Advertisement

ಕಲ್ಲುಕೋರೆ, ಆವೆಮಣ್ಣಿನ ಹೊಂಡಗಳಿಂದ ಜೀವ ಬಲಿ: ಇರಲಿ ಎಚ್ಚರ !

02:03 PM Jun 01, 2017 | Team Udayavani |

ಕೋಟ: ಗಣಿಗಾರಿಕೆಗಾಗಿ ನಿರ್ಮಿಸಿದ ಕಲ್ಲುಕೋರೆ, ಆವೆಮಣ್ಣಿನ ಹೊಂಡಗಳು  ಮಳೆಗಾಲದಲ್ಲಿ  ಮೃತ್ಯುಕೂಪಗಳಂತೆ ಅನೇಕ ಜೀವಗಳನ್ನು ಬಲಿ ಪಡೆದ ಪ್ರಕರಣಗಳು ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತಿವೆೆ.  ಈ ನಿಟ್ಟಿನಲ್ಲಿ ತಡೆಬೇಲಿ ನಿರ್ಮಾಣ, ಎಚ್ಚರಿಕೆ ಫಲಕ ಅಳವಡಿಕೆ  ಮುಂತಾದ ಕ್ರಮಗಳನ್ನು ಕೈಗೊಂಡರು  ಪ್ರಕರಣಗಳು  ಮತ್ತೆ-ಮತ್ತೆ  ಮರುಕಳಿಸುತ್ತಿವೆ.

Advertisement

ಅತೀ ಹೆಚ್ಚು ಪ್ರಕರಣ
ಕೋಟ ಹೋಬಳಿ  ಸುತ್ತಮುತ್ತಲಿನ  ಸಾೖಬ್ರಕಟ್ಟೆ, ಅಲ್ತಾರು, ಶಿರೂರು ಮೂರುಕೈ,  ನಂಚಾರು, ಬೇಳೂರು, ಮೊಗೆಬೆಟ್ಟು, ಕೆದೂರು ಮುಂತಾದ ಪ್ರದೇಶಗಳು ಗಣಿಗಾರಿಕೆಯ ಸ್ವರ್ಗ  ಎಂದು ಬಿಂಬಿತವಾಗಿವೆ ಹಾಗೂ ಈ ಪ್ರದೇಶದಲ್ಲಿ  ಪರವಾನಿಗೆ ರಹಿತವಾಗಿ ರಾಯಧನ ಪಾವತಿಸದೆ ಹಲವಾರು ಗಣಿಗಾರಿಕೆಗಳು ನಡೆಯುತ್ತವೆ.  ಇಲ್ಲಿ ಕಳೆದ  ಮೂರು-ನಾಲ್ಕು ವರ್ಷಗಳಿಂದ ಹತ್ತಕ್ಕೂ ಹೆಚ್ಚು ಅವಘಡಗಳು  ಸಂಭವಿಸಿದ್ದು,  25ಕ್ಕೂ  ಹೆಚ್ಚು   ಮುಗ್ಧ ಜೀವಗಳು ಬಲಿಯಾಗಿವೆ. ಅಕ್ರಮ  ಗಣಿಗಾರಿಕೆಯ ಕುರಿತು ಮಾಹಿತಿ ಇದ್ದರು  ಸಂಬಂಧಪಟ್ಟ ಅಧಿಕಾರಿಗಳು  ಆರಂಭದಲ್ಲೇ ನಿಯಂತ್ರಿಸದಿರುವುದರ  ಫಲವಾಗಿ ಇಂತಹ ಪ್ರಕರಣಗಳು  ಹೆಚ್ಚು-ಹೆಚ್ಚು ನಡೆಯುತ್ತಿವೆ.

ಕೆಲವು ಕಡೆಗಳಲ್ಲಿ  ಆವೆ ಮಣ್ಣಿನ ಹೊಂಡ ಗಳು ದೊಡ್ಡ ಸಂಖ್ಯೆಯಲ್ಲಿದ್ದು  ಇವುಗಳ ಜಮೀನಿನ ಮಧ್ಯದಲ್ಲಿರುವುದರಿಂದ  ಹೆಚ್ಚು ಅಪಾಯಕಾರಿಯಾಗಿ ರುತ್ತವೆ.

ಸರಕಾರದಿಂದ ಕ್ರಮ
ಪರವಾನಿಗೆ ಇರುವ ಗಣಿಗಾರಿಕೆಗಳ ಕುರಿತು ಹೆಚ್ಚಿನ ಕಡೆಗಳಲ್ಲಿ  ಈಗಾಗಲೇ  ಎಚ್ಚರಿಕೆ  ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಆದರೆ ಪರವಾನಿಗೆ ರಹಿತವಾಗಿ  ನಡೆಯುವ ಗಣಿಗಾರಿಕೆಗಳ ಸಂಖ್ಯೆ   ಅಧಿಕವಾಗಿರುವುದು ರಕ್ಷಣಾಕ್ರಮ ಸಮಸ್ಯೆಯಾಗಿದೆ. ಪ್ರಸ್ತುತ ಕೆ.ಆರ್‌.ಐ.ಡಿ.ಎಲ್‌.  ಮೂಲಕ ಇಂತಹ ಹೊಂಡಗಳ ಸುತ್ತ ಬೇಲಿ ನಿರ್ಮಿಸಲಾಗುತ್ತದೆ.

ಹೆತ್ತವರೇ ಎಚ್ಚರ
ಹೊಂಡಗಳಿಗೆ ಬಲಿಯಾಗುವುದರಲ್ಲಿ  ಚಿಕ್ಕಮಕ್ಕಳ  ಸಂಖ್ಯೆಯೇ  ಅಧಿಕ. ಹೀಗಾಗಿ ಇಂತಹ  ಮಕ್ಕಳಿಗೆ  ತಿಳಿಹೇಳುವ ಕರ್ತವ್ಯ ಹೆತ್ತವರು  ಮಾಡಬೇಕು ಹಾಗೂ ರಜಾ  ದಿನಗಳಲ್ಲಿ  ಅವರ ಚಟುವಟಿಕೆಗಳನ್ನು ಗಮನಿಸಬೇಕು. ಬಟ್ಟೆ ಒಗೆಯಲು ತೆರಳಿದ ಸಂದರ್ಭದಲ್ಲಿ ಕೆಲವೊಂದು ದುರಂತಗಳು ನಡೆಯುತ್ತಿದ್ದು,  ಬಟ್ಟೆ ಒಗೆಯಲು  ತೆರಳುವಾಗ ಚಿಕ್ಕ ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯದಿರುವುದೇ  ಒಳಿತು ಹಾಗೂ ಇಂತಹ ದುರಂತಗಳ ಬಗ್ಗೆ  ಮಕ್ಕಳಿಗೆ ತಿಳಿಹೇಳಬೇಕು. ಶಾಲೆಗಳಲ್ಲಿ ಶಿಕ್ಷಕರೂ ಕೂಡ ಈ ಕುರಿತು  ತಿಳಿಸಬೇಕು.  ಸಾರ್ವಜನಿಕರಲ್ಲಿ ಜಾಗೃತಿ  ಮೂಡದಿದ್ದರೆ  ಸೂಚನಾಫಲಕ, ರಕ್ಷಣಾ ಬೇಲಿ ಯಾವುದೂ ಪ್ರಯೋಜನವಿಲ್ಲ ಎನ್ನುವುದು ಸಾರ್ವಜನಿಕ ಅಭಿಪ್ರಾಯವಾಗಿದೆ.

Advertisement

ದೂರು ನೀಡಲು
ಜಿಲ್ಲೆಯಲ್ಲಿನ ಅಪಾಯಕಾರಿ ಬಾವಿಗಳು, ಅನಧಿಕೃತ ಕಲ್ಲುಕೋರೆ, ಗಣಿಹೊಂಡಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆಯಲು ಜಿಲ್ಲಾಡಳಿತದಿಂದ ಕಂಟ್ರೋಲ್‌ ರೂಮ್‌ ತೆರೆಯಲಾಗಿದ್ದು, ದೂರವಾಣಿ  ಸಂಖ್ಯೆ  0820-2574802, ಅಥವಾ 1077 ಹಾಗೂ   www.facebook.com/dcudupi, ಅಥವಾ ಟ್ವಿಟರ್‌ನಲ್ಲಿ  @dcudupi  ಸಂಪರ್ಕಿಸಿ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಗಣಿಗಾರಿಕೆ ಹೊಂಡಗಳಲ್ಲಿ ಸಂಭವಿಸುವ ದುರಂತದ ಕುರಿತು  ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.  ಪರವಾನಿಗೆ ಇರುವ ಹಾಗೂ ಪಟ್ಟಾ ಸ್ಥಳಗಳಲ್ಲಿ ನಡೆಯುವ ಗಣಿಗಾರಿಕೆಗಳ ಸುತ್ತ ಜಾಗದ ಮಾಲಕರು ಅಥವಾ  ಪರವಾನಿಗೆದಾರರು ಜಾಗೃತೆ ವಹಿಸುವಂತೆ ನೋಟೀಸು ನೀಡಲಾಗಿದೆ.  ಸರಕಾರಿ, ಕಮ್ಕಿ  ಇನ್ನಿತರರ ಜಾಗದಲ್ಲಿರುವ   ಗಣಿ ಹೊಂಡಗಳ ಕುರಿತು ಕೆ.ಆರ್‌.ಐ.ಡಿ.ಎಲ್‌. ಕ್ರಮಕೈಗೊಳ್ಳಲಿದೆ.  ಇಲಾಖೆ  ವತಿಯಿಂದ ಈಗಾಗಲೇ  ಅಪಾಯಕಾರಿ  ಗಣಿಗಾರಿಕೆ ಹೊಂಡಗಳ ಕುರಿತು ಕೆ.ಆರ್‌.ಐ.ಡಿ.ಎಲ್‌. ಮಾಹಿತಿ ನೀಡಿದ್ದೇವೆ.   ಇನ್ನೂ ಕೂಡ  ಇಂತಹ ಅಪಾಯಕಾರಿ ಹೊಂಡಗಳಿದ್ದಲ್ಲಿ  ಮಾಹಿತಿ ನೀಡಿದಲ್ಲಿ  ಸೂಕ್ತ ಕ್ರಮಕೈಗೊಳ್ಳಲಾಗುವುದು.
– ಮಹೇಶ,   ಗಣಿ ಮತ್ತು ಭೂ ವಿಜ್ಞಾನಿಗಳು ಉಡುಪಿ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next