Advertisement

PoKಯ ಲಷ್ಕರ್‌ ತರಬೇತಿ ಶಿಬಿರದಲ್ಲಿ ಘಾತಕ ಹುನ್ನಾರ- ಡ್ರೋನ್‌ನಲ್ಲಿ ಉಗ್ರ ರವಾನೆ ಸಂಚು

02:34 AM Sep 16, 2023 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಘಾತಕ ಕೃತ್ಯಗಳನ್ನು ಎಸಗುವು ದೆಂದರೆ ಪಾಕಿಸ್ಥಾನಕ್ಕೆ ಎಲ್ಲಿಲ್ಲದ ಆಸಕ್ತಿ. ಅದಕ್ಕಾಗಿ ಗಡಿಯಾಚೆಯಿಂದ ಪಾಕ್‌ ಪ್ರಾಯೋಜಿತ ಉಗ್ರರು ಇದುವರೆಗೆ ಡ್ರೋನ್‌ಗಳ ಮೂಲಕ ಮಾದಕ ವಸ್ತುಗಳನ್ನು ಕಳುಹಿಸುತ್ತಿದ್ದರು. ಈಗ ಅದೇ ತಂತ್ರದ ಮೂಲಕ ಲಷ್ಕರ್‌-ಎ-ತಯ್ಯಬಾ ಸಂಘಟನೆ ದೇಶದೊಳಕ್ಕೆ ಉಗ್ರರನ್ನು ನುಗ್ಗಿಸಲು ಮುಂದಾಗಿದೆ.

Advertisement

ಇಂಥ ದುಷ್ಕೃತ್ಯ ನಡೆಸಲು ತರಬೇತಿ ನೀಡುತ್ತಿರುವ ವೀಡಿಯೋ ಬಹಿರಂಗವಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಲಷ್ಕರ್‌ ತರಬೇತಿ ಶಿಬಿರವೊಂದರಲ್ಲಿ ಅದಕ್ಕೆ ಬೇಕಾಗಿರುವ ಸಿದ್ಧತೆಗಳು ನಡೆದಿವೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಖಚಿತಪಡಿಸಿವೆ. ಲಷ್ಕರ್‌ ಅಭಿವೃದ್ಧಿಪಡಿಸುತ್ತಿರುವ ಡ್ರೋನ್‌ 70 ಕೆ.ಜಿ. ತೂಕ ಹೊರಬಲ್ಲುದು. ಇದರ ಮೂಲಕ ಉಗ್ರರನ್ನು ಗಡಿಯಾಚೆಗೆ ಕಳುಹಿಸುವ ಪರೀಕ್ಷೆಗಳು ನಡೆದಿವೆ. 60 ಕಿ.ಮೀ. ದೂರದ ವರೆಗೆ ಹೋಗಿ ವಾಪಸಾಗುವ ಸಾಮರ್ಥ್ಯ ಇದಕ್ಕಿದೆ ಎನ್ನಲಾಗಿದೆ.

ಮಾದಕ ವಸ್ತು ಕಳ್ಳಸಾಗಣೆ
ಸದ್ಯ ಪಾಕಿಸ್ಥಾನ ಪ್ರೇರಿತ ಉಗ್ರರು ಪಂಜಾಬ್‌, ಜಮ್ಮು – ಕಾಶ್ಮೀರ ಗಳಲ್ಲಿ ಡ್ರೋನ್‌ ಮೂಲಕ ಮಾದಕ ವಸ್ತುಗಳನ್ನು ರಹಸ್ಯವಾಗಿ ಬೀಳಿಸುತ್ತಾರೆ. ಅಲ್ಲಿ ಈಗ ಭದ್ರತೆ ಬಿಗಿಯಾಗಿರುವ ಹಿನ್ನೆಲೆಯಲ್ಲಿ ಗುಜರಾತ್‌ ಮತ್ತು ರಾಜಸ್ಥಾನಗಳ ಗಡಿಯವರೆಗೆ ಈಗ ಮಾದಕ ವಸ್ತುಗಳನ್ನು ತಂದು ಅಲ್ಲಿಂದ ರಸ್ತೆ ಮೂಲಕ ಪಂಜಾಬ್‌ ಮತ್ತು ಜಮ್ಮು -ಕಾಶ್ಮೀರಕ್ಕೆ ಕಳುಹಿಸುವ ಹುನ್ನಾರ ನಡೆದಿದೆ.

ಕಾರ್ಯ ಯೋಜನೆ ಹೇಗೆ?
ಸದ್ಯ ಉಗ್ರರು ಕಾಡು, ನದಿ ಅಥವಾ ಸಮುದ್ರ ದಾಟಿ ಬರಬೇಕಾ ಗುತ್ತದೆ. ಆದರೆ ಡ್ರೋನ್‌ ಮೂಲಕ ಬಂದು ಕ್ಷಿಪ್ರವಾಗಿ ದಾಳಿ ನಡೆಸಿ ವಾಪಸಾಗಬಹುದು. ಕೇಂದ್ರ ಗುಪ್ತಚರ ಸಂಸ್ಥೆ ಗಳು ಅಧ್ಯಯನ ನಡೆಸಿದ ವೀಡಿಯೋದಲ್ಲಿ ಡ್ರೋನ್‌ ಮೂಲಕ ಉಗ್ರನನ್ನು ನೀರಿನಲ್ಲಿ ಇಳಿಸಿ ನಿಗದಿತ ಸ್ಥಳದಲ್ಲಿ ದಾಳಿ ಮಾಡುವ ಪ್ರಾತ್ಯಕ್ಷಿಕೆ ನಡೆಸಲಾಗಿದೆ.
ಇದೇ ಮಾದರಿಯಲ್ಲಿ ಪಂಜಾಬ್‌ ಅಥವಾ ಜಮ್ಮು – ಕಾಶ್ಮೀರಕ್ಕೆ ಡ್ರೋನ್‌ ಮೂಲಕ ಉಗ್ರರನ್ನು ಕಳುಹಿಸಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಸಿದ್ಧತೆ ನಡೆಸಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿಯಂತೆ ಕಳೆದ ತಿಂಗಳು ಪ್ರಾಯೋಗಿಕವಾಗಿ ಉಗ್ರನೊಬ್ಬನನ್ನು ಪಂಜಾಬ್‌ಗ ಕಳುಹಿಸಿ ಪರೀಕ್ಷೆ ನಡೆಸಲಾಗಿದೆ ಎಂದು ನೆಟ್‌ ವರ್ಕ್‌ 18 ವೆಬ್‌ ಸೈಟ್‌ ವರದಿ ಮಾಡಿದೆ.

ಲಷ್ಕರ್‌ ಉಗ್ರರ ಸಹಚರರ ಸೆರೆ
ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್‌ ಉಗ್ರರ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪಿಸ್ತೂಲ್‌ಗ‌ಳು, ಗ್ರೆನೇಡ್‌ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರಿಬ್ಬರೂ ಪಾಕ್‌ ಮೂಲದ ಹ್ಯಾಂಡ್ಲರ್‌ಗಳ ಸೂಚನೆಯ ಮೇರೆಗೆ ಗಡಿಯಾಚೆಗೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಎನ್‌ಕೌಂಟರ್‌ನಲ್ಲಿ ಮತ್ತೂಬ್ಬ ಯೋಧ ಹುತಾತ್ಮ

ಜಮ್ಮು -ಕಾಶ್ಮೀರದ ಅನಂತನಾಗ್‌ನಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ ಶುಕ್ರವಾರ 3ನೇ ದಿನಕ್ಕೆ ಪ್ರವೇಶಿಸಿದೆ. ಗುರುವಾರ ಲಷ್ಕರ್‌ ಉಗ್ರರ ಜತೆಗಿನ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಗಾಯಗೊಂಡು ನಾಪತ್ತೆಯಾಗಿದ್ದ ಯೋಧರೊಬ್ಬರ ಮೃತದೇಹ ಪತ್ತೆಯಾಗಿದೆ. ದಟ್ಟಡವಿಯಲ್ಲಿ ಅವಿತಿರುವ ಉಗ್ರರನ್ನು ಪತ್ತೆಹಚ್ಚಲು ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಸುಧಾರಿತ ಸ್ಫೋಟಕಗಳನ್ನು ಬಳಸಿ ಅವರು ಇರುವ ಸ್ಥಳ ಪತ್ತೆಹಚ್ಚಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ. ರಾಷ್ಟ್ರೀಯ ರೈಫ‌ಲ್ಸ್‌ನ ಕ್ಷಿಪ್ರ ಕಾರ್ಯಾಚರಣೆ ತಂಡ, ಭೂಸೇನೆ, ಕೇಂದ್ರಾಡಳಿತ ಪ್ರದೇಶದ ಪೊಲೀಸರ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

 

Advertisement

Udayavani is now on Telegram. Click here to join our channel and stay updated with the latest news.

Next