ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ ಅಮೂಲ್ಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಆರ್ದಾ ಎಂಬ ಯುವತಿ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಗುರುವಾರ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯಿದೆ(ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಮಾವೇಶದಲ್ಲಿ ಕೊಪ್ಪ ಮೂಲದ ಅಮೂಲ್ಯ ಲಿಯೋನ ದೇಶ ವಿರೋಧಿ ಘೋಷಣೆ ಕೂಗಿದ್ದಳು.
ಇಂದು ಅಮೂಲ್ಯ ವಿರುದ್ಧ ಹಿಂದೂಪರ ಸಂಘಟನೆಗಳು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ. ಏಕಾಏಕಿ ಆರ್ದಾ ಎಂಬಾಕೆ ಮುಕ್ತಿ ಕಾಶ್ಮೀರ, ಮುಕ್ತಿ ಮುಸ್ಲಿಂ, ಮುಕ್ತಿ ದಲಿತ, ಮುಕ್ತಿ ಆದಿವಾಸಿ ಎಂಬ ಭಿತ್ತಿ ಪತ್ರ ಹಿಡಿದಿದ್ದಳು. ಕೂಡಲೇ ಸಂಘಟನೆ ಕಾರ್ಯಕರ್ತರು ಮತ್ತು ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ಕಾಶ್ಮೀರ ಮುಕ್ತ ಭಿತ್ತಿಪತ್ರ ಹಿಡಿದಿದ್ದ ಆರ್ದಾ ವಿರುದ್ಧ ಎಸ್ ಜೆ ಪಾರ್ಕ್ ಪೊಲೀಸರು ಐಪಿಸಿ ಸೆಕ್ಷನ್ 153 (ಎ), 153ಬಿ(ಭಾವೈಕ್ಯತೆ, ರಾಷ್ಟ್ರೀಯ ಐಕ್ಯತೆಗೆ ಧಕ್ಕೆ) ಅನ್ವಯ ಎಫ್ ಐಆರ್ ದಾಖಲಿಸಿರುವುದಾಗಿ ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.
ಅಮೂಲ್ಯ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಆರ್ದಾ ಎಂಬಾಕೆ ಏಕಾಏಕಿ ಪಾಕ್ ಪರ ಘೋಷಣೆ ಕೂಗಿದ್ದಳು ಎಂದು ಈ ಮೊದಲು ಚಾನೆಲ್ ಗಳು ವರದಿ ಪ್ರಸಾರ ಮಾಡಿದ್ದವು. ಆದರೆ ಆಕೆ ಪಾಕ್ ಪರ ಘೋಷಣೆ ಕೂಗಿಲ್ಲ, ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶಿಸಿದ್ದಳು ಎಂದು ಸ್ಪಷ್ಟನೆ ನೀಡಿದ್ದಾರೆ.