ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆ, ಗಾಯದ ಮೇಲೆ ಬರೆ ಎಳೆದರು ಎಂಬಂತೆ ತಮಿಳುನಾಡಿನಿಂದ ನೀರಿಗಾಗಿ ತಗಾದೆ… ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರು ತಳಮಟ್ಟಕ್ಕೆ ಇಳಿಯುತ್ತಿದ್ದು, ಬೆಂಗಳೂರಿಗೆ ಮೇ ಅಂತ್ಯದವರೆಗೆ ನೀರು ಪೂರೈಸಬೇಕಾದರೆ ಜಲಾಶಯದ ಡೆಡ್ ಸ್ಟೋರೇಜ್‌ಗೂ ಕೈ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಮೇ ಅಂತ್ಯದವರೆಗೆ ಬೆಂಗಳೂರಿಗೆ ಕೆಆರ್‌ಎಸ್‌ನಿಂದ ನೀರು ಪೂರೈಸಲು ಸುಮಾರು 2ರಿಂದ 3 ಟಿಎಂಸಿ ನೀರಿನ ಕೊರತೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಅಳಿದುಳಿದಿರುವ ಡೆಡ್ ಸ್ಟೋರೇಜ್ ನೀರು ಬಳಕೆಗೆ ಅವಕಾಶ ನೀಡುವಂತೆ ಬೆಂಗಳೂರು ಜಲ ಮಂಡಳಿಯು ಜಲ ಸಂಪನ್ಮೂಲ ಇಲಾಖೆಗೆ ಪತ್ರ ಬರೆದು ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ. ಆದರೆ, ಈ ಕೆಲಸ ಭಾರಿ ವೆಚ್ಚದಾಯಕ. ಜತೆಗೆ, ಜಲಾಶಯಕ್ಕೆ ಹಾನಿ ಮಾಡಬಹುದಾದ ಕಾರಣಕ್ಕೆ ಪ್ರಸ್ತಾವನೆಗೆ ಜಲ ಸಂಪನ್ಮೂಲ ಇಲಾಖೆ ಇನ್ನೂ ಒಪ್ಪಿಗೆ ನೀಡಿಲ್ಲ.
ಈ ಕುರಿತು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, “”ಮೇ ಅಂತ್ಯದವರೆಗೆ ಕೆಆರ್‌ಎಸ್‌ನಿಂದ ಬೆಂಗಳೂರಿಗೆ ನೀರು ಪೂರೈಸಲು ಯಾವುದೇ ಅಡ್ಡಿಯಾಗುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
“ಡೆಡ್ ಸ್ಟೋರೇಜ್ ನೀರು ಬಳಸಬೇಕಾದರೆ ಜಲಾಶಯದಿಂದ ನೀರನ್ನು ಪಂಪ್ ಮಾಡಬೇಕಾಗುತ್ತದೆ. ಇದಕ್ಕೆ ಸುಮಾರು 40 ಕೋಟಿ ರೂ. ವೆಚ್ಚವಾಗುತ್ತದೆ. ಜಲಾಶಯದ ಸಂರಕ್ಷಣೆ ದೃಷ್ಟಿಯಿಂದ ಸಾಮಾನ್ಯವಾಗಿ ಡೆಡ್ ಸ್ಟೋರೇಜ್ ನೀರು ಬಳಸುವುದಿಲ್ಲ. ಆದರೆ, ತುರ್ತು ಸಂದರ್ಭದಲ್ಲಿ ಜನರ ಜೀವ ಉಳಿಸಲು ಅನಿವಾರ್ಯವಾಗಿ ಈ ನೀರು ಬಳಸಿಕೊಳ್ಳಬೇಕಾಗುತ್ತದೆ. ಆದರೆ, ಅದರಿಂದ ಜಲಾಶಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು,” ಎಂದು ತಿಳಿಸಿದರು.
“ಪ್ರಸ್ತುತ ಬೆಂಗಳೂರು ನಗರದ ಮೂರನೇ ಒಂದು ಭಾಗದಷ್ಟು ಜನರಿಗೆ ಮಾತ್ರ ಕಾವೇರಿ ನೀರು ಪೂರೈಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯಿಂದ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಿಗೆ 16.1 ಟಿಎಂಸಿ ನೀರು ಬಳಸಿಕೊಳ್ಳಲು ತೀರ್ಮಾನಿಸಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರಿನ ನೀರಿನ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಜಲ ಮಂಡಳಿಯಿಂದಲೂ ಆರ್ಥಿಕ ನೆರವನ್ನೂ ಪಡೆಯಲು ಚಿಂತಿಸಲಾಗಿದೆ,” ಎಂದರು.
ಕೆಆರ್‌ಎಸ್‌ನಲ್ಲಿ ನೀರು ಸಂಗ್ರಹ ಕಡಿಮೆ ಇರುವುದರಿಂದ ಲಭ್ಯ ನೀರನ್ನು ಮೇ ತಿಂಗಳ ಅಂತ್ಯದವರೆಗೆ ಪೂರೈಸುವುದು ಕಷ್ಟಸಾಧ್ಯ. ಸದ್ಯದ ಮಾಹಿತಿ ಪ್ರಕಾರ 2ರಿಂದ 3 ಟಿಎಂಸಿ ನೀರು ಕೊರತೆಯಾಗಲಿದೆ. ಈ ಕೊರತೆ ನಿವಾರಿಸಲು ಡೆಡ್ ಸ್ಟೋರೇಜ್ ನೀರು ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಜಲ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ನಾವು ಇನ್ನೂ ಅದಕ್ಕೆ ಒಪ್ಪಿಗೆ ನೀಡಿಲ್ಲ.
-ಎಂ ಬಿ ಪಾಟೀಲ್, ಜಲಸಂಪನ್ಮೂಲ ಸಚಿವ