ಬೆಂಗಳೂರು: ಪೊಲೀಸ್ ಆಗುವ ಕನಸು ಕಂಡಿದ್ದ ಕ್ಯಾನ್ಸರ್ ಪೀಡಿತ 10 ವರ್ಷದ ಬಾಲಕನನ್ನು ಒಂದು ದಿನಕ್ಕೆ ಪೊಲೀಸ್ ಅಧಿಕಾರಿ ಮಾಡುವ ಮೂಲಕ ಆತ ಕಂಡ ಕನಸನ್ನು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ನನಸು ಮಾಡಿದ್ದಾರೆ.
ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಮಲ್ಲಿಕಾರ್ಜುನ್ ಪೊಲೀಸ್ ಆಗಬೇಕೆಂಬ ಕನಸು ಕಂಡಿದ್ದ. ಇದನ್ನು ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದ. ಈತನ ಮನದಾಸೆಯನ್ನ ಆಡಳಿತ ಮಂಡಳಿಗೆ ಕುಟುಂಬಸ್ಥರು ಹೇಳಿ ಕೊಂಡಿದ್ದರು.
ಬೆಂಗಳೂರು ಪರಿಹಾರ ಸಂಸ್ಥೆ ಸಹಯೋಗದೊಂದಿಗೆ ಬುಧವಾರ ಒಂದು ದಿನದ ಮಟ್ಟಿಗೆ ಮಲ್ಲಿಕಾರ್ಜುನ್ ಗೆ ಪೊಲೀಸ್ ವೇಷ ತೊಡಿಸಿ ಕಚೇರಿಗೆ ಜೀಪ್‌ನಲ್ಲಿ ಬರುವ ವ್ಯವಸ್ಥೆ ಮಾಡಿ ಡಿಸಿಪಿ ಕುಳಿತುಕೊಳ್ಳುವ ಆಸನದಲ್ಲಿ ಆತನನ್ನು ಕೂರಿಸಿದ್ದರು. ನಂತರ ಬಾಲಕನಿಗೆ ಹೂಗುಚ್ಛ ನೀಡಿ ಬಾಲ ಪೊಲೀಸ್ ಮಲ್ಲಿಕಾರ್ಜುನನ್ನು ಪೊಲೀಸ್ ಅಧಿಕಾರಿಗಳು ಸ್ವಾಗತ ಮಾಡಿದರು.
ನಂತರ ಪೊಲೀಸ್ ಬ್ಯಾಟನ್ ಮೂಲಕ ಗೌರವ ಸೂಚಿಸಲಾಯಿತು. ಠಾಣೆಯಲ್ಲಿದ್ದ ಎಲ್ಲ ಸಿಬ್ಬಂದಿ ಹಸ್ತಲಾಘವ ಮಾಡಿಕೊಂಡರು. ದೊಡ್ಡವನಾದ ಮೇಲೆ ಡಿಸಿಪಿಯಾಗುವುದಾಗಿ ಇಂಗಿತ ವ್ಯಕ್ತಪಡಿಸಿದ ಬಾಲಕನ ಮಾತನ್ನು ಕೇಳಿ ಕಚೇರಿಯಲ್ಲಿದ್ದ ಪೊಲೀಸ್ ಸಿಬ್ಬಂದಿ ಭಾವುಕವಾದರು.
■ ಉದಯವಾಣಿ ಸಮಾಚಾರ