಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.