Advertisement

ಬಿಜೆಪಿಗೆ ವಿಶ್ವಾಸ ಹೆಚ್ಚಿಸಿದ ಶರಣು ಸಲಗರ ಜಯ: ಡಿಸಿಎಂ ಸವದಿ ಸಂತಸ

03:49 PM May 02, 2021 | Team Udayavani |

ಬೆಂಗಳೂರು: ಬಸವಕಲ್ಯಾಣ ಕ್ಷೇತ್ರವು ಹಿಂದೆ ಕಾಂಗ್ರೆಸ್ ಹಿಡಿತದಲ್ಲಿತ್ತು. ಆದರೆ ಸಂಘಟನೆಯ ಬಲದಿಂದ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಜಯ ಕಟ್ಟಿಟ್ಟ ಬುತ್ತಿ ಎನ್ನುವುದು ಈ ಚುನಾವಣಾ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರನ್ನು ನಿರೀಕ್ಷೆಯಂತೆ ಬಹುಮತದಿಂದ ಗೆಲ್ಲಿಸಿದ ಬಸವಕಲ್ಯಾಣ ಕ್ಷೇತ್ರದ ಎಲ್ಲಾ ಮತದಾರರಿಗೂ, ಪಕ್ಷದ ಕಾರ್ಯಕರ್ತರಿಗೂ ಹಾಗೂ ಮುಖಂಡರಿಗೂ ನಾನು ಧನ್ಯವಾದಗಳನ್ನು ತಿಳಿಸಬಯಸುತ್ತೇನೆ ಎಂದಿದ್ದಾರೆ.

ಪಕ್ಷವು ನನ್ನ ನೇತೃತ್ವದಲ್ಲಿ ಉಸ್ತುವಾರಿ ಸಮಿತಿ ರಚಿಸಿತ್ತು. ಎಲ್ಲರೂ ಒಗ್ಗಟ್ಟಿನಿಂದ ನಿರಂತರವಾಗಿ ಶ್ರಮಿಸಿದ ಫಲಶ್ರುತಿಯಾಗಿ ಈ ಸಾಧನೆ ಸಾಧ್ಯವಾಗಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಪಕ್ಷವು ಸೂಚಿಸುವ ಅಭ್ಯರ್ಥಿಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ನಾವು ಮನವಿ ಮಾಡಿಕೊಂಡಿದ್ದೆವು. ಇದಕ್ಕೆ ಸ್ಪಂದಿಸಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡಿರುವುದು ಈ ಚುನಾವಣೆಯ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ. ನರೇಂದ್ರ ಮೋದಿಅವರ ನೇತೃತ್ವದ ಕೇಂದ್ರ ಸರ್ಕಾರದ ಮತ್ತು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರದ ಜನಪರ ಸಾಧನೆಗಳಿಗೆ ಈ ವಿಜಯವು ಕೈಗನ್ನಡಿಯಾಗಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಬಸವಕಲ್ಯಾಣದಲ್ಲಿ ಗೆಲುವಿನ ನಗಾರಿ ಬಾರಿಸಿದ ಬಿಜೆಪಿಯ ಶರಣು ಸಲಗರ

ಈ ಗೆಲುವಿನಿಂದ ಮೈಮರೆಯದೆ ಮುಂದೆಯೂ ಸಾರ್ವಜನಿಕರ ಮತ್ತು ಭಾರತೀಯ ಜನತಾ ಪಕ್ಷದ ಹಿತ ಕಾಪಾಡಲು ಶರಣು ಅವರು ನಿರಂತರವಾಗಿ ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಜಯಗಳಿಸಿರುವ ಶರಣು ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರನ್ನು ಗೆಲ್ಲಿಸಿರುವ ಮತದಾರರಿಗೂ ಮತ್ತೊಮ್ಮೆ ನನ್ನ ವಂದನೆಗಳು ಎಂದು ಡಿಸಿಎಂ ಸವದಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next