Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾ ದರ್ಶನ ವೇಳೆ ನೂಕುನುಗ್ಗಲು

03:51 PM Sep 16, 2018 | Team Udayavani |

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಶನಿವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನತಾದರ್ಶನ ವೇಳೆ ಎಚ್‌.ಡಿ. ಕುಮಾರಸ್ವಾಮಿ ಒಳ ಪ್ರವೇಶಿಸುತ್ತಿದ್ದಂತೆ ನೂಕುನುಗ್ಗಲು ಉಂಟಾಗಿದ್ದು, ಇದನ್ನು ತಡೆಯಲು ಪೊಲೀಸರು ಹಾಗೂ ಅಧಿಕಾರಿಗಳು ಹರಸಾಹಸ ಪಟ್ಟರು.

Advertisement

ಕುಮಾರಸ್ವಾಮಿ ಒಳ ಪ್ರವೇಶಿಸಿದಾಗ ನಾ ಮುಂದು, ತಾ ಮುಂದು ಎಂಬಂತೆ ಜನ ಮುಗಿಬಿದ್ದರು. ಮೊದಲೇ ಬೆಳಗ್ಗೆಯಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಹವಣಿಸುತ್ತಿದ್ದ ಸಾರ್ವಜನಿಕರು ಕಾಯ್ದು ಕಾಯ್ದು ಸುಸ್ತಾಗಿದ್ದರು. ಬೆಳಗ್ಗೆ 8 ಗಂಟೆಯಿಂದಲೇ ಜನ ಸೌಧದತ್ತ ಧಾವಿಸಿದ್ದರು. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದರೂ ಎರಡೂ ಗಂಟೆ ಬಳಿಕ ಸಿಎಂ ಸೌಧಕ್ಕೆ ಆಗಮಿಸಿದ್ದರು. ಅಷ್ಟೊತ್ತಿಗೆ ಜನ ತಾಳ್ಮೆ ಕಳೆದುಕೊಂಡು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಜೆ 5 ಗಂಟೆ ಬಳಿಕ ಕುಮಾರಸ್ವಾಮಿ ಸೌಧಕ್ಕೆ ಬಂದು ನೇರವಾಗಿ ಅಂಗವಿಕಲರ ಅಹವಾಲು ಸ್ವೀಕರಿಸಿದರು. ಎರಡು ಗಂಟೆಗಳ ಕಾಲ ಅಂಗವಿಕಲರ ಸಮಸ್ಯೆಯನ್ನೇ ಶಾಂತ ಚಿತ್ತದಿಂದ ಆಲಿಸಿದ ಮುಖ್ಯಮಂತ್ರಿಗಳು ಬರುವಷ್ಟರೊಳಗೆ ಜನ ದಾಂಧಲೆ ಶುರು ಮಾಡಿದ್ದರು. ಸೆಂಟ್ರಲ್‌ ಹಾಲ್‌ನಲ್ಲಿ ಸಾರ್ವಜನಿಕರು ಸಿಎಂ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದರು.

ಸಿಎಂ ಬರುವುದು ವಿಳಂಬವಾಗುತ್ತಿದ್ದಂತೆ ಧಿಕ್ಕಾರ ಕೂಗಲು ಶುರು ಮಾಡಿದರು. ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದಿದ್ದೇವೆ. ಆದರೆ ಇನ್ನೂವರೆಗೆ ನಮ್ಮ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳು ಬಂದಿಲ್ಲ. ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀರಾ. ಚಿಕ್ಕ ಚಿಕ್ಕ ಮಕ್ಕಳನ್ನು, ಮಹಿಳೆಯರು, ವೃದ್ಧರು ಇಲ್ಲಿಗೆ ಬಂದಿದ್ದೇವೆ. ಆದರೆ ಇಷ್ಟೊತ್ತಿಗೆ ಕಾಯುಸುತ್ತಿರುವುದು ಸರಿಯಲ್ಲ ಆಕ್ಷೇಪ ವ್ಯಕ್ತಪಡಿಸಿದರು. ಬೆಳಗ್ಗೆಯಿಂದ ನೀರು, ಊಟ ಇಲ್ಲದೇ ಅಸಮಾಧಾನಗೊಂಡಿದ್ದ ಜನ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ನಂತರ ಸಂಜೆ ಹೊತ್ತಿಗೆ ಲಸ್ಸಿ ಪಾಕೆಟ್‌ಗಳನ್ನು ತಂದು ಜನರನ್ನು ಸಮಾಧಾನ ಪಡಿಸಲು ಅಧಿಕಾರಿಗಳು ಯತ್ನಿಸಿದರು. ಆದರೂ ರೊಚ್ಚಿಗೆದ್ದ ಜನರಿಂದ ನುಕೂನುಗ್ಗಲು ಆರಂಭವಾಯಿತು. ನಂತರ ಕುಮಾರಸ್ವಾಮಿ ಬರುತ್ತಿದ್ದಂತೆ ಸಾಲಾಗಿ ಜನರನ್ನು ಸಿಎಂ ಬಳಿ ಬಿಡಲಾಗುತ್ತಿತ್ತು. ಸೆಂಟ್ರಲ್‌ ಹಾಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಇದ್ದಿದ್ದರಿಂದ ತಡೆಯಲು ಪೊಲೀಸರು ಹರಸಾಹಸಪಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next