Advertisement

ಆಧಾರ್‌-ಪ್ಯಾನ್‌ ಲಿಂಕ್‌ ಮಾ.  31ರ ವರೆಗೆ ಕಾಲಾವಕಾಶ

11:08 PM Sep 18, 2021 | Team Udayavani |

ಹೂಡಿಕೆಯಿಂದ ಟಿಡಿಎಸ್‌ವರೆಗೆ ಪ್ಯಾನ್‌ ಅತ್ಯಗತ್ಯ :

Advertisement

ಆಧಾರ್‌ನೊಂದಿಗೆ ಪ್ಯಾನ್‌ ಕಾರ್ಡ್‌ನ್ನು ಲಿಂಕ್‌ ಮಾಡಲು ಆದಾಯ ತೆರಿಗೆ ಇಲಾಖೆ ನೀಡಿದ್ದ ಸೆಪ್ಟಂಬರ್‌ 30ರ ಗಡುವನ್ನು ಮತ್ತೆ 6 ತಿಂಗಳುಗಳ ಕಾಲ ವಿಸ್ತರಿಸಲಾಗಿದೆ. ತೆರಿಗೆದಾರರ ಒತ್ತಡಕ್ಕೆ ಮಣಿದು ಸರಕಾರ ಈ ನಿರ್ಧಾರ ಕೈಗೊಂಡಿದೆ. ಈಗಾಗಲೇ ಹಲವಾರು ಬಾರಿ ಸರಕಾರ ಗಡುವನ್ನು ವಿಸ್ತರಿಸಿರುವುದರಿಂದ 2022ರ ಮಾ. 31ರ ಬಳಿಕ ಗಡುವನ್ನು ವಿಸ್ತರಿಸುವ ಸಾಧ್ಯತೆ ಕಡಿಮೆ. ನಿಗದಿತ ದಿನಾಂಕದೊಳಗೆ ಆಧಾರ್‌ನೊಂದಿಗೆ ಲಿಂಕ್‌ ಮಾಡದೇ ಹೋದಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯಗೊಳ್ಳಲಿದೆ ಮಾತ್ರವಲ್ಲದೆ ನೀವು ದಂಡವನ್ನೂ ತೆರಬೇಕಾಗುತ್ತದೆ.

ಪ್ಯಾನ್‌ ಕಾರ್ಡ್‌ ಅತ್ಯಗತ್ಯ :

ಹಣಕಾಸು ವ್ಯವಹಾರ ಮತ್ತು ಕೆಲವೊಂದು ನಿರ್ದಿಷ್ಟ ಹೂಡಿಕೆಗಳಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿದೆ. ಬ್ಯಾಂಕ್‌ನಲ್ಲಿ ನೀವು ಉಳಿತಾಯ ಖಾತೆ, ಸ್ಥಿರ ಠೇವಣಿ ಇಡಬೇಕೆಂದಿದ್ದಲ್ಲಿ, ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಸೌಲಭ್ಯ ಪಡೆಯಬೇಕೆಂದಿದ್ದಲ್ಲಿ, ಡಿಮ್ಯಾಟ್‌ ಖಾತೆ ತೆರೆಯಲು, ಮ್ಯೂಚುವಲ್‌ ಫ‌ಂಡ್‌ ಖರೀದಿ ಮತ್ತಿತರ ಹಣಕಾಸು ವ್ಯವಹಾರ, ಹೂಡಿಕೆಗಳಿಗೆ ಪ್ಯಾನ್‌ ಕಾರ್ಡ್‌ ಅತ್ಯವಶ್ಯವಾಗಿದೆ. ಒಂದು ವೇಳೆ ನೀವು ನಿಷ್ಕ್ರಿಯ ಪ್ಯಾನ್‌ ಕಾರ್ಡ್‌ ಅಥವಾ ನೀವು ಸಲ್ಲಿಸಿರುವ ಕೆವೈಸಿ ಅಪೂರ್ಣವಾಗಿದ್ದಲ್ಲಿ ಈ ಎಲ್ಲ ವ್ಯವಹಾರಗಳನ್ನು ನಡೆಸಲು ನಿಮಗೆ ಸಾಧ್ಯವಾಗದು. 2022ರ

ಮಾ. 31ರೊಳಗಾಗಿ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡದೇ ಹೋದಲ್ಲಿ ಎಪ್ರಿಲ್‌ನಿಂದ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವ ಸಂದರ್ಭದಲ್ಲಿ ನಿಮ್ಮ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

Advertisement

ಎಫ್ಡಿ ಬಡ್ಡಿ ಮೇಲಿನ ತೆರಿಗೆ  :

ಸ್ಥಿರ ಠೇವಣಿ ಯೋಜನೆಯಲ್ಲಿ ನೀವು ಇರಿಸಿದ ಮೊತ್ತದ ಮೇಲಿನ ಬಡ್ಡಿ ಹಣ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದ್ದಲ್ಲಿ ಬ್ಯಾಂಕ್‌ಗಳು ಟಿಡಿಎಸ್‌ ಕಡಿತಗೊಳಿಸುತ್ತವೆ. ವರ್ಷದ ಬಡ್ಡಿ 40,000 ರೂ. ಗಳನ್ನು ಮೀರಿದರೆ ಸ್ಥಿರ ಠೇವಣಿಗಳ ಮೇಲೆ ಶೇ.10 ಟಿಡಿಎಸ್‌ ದರ ನಿಗದಿಪಡಿಸಲಾಗಿದೆ. ಪ್ರಸ್ತುತ ಆದಾಯ ತೆರಿಗೆ ಕಾನೂನಿನಡಿಯಲ್ಲಿ ಲಿಂಕ್‌ ಆಗಿರುವ ಪ್ಯಾನ್‌ ಕಾರ್ಡ್‌ ಅನ್ನು ಖಾತೆದಾರರು ನೀಡದಿದ್ದಲ್ಲಿ ಟಿಡಿಎಸ್‌ ದರ ಶೇ.20 ಆಗಿರಲಿದೆ. ಹೆಚ್ಚಿನ ಟಿಡಿಎಸ್‌ ದರ ಪಾವತಿಯನ್ನು ತಪ್ಪಿಸಲು ಪ್ಯಾನ್‌ ಅನ್ನು ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್‌ ಮಾಡಿಕೊಳ್ಳಲೇಬೇಕು.

ಅಪೂರ್ಣ ಕೆವೈಸಿ ಅಥವಾ ನಿಷ್ಕ್ರಿಯ ಪ್ಯಾನ್‌ನಿಂದ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹೂಡಿಕೆ ಅಥವಾ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲದೆ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ 50,000ರೂ ಮೇಲ್ಪಟ್ಟ ಖರೀದಿ ಅಥವಾ ಪಾವತಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿದೆ. ಇನ್ನು ಡಿಬೆಂಚರ್‌ ಅಥವಾ ಬಾಂಡ್‌ಗಳನ್ನು ಖರೀದಿಸುವವರಿಗೂ ಪ್ಯಾನ್‌ ಕಾರ್ಡ್‌ ಅತ್ಯಗತ್ಯ.

ದಂಡ ತೆರಬೇಕು :

2021ರ ಬಜೆಟ್‌ನಲ್ಲಿ ಕೇಂದ್ರ ಸರಕಾರವು 1961ರ ಆದಾಯ ತೆರಿಗೆ ಕಾಯ್ದೆಗೆ ಸೆಕ್ಷನ್‌ 234ಎಚ್‌ ಅನ್ನು ಸೇರಿಸಿದ್ದು ಇದರನ್ವಯ ನಿಗದಿತ ಸಮಯಕ್ಕೆ ಸರಿಯಾಗಿ ಪ್ಯಾನ್‌ ಕಾರ್ಡ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡದಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಗಡುವಿನ ಅನಂತರ ತಮ್ಮ ಆಧಾರ್‌ನೊಂದಿಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡುವವರು 1,000 ರೂ. ಗಳ ದಂಡ ತೆರಬೇಕಾಗುತ್ತದೆ. ಹಾಗಾಗಿ ಅವಧಿ ಮುಗಿಯುವ ಮೊದಲು ಲಿಂಕ್‌ ಮಾಡಿಕೊಳ್ಳುವುದು ಉತ್ತಮ.

ವಾಹನ ಖರೀದಿ, ಮಾರಾಟಕ್ಕೆ ತೊಂದರೆ :

ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನ ಮಾರಾಟ ಅಥವಾ ಖರೀದಿಗೆ ಪ್ಯಾನ್‌ ಕಡ್ಡಾಯ. ಹೊಟೇಲ್‌ ಅಥವಾ ರೆಸ್ಟೋರೆಂಟ್‌ಗಳಲ್ಲಿ 50,000 ರೂ. ಗಳಿಗಿಂತ ಹೆಚ್ಚಿನ ಮೊತ್ತವನ್ನು ನೀಡುವುದಿದ್ದರೆ ಇಲ್ಲವೇ ನೀವು ಬೇರೆ ದೇಶಗಳಿಗೆ ಪ್ರಯಾಣಿಸಲು ಅಥವಾ ಬೇರೆ ಯಾವುದೋ ಕಂಪೆನಿ ಅಥವಾ ಸಂಸ್ಥೆ, ಸಹಕಾರ ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ 50,000 ರೂ.ಗಳಿಗಿಂತ ಜಾಸ್ತಿ ಹಣ ಇಡಬೇಕಾದಲ್ಲಿ ನಿಮಗೆ ಪ್ಯಾನ್‌ ಕಾರ್ಡ್‌ನ ಆವಶ್ಯಕತೆಯಿರುತ್ತದೆ.

ಹಾಗಿದ್ದರೆ ಲಿಂಕ್‌ ಮಾಡುವುದು ಹೇಗೆ?:

  • incometax. gov.inಗೆ ಲಾಗ್‌ಇನ್‌ ಆಗಬೇಕು.
  • ಅಲ್ಲಿ ಲಿಂಕ್‌ ಆಧಾರ್‌ ಎಂಬುದನ್ನು ಕ್ಲಿಕ್‌ ಮಾಡಿ. ಅನಂತರ ಪ್ಯಾನ್‌, ಆಧಾರ್‌ ಸಂಖ್ಯೆ ನಮೂದಿಸಲು ಹೊಸ ಪುಟ ತೆರೆಯುತ್ತದೆ.
  • ಅಲ್ಲಿ ಕೊಡಲಾಗಿರುವ ಕ್ಯಾಚ್ಚ ಕೋಡ್‌ ಅನ್ನು ನಮೂದಿಸಿ
  • ಬಳಿಕ “ಲಿಂಕ್‌ ಆಧಾರ್‌’ ಅನ್ನು ಕ್ಲಿಕ್‌ ಮಾಡಬೇಕು.

ಆದಾಯ ತೆರಿಗೆ ಇಲಾಖೆ ನಿಮ್ಮ ಪ್ಯಾನ್‌, ಆಧಾರ್‌ ಸಂಖ್ಯೆ, ಹೆಸರು, ವಯಸ್ಸು, ಲಿಂಗ ಪರಿಶೀಲಿಸಿ ಲಿಂಕ್‌ ಆಗಿದೆಯೋ ಇಲ್ಲವೋ ಎಂಬುದನ್ನು ದೃಢೀಕರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next