Advertisement
ತಾಲೂಕಿನ 14 ಸ್ಥಾನಗಳ ಪೈಕಿ ಕೃಷಿ ಸಹಕಾರ ಸಂಸ್ಕರಣ ಸಂಘಗಳ(ಹಾಪ್‌ಕಾಮ್ಸ್) ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೊಸಹುಂಡಿ ರಘು ಅವಿರೋಧವಾಗಿ ಆಯ್ಕೆಯಾಗಿದ್ದರು. ಹೀಗಾಗಿ ಉಳಿದ 13 ಸ್ಥಾನಗಳಿಗೆ ಜ.16ರಂದು ನಡೆದಿದ್ದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 7 ಸ್ಥಾನಗಳಲ್ಲಿ ಗೆಲುವಿನ ನಗೆಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್ 5 ಹಾಗೂ 1 ಸ್ಥಾನಕ್ಕೆ ಯಾವುದೇ ಪಕ್ಷದ ಬೆಂಬಲಿತರಲ್ಲದ ಅಭ್ಯರ್ಥಿಯೊಬ್ಬರು ಆಯ್ಕೆಯಾಗಿದ್ದಾರೆ. ಇದರಿಂದಾಗಿ ತಾಲೂಕಿನ 14 ಸ್ಥಾನಗಳಲ್ಲಿ ಜೆಡಿಎಸ್ 7, ಕಾಂಗ್ರೆಸ್ 6 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಚುನಾಯಿತರಾಗಿದ್ದು, ತಾಲೂಕಿನಲ್ಲಿ ಒಂದು ಸ್ಥಾನವನ್ನೂ ಪಡೆಯದ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ.
Related Articles
Advertisement
ಕಾರ್ಯಕರ್ತರ ಸಂಭ್ರಮ: ತಾಲೂಕು ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಜರ್‌ಬಾದ್‌ನ ಪೀಪಲ್ಸ್‌ಪಾರ್ಕ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ 8ಕ್ಕೆ ಆರಂಭಗೊಂಡ ಮತಎಣಿಕೆ ಪ್ರಕ್ರಿಯೆ ಎಣಿಕೆ ಆರಂಭಕ್ಕೂ ಮೊದಲೇ ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದತ್ತ ಆಗಮಿಸಿದ್ದರು. 14 ಕ್ಷೇತ್ರಗಳಲ್ಲಿ ಪೈಕಿ ಪ್ರತಿಯೊಂದು ಕ್ಷೇತ್ರದ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು. ಅಲ್ಲದೆ ಪಕ್ಷದ ಮುಖಂಡರ ಹೆಸರನ್ನು ಕೂಗುತ್ತಾ, ಜೈಕಾರ ಹಾಕುವ ಮೂಲಕ ಗೆಲುವಿನ ಸಂಭ್ರಮಾಚರಣೆ ಮಾಡಿದರು.
ಸಿಎಂ ಸೋದರನ ಅಳಿಯನಿಗೆ ಗೆಲುವುಮೈಸೂರು ತಾಲೂಕು ಎಪಿಎಂಸಿ ಚುನಾವಣೆಗೆ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹೋದರನ ಅಳಿಯ ಪಿ.ಬಸವರಾಜು 53 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ತಾಲೂಕಿನ ಯಡಕೊಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಸವರಾಜು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಎಸ್.ಮಾದಪ್ಪ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದರು. ಪಿ.ಬಸವರಾಜು(1687 ಮತ) ಹಾಗೂ ಬಿಜೆಪಿ ಬೆಂಬಲಿತ ಕೆ.ಎಸ್.ಮಾದಪ್ಪ (1634 ಮತ) ಪಡೆದರು. ವಿಜೇತ ಅಭ್ಯರ್ಥಿ ಬಸವರಾಜು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡರ ಪುತ್ರಿಯನ್ನು ವಿವಾಹವಾಗಿದ್ದು, ಸ್ವಗ್ರಾಮ ದವರೇ ಆಗಿದ್ದಾರೆ. ಸ್ಥಳೀಯ ವ್ಯವಸಾಯೋತ್ಪನ್ನ ಸಹಕಾರ ಸಂಘದ ಅಧ್ಯಕ್ಷರಾಗಿರುವ ಇವರು ಇದೀಗ ಎಪಿಎಂಸಿ ಚುನಾವಣೆಯಲ್ಲೂ ಗೆಲುವು ಕಂಡಿದ್ದಾರೆ. ಇನ್ನೊಂದೆಡೆ ಶ್ರೀರಾಂಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಎನ್.ಮಂಜೇಗೌಡರ ಪುತ್ರ ಎಂ.ಭರತ್ ಜೆಡಿಎಸ್ ಅಭ್ಯರ್ಥಿ ಎದುರು 500ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತು ಮುಖಭಂಗ ಅನುಭವಿಸಿದರು.