Advertisement

ಆರು ತಿಂಗಳಲ್ಲಿ ಏಳು ಹರಕೆ ಕೋಣಗಳ ಸಾವು: ಭಕ್ತರ ನಂಬಿಕೆ ಚ್ಯುತಿ ತರಬೇಡಿ…

03:01 PM Sep 23, 2024 | Team Udayavani |

■ ಉದಯವಾಣಿ ಸಮಾಚಾರ
ಶಿಗ್ಗಾವಿ: ಕಳೆದ ಆರು ತಿಂಗಳಲ್ಲಿ ಪಟ್ಟಣದ ಗ್ರಾಮ ದೇವಿಗೆ ಹರಿಕೆ ಬಿಟ್ಟ ಸುಮಾರು ಏಳು ಕೋಣಗಳು ಮೃತಪಟ್ಟಿವೆ. ಗ್ರಾಮ ದೇವಿಗೆ ಹರಕೆ ಕಟ್ಟಿಕೊಂಡ ಭಕ್ತರು ದೇವಿಯ ಹೆಸರಲ್ಲಿ ಕೋಣಗಳನ್ನು ಬಿಡುವ ವಾಡಿಕೆ ಇದ್ದು, ಕಮಿಟಿ ವತಿಯಿಂದಲೂ ಪ್ರತಿ ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ದೇವರ ಕೋಣ ಬಿಡುವ ಸಂಪ್ರದಾಯ ಬಂದಿದೆ. ದೇವಸ್ಥಾನ ಕಮಿಟಿಯವರು ತಾವು ಬಿಟ್ಟಿರುವ ದೇವರ ಕೋಣದ ಮೇಲೆ ನಿಗಾ ವಹಿಸಿರುತ್ತಾರೆ. ಆದರೆ ಭಕ್ತರು ದೇವರ ಹೆಸರಲ್ಲಿ ಬಿಟ್ಟಿರುವ ಕೋಣಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

Advertisement

ಪಟ್ಟಣದ ಗ್ರಾಮದೇವಿಗೆ ಭಕ್ತಾದಿಗಳು ಬಿಟ್ಟಿರುವ ಕೋಣಗಳಲ್ಲಿ ಮೂರು ಕೋಣಗಳು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಳಿ ತೆಗೆದ ಗುಂಡಿಗಳಲ್ಲಿ ಬಿದ್ದು ಮರಣ ಹೊಂದಿದ್ದರೆ, ನಾಲ್ಕು ಕೋಣಗಳು ರಸ್ತೆ ಅಪಘಾತದಲ್ಲಿ ತೀರಿವೆ.

ತೀರಿರುವ ಕೋಣಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಯಾವುದೇ ಗುರುತಿನ ಚಿನ್ಹೆ ಹಾಕದಿರುವುದು ಕಂಡು ಬಂದಿದೆ.
ಅಪಘಾತಗೊಳಗಾಗಿ ಮೃತಪಟ್ಟ ಕೆಲ ಕೋಣಗಳನ್ನು ಪುರಸಭೆಯವರು ದೇವಿ ಪಾದಗಟ್ಟಿ ಬಳಿ ಅಂತ್ಯ ಸಂಸ್ಕಾರ ಮಾಡಿದ್ದು, ಇನ್ನು ಕೆಲ ಕೋಣಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹೂಳಲಾಗಿದೆ. ಧಾರ್ಮಿಕ ನಂಬಿಕೆ ಮತ್ತು ಸಂಪ್ರದಾಯದಡಿ ಭಕ್ತರು ದೇವಿಗೆ ಹರಕೆ ನೀಡುವ ಕೋಣಗಳನ್ನು ದೇವಸ್ಥಾನ ಕಮಿಟಿಯವರು ಸರಿಯಾಗಿ ನಿರ್ವಹಿಸುವ ಮೂಲಕ ಭಕ್ತರ ನಂಬಿಕೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗ್ರಾಮದೇವಿ ಕಮಿಟಿಯವರು ದೇವಿಯ ಹರಕೆ ಕೋಣಗಳನ್ನು ಸುಲಭವಾಗಿ ಗುರುತಿಸುವಂತೆ ವ್ಯವಸ್ಥೆ ಮಾಡಬೇಕು. ಅವುಗಳಿಗೆ ಇನ್ಸುರನ್ಸ್‌ ಮಾಡಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು. ಭಕ್ತಾದಿಗಳು ಹರಕೆ ಕೋಣಗಳನ್ನು ದೇವರ ಹೆಸರಲ್ಲಿ ಬಿಡುವ ಮುಂಚೆಯೇ ಕಮಿಟಿ ಸದಸ್ಯರ ಗಮನಕ್ಕೆ ತರಬೇಕು.
*ರಮೆಶ ವನಹಳ್ಳಿ, ಪುರಸಭೆ ಸದಸ್ಯ

ದೇವಿ ಹೆಸರಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡುವ ಕೋಣಗಳ ನಿರ್ವಹಣೆಗೆ ಸುಸರ್ಜಿತ ವ್ಯವಸ್ಥೆ, ದೇವಸ್ಥಾನದ ಕೋಣಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಕೋಣಗಳಿಗೆ ಯಾವುದೇ ಹಾನಿಯಾಗದಂತೆ ಸಾಕಲು ಗ್ರಾಮದೇವಿ ಸೇವಾ ಸಮಿತಿ ವ್ಯವಸ್ಥೆ ಮಾಡಬೇಕು.
ಸುಭಾಸ ಚೌವ್ಹಾಣ,
ಗ್ರಾಮದೇವಿ ಸೇವಾ ಸಮಿತಿ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next