ಹೊಸದಿಲ್ಲಿ: ಬ್ರೆಜಿಲ್‌ನ ಕಾಸಿಯಾಸ್ ಡು ಸುಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನ ವನಿತೆಯರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ವೇದಿಕಾ ಶರ್ಮ ಕಂಚಿನ ಪದಕ ಗೆದ್ದಿದ್ದಾರೆ. ಇದು ಶೂಟಿಂಗ್‌ನಲ್ಲಿ ಭಾರತ ಪಡೆದ ಮೂರನೇ ಪದಕವಾಗಿದೆ.
ಫೈನಲ್ಸ್‌ನಲ್ಲಿ ವೇದಿಕಾ ಅವರು 207.2 ಅಂಕ ಗಳಿಸಿ ಈ ಸಾಧನೆ ಮಾಡಿದರು. ಚೈನೀಸ್ ತೈಪೆಯ ಕಾವೊ ಯಾ ಜು ಬೆಳ್ಳಿ ಗೆದ್ದರೆ ಉಕ್ರೈನ್‌ನ ಇನ್ನಾ ಅಫೋನ್‌ಚೆಂಕೊ ಚಿನ್ನ ಜಯಿಸಿದರು. ಸ್ಪರ್ಧೆಯ ಮೂರನೇ ದಿನ ಪುರುಷರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಭಾರತದ ಧನುಷ್ ಶ್ರೀಕಾಂತ್ ಚಿನ್ನ ಮತ್ತು ಶೌರ್ಯ ಸೈನಿ ಕಂಚಿನ ಪದಕ ಜಯಿಸಿದ್ದರು.
ಬ್ಯಾಡ್ಮಿಂಟನ್ ಸ್ಪರ್ಧೆಯ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಭಾರತ ಚಿನ್ನ ಜಯಿಸಿದೆ. ಈ ಮೂಲಕ ಭಾರತವು ಈ ಗೇಮ್ಸ್‌ನಲ್ಲಿ ಒಟ್ಟು 4 ಪದಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ವನಿತೆಯರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಇನ್ನೋರ್ವ ಸ್ಪರ್ಧಿ ಪ್ರಾಂಜಲಿ ಧುಮಾಲ್ ಸ್ವಲ್ಪದರಲ್ಲಿ ಕಂಚು ಗೆಲ್ಲಲು ವಿಫಲರಾಗಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.