ಬೆಂಗಳೂರು: ವೀಕೆಂಡ್ ಪಾರ್ಟಿ ಮುಗಿಸಿದ ಮೂವರು ಸ್ನೇಹಿತರು ಒಂದೇ ಬೈಕ್‌ನಲ್ಲಿ ವೇಗವಾಗಿ ತೆರಳುತ್ತಿದ್ದ ವೇಳೆ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಬಸವೇಶ್ವರ ನಗರದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಎಚ್‌ಎಎಲ್ ಉದ್ಯೋಗಿ ಅನಿಲ್, ಖಾಸಗಿ ಕಂಪನಿ ಉದ್ಯೋಗಿಗಳಾದ ಶ್ರೀನಾಥ್, ಕಾರ್ತಿಕ್ ಮೃತರು. ಪಾನಮತ್ತ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದು, ಚಾಲನೆ ವೇಳೆ ಹೆಲ್ಮೆಟ್ ಕೂಡ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌರಿಬಿದನೂರು ಮೂಲದ ಅನಿಲ್ ನಾಸಿಕ್‌ನಲ್ಲಿರುವ ಎಚ್‌ಎಎಲ್‌ನಲ್ಲಿ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಟಿ.ನರಸೀಪುರ ಮೂಲದ ಶ್ರೀನಾಥ್ ಹಾಗೂ ಕಾರ್ತಿಕ್ ಸಾಫ್ಟ್ವೇರ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ರಜೆ ಮೇರೆಗೆ ಅನಿಲ್ ಬೆಂಗಳೂರಿಗೆ ಆಗಮಿಸಿದ್ದ ಮೂವರು ಸ್ನೇಹಿತರು ಜತೆಯಾಗಿದ್ದರು. ಭಾನುವಾರ ಮಾಗಡಿರಸ್ತೆಯ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳಲು ಬೈಕ್‌ನಲ್ಲಿ ಮೂವರೂ ತೆರಳುತ್ತಿದ್ದರು. ತಡರಾತ್ರಿ 12.35ರಸುಮಾರಿಗೆ ಬಸವೇಶ್ವರ ನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿ ಬೈಕ್ ವೇಗವಾಗಿ ಚಲಾಯಿಸುತ್ತಿದ್ದ ಕಾರ್ತಿಕ್, ನಿಯಂತ್ರಣ ತಪ್ಪಿ ರಸ್ತೆಬದಿಯಿದ್ದ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಡಿಕ್ಕಿ ರಭಸಕ್ಕೆ ಬೈಕ್ ಅದೇ ವೇಗದಲ್ಲಿ ಹೋಗಿ ಡಿವೈಡರ್‌ಗೆ ಹೊಡೆದಿದೆ. ಬೈಕ್‌ನಲ್ಲಿದ್ದ ಮೂವರೂ ಹಾರಿ, ನೆಲಕ್ಕೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಭೀಕರ ಘಟನೆ ಕಂಡ ಆಟೋ ಚಾಲಕ ಶ್ರೀನಿವಾಸ್, ರಸ್ತೆ ಮೇಲೆ ಬಿದ್ದಿದ್ದ ಮೃತದೇಹಗಳನ್ನು ನೋಡಿ ಕಿರುಚಿಕೊಂಡಿದ್ದು, ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಭಾನುವಾರ ಸಂಜೆ ಆರು ಗಂಟೆ ಸುಮಾರಿಗೆ ಮೂವರೂ ಒಂದೇ ಬೈಕ್‌ನಲ್ಲಿ ತೆರಳಿದ್ದರು. ತಡರಾತ್ರಿ ಆಗಮಿಸುವಾಗ ಈ ದುರಂತ ಸಂಭವಿಸಿದೆ ಎಂದು ಮೃತ ಕಾರ್ತಿಕ್ ಸಂಬಂಧಿ ಮಹೇಶ್ ಹೇಳಿಕೆ ನೀಡಿದ್ದಾರೆ.
ಕಾಲೇಜು ದಿನಗಳಿಂದಲೇ ಮೂವರೂ ಆಪ್ತ ಸ್ನೇಹಿತರಾಗಿದ್ದು, ಆಗಾಗ ಭೇಟಿಯಾಗುತ್ತಿದ್ದರು. ಮೂವರೂ ಅವಿವಾಹಿತರಾಗಿದ್ದು, ಸದ್ಯದಲ್ಲೇ ಅನಿಲ್‌ಗೆ ಮದುವೆ ಮಾಡಲು ಪೋಷಕರು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ದುರಂತ ನಡೆದಿದೆ ಎಂದು ಸಂಬಂಧಿಕರು ಕಣ್ಣೀರು ಹಾಕಿದರು ಎಂದು ಅಧಿಕಾರಿ ಹೇಳಿದರು.
300 ಮೀಟರ್ ದೂರ ಹೋಗಿದ್ದ ಬೈಕ್!
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯಂತೆ ಅಪಘಾತ ನಡೆದ ಸ್ಥಳದಲ್ಲಿಯೇ ಒಬ್ಟಾತನ ಮಿದುಳು ಹೊರಬಂದು ದೂರದಲ್ಲಿ ಬಿದ್ದಿತ್ತು. ಜತೆಗೆ, ಡಿವೈಡರ್‌ಗೆ ಡಿಕ್ಕಿಯಾದ ಬಳಿಕ ಬೈಕ್, ಸುಮಾರು 300 ಮೀಟರ್ ದೂರದವರೆಗೆ ರಸ್ತೆಯನ್ನು ಉಜ್ಜಿಕೊಂಡು ಹೋಗಿದೆ. ಅತಿ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ಕಂಡು ಬಂದಿದೆ ಎಂದು ಅಧಿಕಾರಿ ತಿಳಿಸಿದರು.