Advertisement

ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗೆ ಗಡುವು

11:07 PM Aug 17, 2022 | Team Udayavani |

ಬೆಂಗಳೂರು: ಶಾಲೆಯಿಂದ ಹೊರಗುಳಿದ ಪ್ರತೀ ಮಗುವನ್ನು ಪತ್ತೆ ಹಚ್ಚಿ ಮರಳಿ ಶಾಲೆಗೆ ಕರೆತರಲು ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್‌ ಸರಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಎಚ್ಚೆತ್ತ ಶಿಕ್ಷಣ ಇಲಾಖೆಯು ಸೆ. 19ರೊಳಗೆ ಎಲ್ಲ ಮಕ್ಕಳನ್ನು ಪತ್ತೆ ಮಾಡಿ ಮರಳಿ ಶಾಲೆಗೆ ದಾಖಲಿಸಲು ಕ್ರಮ ವಹಿಸುವಂತೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

Advertisement

ಶಾಲೆಯಿಂದ ಹೊರಗುಳಿದ ಮಕ್ಕಳ ಸಂಬಂಧ ಇತ್ತೀಚೆಗೆ ಹೈಕೋರ್ಟ್‌ ನಡೆಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಸರಕಾರ ರಾಜ್ಯದಲ್ಲಿ ಒಟ್ಟು 24,308 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ 18,584 ಮಂದಿಯನ್ನು ಪತ್ತೆ ಮಾಡಲಾಗಿದೆ. ಉಳಿದ 5,724 ಮಂದಿಯನ್ನು ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿತ್ತು. ಅಲ್ಲದೆ, ಪತ್ತೆ ಹಚ್ಚಿರುವ 18,584 ಮಕ್ಕಳಲ್ಲಿ 14,871 ಮಕ್ಕಳನ್ನು ಶಾಲೆಗೆ ಮರಳಿ ದಾಖಲಿಸಿಕೊಳ್ಳಲಾಗಿದೆ. ಇನ್ನು 3,713 ಮಕ್ಕಳ ದಾಖಲಾತಿ ಆಗಬೇಕಿದೆ ಎಂದು ವರದಿ ನೀಡಿತ್ತು.

ಬಳಿಕ ಹೈಕೋರ್ಟ್‌ ಶಾಲೆಯಿಂದ ಹೊರಗುಳಿದಿರುವ ಪ್ರತಿಯೊಬ್ಬ ಮಕ್ಕಳನ್ನೂ ಪತ್ತೆ ಹಚ್ಚಬೇಕು. ಅದೇ ರೀತಿ ಪತ್ತೆ ಹಚ್ಚಿದ ಪ್ರತೀ ಮಕ್ಕಳನ್ನೂ ಮರಳಿ ಶಾಲೆಗೆ ದಾಖಲಾತಿ ನೀಡಬೇಕು. ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದೆಂದು ಕಟ್ಟು ನಿಟ್ಟಾಗಿ ಸೂಚಿಸಿತ್ತು. ಈ ಸಂಬಂಧ ಕೈಗೊಂಡ ಕ್ರಮ ಕೈಗೊಂಡು ಅನುಪಾಲನ ವರದಿ ಸಲ್ಲಿಸಲು ಕೂಡ ಆದೇಶಿಸಿದೆ.

ಸೆ. 19ರ ಒಳಗೆ ಗಡುವು
ಈ ಹಿನ್ನೆಲೆಯಲ್ಲಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು, ಇದುವರೆಗೆ ಪತ್ತೆಯಾಗದ 5,700ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹೆಚ್ಚುವ ಕೆಲಸ ಮಾಡಬೇಕು. ಪತ್ತೆ ಹಚ್ಚಿರುವವರ ಪೈಕಿ ದಾಖಲಾತಿ ಆಗದೆ ಇರುವ 3,700ಕ್ಕೂ ಹೆಚ್ಚು ಮಕ್ಕಳನ್ನು ಆದಷ್ಟು ಬೇಗ ಶಾಲೆಗೆ ದಾಖಲಾತಿ ನೀಡಿ ಸೆ. 19ರೊಳಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನ ನಿರ್ದೇಶಕಿ ಬಿ.ಬಿ. ಕಾವೇರಿ ಸೂಚಿಸಿದ್ದಾರೆ.

ಶಿಕ್ಷಕರು ಸಮಯ ಪಾಲಿಸದಿದ್ದರೆ ಕಠಿನ ಕ್ರಮ
ಬೆಂಗಳೂರು: ಸಮಯ ಪಾಲನೆ ಮಾಡದೆ ಅಶಿಸ್ತು ಪಾಲಿಸುವ ಮತ್ತು ಗೈರು ಹಾಜರಾಗುವ ಶಿಕ್ಷಕರ ವರ್ತನೆಯನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗದ ಶಿಕ್ಷಕರ ವಿರುದ್ಧ ಕಠಿನ ಕ್ರಮ ಜರಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Advertisement

ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಮೂಲಕ ಸೂಚನೆ ನೀಡಿದ್ದು, ಸಮಯಕ್ಕೆ ಸರಿಯಾಗಿ ಹಾಜರಾಗದ ಶಿಕ್ಷಕರ ವಿರುದ್ಧ ಕ್ರಮ ಜರಗಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ.

ಎಚ್ಚರಿಕೆ ನೀಡುವಂತೆ ರಾಜ್ಯದ ಎಲ್ಲ ಡಿಡಿಪಿಐ ಮತ್ತು ಬಿಇಒಗಳಿಗೆ ಸೂಚಿಸುವಂತೆ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳಿಗೆ ಬರೆದಿರುವ ಟಿಪ್ಪಣಿಯಲ್ಲಿ ಸಚಿವರು ಉಲ್ಲೇಖಿಸಿದ್ದಾರೆ. ರಾಜ್ಯದ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದವರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next