ಮಡಿಕೇರಿ: ಕೇರಳಕ್ಕೆ 500 ಕೋಟಿ ರೂ. ನೀಡಿರುವ ಪ್ರಧಾನಿ ಮೋದಿ ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ಕನಿಷ್ಠ 100 ಕೋಟಿ ರೂ.ಗಳನ್ನಾದರೂ ಪ್ರಥಮ ಹಂತದಲ್ಲಿ ಬಿಡುಗಡೆಗೊಳಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿನಲ್ಲಿ ಈವರೆಗೆ 5 ಸಾವಿರ ಮನೆಗಳು ನಾಶವಾಗಿದ್ದು, ರಾಜ್ಯ ಸರ್ಕಾರ ಸದಾ ಕೊಡಗಿನ ಜನತೆಯೊಂದಿಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯವು ಕೊಡಗಿನ ಸಮಸ್ಯೆ ಪರಿಹಾರಕ್ಕೆ ಪ್ರಥಮ ಹಂತದಲ್ಲಿ ಕನಿಷ್ಠ 100 ಕೋಟಿ ರೂ.ಗಳನ್ನು ನಿರೀಕ್ಷಿಸುತ್ತಿದೆ ಎಂದು ಹೇಳಿದರು. ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಪರಮೇಶ್ವರ್ ಮಡಿಕೇರಿಯಲ್ಲಿನ ನಿರಾಶ್ರಿತರ ಕೇಂದ್ರಗಳಿಗೂ ತೆರಳಿ ಅಲ್ಲಿ ಆಶ್ರಯ ಪಡೆದಿರುವ ಜನರಿಗೆ ಸಾಂತ್ವನ ಹೇಳಿದರು. ಹಾನಿ ಸ್ಥಳಕ್ಕೆ ಕೇಂದ್ರ ಸಚಿವರು ಭೇಟಿ ನೀಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಸಮೀಕ್ಷೆ ಸಾಧ್ಯವಾಗಿಲ್ಲ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನೆರೆ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 7 ಜನ ಸಾವನ್ನಪ್ಪಿರುವುದು ಅಧಿಕೃತವಾಗಿದ್ದರೂ ಮಣ್ಣಿನಡಿ ಇನ್ನೂ ಕೆಲವರು ಸಿಲುಕಿ ಸಾವನ್ನಪ್ಪಿರುವ ಶಂಕೆಯಿದೆ. ಈವರೆಗೆ 5 ಸಾವಿರ ಮನೆಗಳು ನಾಶವಾಗಿದ್ದು, ನಿರಾಶ್ರಿತರಿಗೆ ಮನೆಗಳನ್ನು ಹೊಸ ಬಡಾವಣೆ ನಿರ್ಮಾಣದ ಮೂಲಕ ನಿರ್ಮಿಸಿಕೊಡಲಾಗುತ್ತದೆ. ಕೊಡಗಿನಲ್ಲಿ ಸಂಭವಿಸಿರುವ ನಷ್ಟದ ಲೆಕ್ಕ ಹಾಕಲು ಇನ್ನೂ ಸಾಧ್ಯವಾಗಿಲ್ಲ ಎಂದರು.
ವೇತನದ ಪರಿಹಾರ: ಕಳೆದೆರಡು ದಿನಗಳಿಗೆ ಹೋಲಿಸಿದರೆ ಈಗಿನ ಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಕೊಡಗಿನ ಸಂತ್ರಸ್ತರ ಪರಿಹಾರ ನಿಧಿಗೆ ರಾಜ್ಯದ ಪೊಲೀಸ್ ಸಿಬ್ಬಂದಿ 1 ದಿನದ ವೇತನ 5.82 ಕೋಟಿ ರೂ. ಮತ್ತು ಅಗ್ನಿಶಾಮಕ ದಳದ 10 ಸಾವಿರ ಸಿಬ್ಬಂದಿ 1 ದಿನದ ವೇತನ ನೀಡಲಿದ್ದು ಸುಮಾರು 7 ಕೋಟಿ ರೂ. ಆರ್ಥಿಕ ಪರಿಹಾರ ನೀಡಲಿದ್ದಾರೆ ಎಂದರು. ಕೊಡಗಿಗೆ ರವಾನಿಸಿರುವ ಪರಿಹಾರ ಸಾಮಗ್ರಿಗಳು ದುರ್ಬಳಕೆಯಾಗುತ್ತಿದೆ ಎಂದು ಕೇಳಿಬಂದಿರುವ ದೂರಿನ ಬಗ್ಗೆ ಗಮನ ಹರಿಸಲಾಗುತ್ತದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದಲೇ “ಫ್ರೀ ಫ್ಯಾಬ್ರಿಕ್’ ಮಾದರಿ ಮನೆ ನಿರ್ಮಿಸಿಕೊಡುವ ಕುರಿತು ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಮನೆ, ಆಸ್ತಿ ಕಳೆದುಕೊಂಡವರ ನೆರವಿಗೆ ಸರ್ಕಾರವಿದ್ದು, ಯಾರೂ ಧೈರ್ಯ ಕಳೆದುಕೊಳ್ಳುವುದು ಬೇಡ.
– ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ