ರಾಮದುರ್ಗ: ಪುನರ್ವಸತಿ ಕೇಂದ್ರದಲ್ಲಿ ವಿಪರೀತ ಜ್ವರದಿಂದ ಬಳಲುತ್ತಿದ್ದ ಬಾಲಕನೊಬ್ಬ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ತಾಲೂಕಿನ ಸುರೇಬಾನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ದೊಡ್ಡ ಹಂಪಿ ಹೊಳಿಯ ಅಬ್ದುಲ ಸಾಬ್ ರೆಹಮಾನಸಾಬ ಮುಲ್ಲಾನವರ(4) ಮೃತ ಬಾಲಕ. ಕಳೆದ ತಿಂಗಳು ಉಂಟಾದ ಪ್ರವಾಹದಲ್ಲಿ ಬಾಲಕನ ಮನೆ ಸಂಪೂರ್ಣ ಮುಳುಗಿ ಬಿದ್ದು ಹೋಗಿತ್ತು.
ಅಂದಿನಿಂದ ಮೃತ ಬಾಲಕನ ಪಾಲಕರು ಪರಿಹಾರ ಕೇಂದ್ರದಲ್ಲೇ ವಾಸವಾಗಿದ್ದರು. ಎರಡು ದಿನಗಳ ಹಿಂದೆ ಬಾಲಕನಿಗೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಶುಚಿತ್ವದ ಕೊರತೆಯಿರುವ ಪರಿಹಾರ ಕೇಂದ್ರದಲ್ಲಿ ಸೊಳ್ಳೆಗಳ ಕಾಟದಿಂದ ಮಗುವಿನಲ್ಲಿ ಯಾವುದೇ ಚೇತರಿಕೆ ಕಂಡಿರಲಿಲ್ಲ.
ಸೋಮವಾರ ರಾತ್ರಿ ಏಕಾಏಕಿ ಜ್ವರ ಹೆಚ್ಚಾದಾಗ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಮಗುವಿನ ಪರಿಸ್ಥಿತಿ ಚಿಂತಾಜನಕವಿದ್ದು, ತಾಲೂಕು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ರಾಮದುರ್ಗಕ್ಕೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ.
5 ಲಕ್ಷ ಪರಿಹಾರ ವಿತರಣೆ: ಎಪಿಎಂಸಿ ಕಾಳಜಿ ಕೇಂದ್ರಕ್ಕೆ ಆಗಮಿಸಿದ ಸಿಎಂ ಯೂಡಿಯೂರಪ್ಪ ಮೃತ ಬಾಲಕನ ಅಜ್ಜಿಗೆ 5 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.
ತನಿಖೆಗೆ ಡೀಸಿ ಆದೇಶ: ಹಂಪಿಹೊಳಿ ಗ್ರಾಮದಲ್ಲಿ ಏಕಾಏಕಿ ನೀರು ಬಂದಿದ್ದರಿಂದ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿತ್ತು. ಪುನರ್ವಸತಿ ಕೇಂದ್ರದಲ್ಲಿ ಬಾಲಕನಿಗೆ ವಿಪರೀತ ಜ್ವರ ಬಂದಿದ್ದು, ಪ್ರಾಥಮಿಕ ತನಿಖೆಯಲ್ಲಿ ಜ್ವರದಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.