ಥಾಣೆ/ಮುಂಬಯಿ: ನವಿ ಮುಂಬಯಿಯಲ್ಲಿ ಮಹಾರಾಷ್ಟ್ರ ಸರಕಾರದ ಕಾರ್ಯಕ್ರಮದಲ್ಲಿ ಬಿಸಿಲ ಝಳಕ್ಕೆ 13 ಮಂದಿ ಅಸುನೀಗಿದ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ಬೃಹತ್ ಬಯಲಿನಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನದ ಬಿಸಿಲಿನ ಝಳ ಇರು ವಂತೆಯೇ 20 ಲಕ್ಷ ಮಂದಿಯನ್ನು ಕರೆಯಿಸಿಕೊಂಡದ್ದು ಏಕೆ ಎಂಬ ಪ್ರಶ್ನೆಗಳನ್ನು ಪ್ರತಿಪಕ್ಷಗಳು ಮಾಡಲಾ ರಂಭಿಸಿವೆ. ಕಾರ್ಯಕ್ರಮ ಆಯೋಜನೆ ಮಾಡಿರುವುದರ ವಿರುದ್ಧವೇ ತನಿಖೆ ನಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅಸ್ವಸ್ಥಗೊಂಡಿರುವವರ ಪೈಕಿ ಇನ್ನೂ ಎಂಟು ಮಂದಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿ ಕೇಸ್‌ನಲ್ಲಿ ಉದ್ದೇಶಪೂರ್ವಕವಲ್ಲದ ಕೊಲೆ ಕೇಸು ದಾಖಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದ್ದರೆ, ತನಿಖೆ ನಡೆಯಲಿ ಎಂದು ಎನ್‌ಸಿಪಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಒತ್ತಾಯಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಘಟನೆಗೆ ದುಃಖ ವ್ಯಕ್ತಪಡಿಸಿದ್ದಾರೆ.